ಸಾರಾಂಶ
966 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ: ಪಾದಯಾತ್ರೆ ಮುಂದೂಡಿಕೆ
ಕನ್ನಡಪ್ರಭ ವಾರ್ತೆ ಬಳ್ಳಾರಿಕುಡಿತಿನಿ ಭೂ ಸಂತ್ರಸ್ತರ ಬೇಡಿಕೆಗಳ ಕುರಿತು ಚರ್ಚಿಸಲು ಆ. 25 ಮತ್ತು 26 ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಜತೆ ಜಂಟಿ ಸಭೆ ಮಾಡಲು ನಿರ್ಧರಿಸಲಾಗಿದೆ ಎಂದು ಸಂಸದ ಈ.ತುಕಾರಾಂ ತಿಳಿಸಿದರು.
ತಾಲೂಕಿನ ಕುಡಿತಿನಿಯಲ್ಲಿ ಭೂ ಸಂತ್ರಸ್ತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಶನಿವಾರ ಆಗಮಿಸಿ ಹೋರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಭೂ ಸಂತ್ರಸ್ತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ ಈ ಸಂಬಂಧ ಹಲವು ಬಾರಿ ಚರ್ಚಿಸಲಾಗಿದೆ. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಬಳಿಯೂ ಚರ್ಚಿಸಲಾಗಿದ್ದು ಆ. 25 ಮತ್ತು 26 ರಂದು ಜಂಟಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ರೈತರ ಹಿತ ಕಾಯುವ ದಿಸೆಯಲ್ಲಿ ಸರ್ಕಾರ ಪೂರಕ ಹೆಜ್ಜೆ ಇಡಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸಂಸದರು ಭರವಸೆ ನೀಡಿದರು.ಕುಡಿತಿನಿ ಸುತ್ತಮುತ್ತಲ ಪ್ರದೇಶಗಳ ರೈತರು ಕೈಗಾರಿಕೆಗಳ ಸ್ಥಾಪನೆಗೆ ಜಮೀನು ನೀಡಿದ್ದು, ಈವರೆಗೆ ಕೈಗಾರಿಕೆ ಸ್ಥಾಪಿಸಲಾಗಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ವೈಜ್ಞಾನಿಕವಾದ ಬೆಲೆಯನ್ನು ಸಹ ಜಮೀನುಗಳಿಗೆ ನೀಡಲಾಗಿಲ್ಲ ಎಂದು ಕುಡಿತಿನಿ ಗ್ರಾಮದಲ್ಲಿ ಕಳೆದ 966 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆದಿದ್ದು, ಹೋರಾಟ ತೀವ್ರಗೊಳಿಸುವ ಹಿನ್ನೆಲೆ ಭೂ ಸಂತ್ರಸ್ತ ಹೋರಾಟ ಸಮಿತಿಯು ಸಂಸದರ ಮನೆಗೆ ಕುಡಿತನಿಯಿಂದ ಪಾದಯಾತ್ರೆ ನಡೆಸುವ ನಿರ್ಧಾರ ತೆಗೆದುಕೊಂಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಂಸದ ತುಕಾರಾಂ ರಾಜ್ಯ ಸರ್ಕಾರ ಭೂ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲಿದೆ ಎಂಬ ಭರವಸೆ ಹಿನ್ನೆಲೆ ಪಾದಯಾತ್ರೆ ಹೋರಾಟವನ್ನು ಹಿಂದಕ್ಕೆ ಪಡೆಯಲಾಯಿತು. ಬಳಿಕ ಮಾತನಾಡಿದ ಹೋರಾಟ ಸಮಿತಿಯ ಮುಖಮಡ ಯು.ಬಸವರಾಜ್ ಜಂಟಿ ಸಮಿತಿ ಸಭೆಯ ಬಳಿಕ ಆಗುವ ಪರಿಣಾಮ ನೋಡಿಕೊಂಡು ಮುಂದಿನ ಹಂತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು. ಹೋರಾಟ ಸಮಿತಿಯ ಜಿಲ್ಲಾ ಪ್ರಮುಖರಾದ ಜೆ.ಸತ್ಯಬಾಬು, ವಿ.ಎಸ್. ಶಿವಶಂಕರ್, ಜಂಗ್ಲಿಸಾಬ್, ತಿಪ್ಪೇಸ್ವಾಮಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಭೂ ಸಂತ್ರಸ್ತರು ಭಾಗವಹಿಸಿದ್ದರು.