ಸಾರಾಂಶ
ಉಡುಪಿ ಆಕಾಶವಾಣಿ ರಿಲೇ ಕೇಂದ್ರ ಮಾತ್ರವಲ್ಲ ಶಿವಮೊಗ್ಗ ಆಕಾಶವಾಣಿ ಕೇಂದ್ರಕ್ಕೂ ಜತೆಯಾಗಿಯೇ ಸ್ವತಃ ಪ್ರಧಾನ ಮಂತ್ರಿಗಳು ಜ.19ರಂದು ವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸುವ ಸಾಧ್ಯತೆ ಇದೆ. ಬಳಿಕ ಕೆಲವೇ ದಿನಗಳಲ್ಲಿ ಈ ರಿಲೇ ಕೇಂದ್ರ ಕಾರ್ಯಾರಂಭಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಕರಾವಳಿಯಲ್ಲಿ ಉಡುಪಿ ಜಿಲ್ಲೆಗೆ ಪ್ರತ್ಯೇಕ ಆಕಾಶವಾಣಿ ರಿಲೇ ಕೇಂದ್ರ ಮಂಜೂರು ಹಂತದಲ್ಲಿದೆ. ಇದರೊಂದಿಗೆ ಉಡುಪಿ ಜಿಲ್ಲೆಯ ಬಹುದಿನಗಳ ಬೇಡಿಕೆಯೊಂದು ಈಡೇರಿದಂತಾಗಲಿದೆ. ಉಡುಪಿ ಆಕಾಶವಾಣಿ ರಿಲೇ ಕೇಂದ್ರ ಮಾತ್ರವಲ್ಲ ಶಿವಮೊಗ್ಗ ಆಕಾಶವಾಣಿ ಕೇಂದ್ರಕ್ಕೂ ಜತೆಯಾಗಿಯೇ ಸ್ವತಃ ಪ್ರಧಾನ ಮಂತ್ರಿಗಳು ಜ.19ರಂದು ವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸುವ ಸಾಧ್ಯತೆ ಇದೆ. ಬಳಿಕ ಕೆಲವೇ ದಿನಗಳಲ್ಲಿ ಈ ರಿಲೇ ಕೇಂದ್ರ ಕಾರ್ಯಾರಂಭಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪ್ರತ್ಯೇಕ ರಿಲೇ ಕೇಂದ್ರ ಇದೇ ಮೊದಲು. ಇದಕ್ಕೂ ಮೊದಲು ಮಂಗಳೂರು ಮತ್ತು ಕಾರವಾರ ಆಕಾಶವಾಣಿ ಕೇಂದ್ರಗಳು ಸ್ವತಂತ್ರ ಕೇಂದ್ರಗಳು. ಅಂದರೆ ತಮ್ಮದೇ ಆದ ಕಾರ್ಯಕ್ರಮಗಳನ್ನು ಶೋತೃಗಳಿಗೆ ನೀಡಬಲ್ಲ ಕೇಂದ್ರಗಳು. ಬ್ರಹ್ಮಾವರ ಆಕಾಶವಾಣಿ ಕೇಂದ್ರ ಮಂಗಳೂರು ಆಕಾಶವಾಣಿ ಕೇಂದ್ರದ ಉಪ ಕೇಂದ್ರ. ಆದರೆ ಉಡುಪಿಗೆ ಮಂಜೂರಾಗಿರುವುದು ಹೊಸದಾಗಿ ಆಕಾಶವಾಣಿ ರಿಲೇ ಕೇಂದ್ರ. ಈ ಕೇಂದ್ರ ಬೇರೆ ಕೇಂದ್ರದ ಕಾರ್ಯಕ್ರಮಗಳನ್ನಷ್ಟೆ ಪ್ರಸಾರ ಮಾಡಲಿದೆ. ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಣೆ: ಉಡುಪಿಯಲ್ಲಿ ಈ ಹಿಂದೆ ದೂರದರ್ಶನ ಮರು ಪ್ರಸಾರ ಕೇಂದ್ರ ಕಾರ್ಯಾಚರಿಸುತ್ತಿತ್ತು. ಆ್ಯಂಟೆನಾ ಮೂಲಕ ಬೆಂಗಳೂರು ಹಾಗೂ ದೆಹಲಿ ದೂರದರ್ಶನ ಕಾರ್ಯಕ್ರಮಗಳನ್ನು ಇಲ್ಲಿ ಮರು ಪ್ರಸಾರ ಮಾಡಲಾಗುತ್ತಿತ್ತು. ಕ್ರಮೇಣ ಆ್ಯಂಟೆನಾ ಮೂಲಕ ಮರು ಪ್ರಸಾರ ಸ್ಥಗಿತಗೊಂಡ ಬಳಿಕ ಈ ಕೇಂದ್ರ ಕೂಡ ಪಾಳುಬಿದ್ದಿತ್ತು. ಆದರೆ ದೂರದರ್ಶನ ಮರು ಪ್ರಸಾರ ಕೇಂದ್ರದ ಆ್ಯಂಟೆನಾ ಈಗಲೂ ಹಾಗೆಯೇ ಇದೆ. ಹೀಗಾಗಿ ಅದೇ ಕೇಂದ್ರವನ್ನು ನವೀಕರಿಸಿ ಅದೇ ಆ್ಯಂಟೆನಾಗೆ ಒಂದು ಕಿಲೋ ವ್ಯಾಟ್‌ನ ಎಫ್‌ಎಂ ಟ್ರಾನ್ಸ್ ಮೀಟರ್ ಜೋಡಣೆಗೊಳಿಸಿ ಉಡುಪಿ ಆಕಾಶವಾಣಿ ರಿಲೇ ಪ್ರಸಾರಗೊಳಿಸುವುದು ಈಗಿನ ಯೋಜನೆ. ಈ ರಿಲೇ ಕೇಂದ್ರದ ಮರು ಪ್ರಸಾರದ ಸಾಮರ್ಥ್ಯ ವಾಯು ಮಾರ್ಗದಲ್ಲಿ 30 ಕಿ.ಮೀ. ಇರಲಿದೆ. ಉಡುಪಿ ಆಯ್ಕೆ ಯಾಕೆ?:ಮಂಗಳೂರು ಆಕಾಶವಾಣಿಯ ಉಪ ಕೇಂದ್ರ ಬ್ರಹ್ಮಾವರದಲ್ಲಿ ಇದೆ. ಆದರೆ 2018ರಲ್ಲಿ ಸಿಡಿಲಿಗೆ ಅದರ ಆ್ಯಂಟನಾ ಕುಸಿದುಬಿದ್ದು, ಸಾಮರ್ಥ್ಯ ಕ್ಷೀಣಗೊಂಡಿದೆ. ಇದರಿಂದಾಗಿ ಉಡುಪಿ ಸುತ್ತಮುತ್ತಲಿನ ಶೋತೃಗಳಿಗೆ ಆಕಾಶವಾಣಿ ದೂರದ ಮಾತಾಗಿದೆ. ತರಂಗಾಂತರ ಸಮಸ್ಯೆಯಿಂದ ಉಡುಪಿಯಲ್ಲಿ ಪ್ರತ್ಯೇಕ ರಿಲೇ ಕೇಂದ್ರ ಆರಂಭಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ವ್ಯಕ್ತವಾಗುತ್ತಿತ್ತು.ಮುಖ್ಯವಾಗಿ ಉಡುಪಿ ಧಾರ್ಮಿಕ, ಶೈಕ್ಷಣಿಕ ಹಬ್ ಹಾಗೂ ಪ್ರವಾಸಿ ಕೇಂದ್ರ. ನಕ್ಸಲ್ ಚಟುವಟಿಕೆಯೂ ಸೀತಾನದಿ, ಹೆಬ್ರಿ ಮತ್ತಿತರ ಕಡೆಗಳಲ್ಲಿ ಕಾಣಿಸಿತ್ತು. ಪ್ರಧಾನಿಯ ಮನ್‌ಕೀ ಬಾತ್ ಆರಂಭವಾದ ಮೇಲೆ ಅದನ್ನು ಪ್ರತಿ ಹಳ್ಳಿಗಳಿಗೆ ತಲುಪಿಸಲು ಆಕಾಶವಾಣಿ ಕೇಂದ್ರಗಳನ್ನು ಅಗತ್ಯವಿರುವ ಎಲ್ಲ ಕಡೆಗಳಲ್ಲಿ ತೆರೆಯುವ ಬಗ್ಗೆ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಉಡುಪಿ ಸಂಸರೂ ಆದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಕೇಂದ್ರ ವಾರ್ತಾ ಪ್ರಸಾರ ಇಲಾಖೆಗೆ ಪತ್ರ ಬರೆದು ಒತ್ತಾಯಿಸಿದ್ದರು. ಅವರ ಪರಿಶ್ರಮದ ಫಲವಾಗಿ ಕೊನೆಗೂ ಉಡುಪಿಗೆ ಪ್ರತ್ಯೇಕ ರಿಲೇ ಕೇಂದ್ರ ಮಂಜೂರು ಹಂತದಲ್ಲಿದೆ. ಎರಡು ವರ್ಷ ಹಿಂದೆ ಉಡುಪಿಗೆ ಆಕಾಶವಾಣಿ ರಿಲೇ ಕೇಂದ್ರ ಮಂಜೂರುಗೊಂಡಿದ್ದು, ಆದರೆ ಏಕಾಏಕಿ ಅದನ್ನು ಚಿಕ್ಕಮಗಳೂರಿಗೆ ವರ್ಗಾಯಿಸಲಾಯಿತು. ಅಲ್ಲಿ ಅನುಷ್ಠಾನಗೊಳ್ಳದಿದ್ದಾಗ ಅದನ್ನೇ ಮತ್ತೆ ಉಡುಪಿಗೆ ವರ್ಗಾಯಿಸಲಾಯಿತು ಎಂದು ಮೂಲಗಳು ಹೇಳುತ್ತಿವೆ. ಉಡುಪಿಗೆ ಆಕಾಶವಾಣಿ ರಿಲೇ ಕೇಂದ್ರ ಮಂಜೂರಾತಿಗೆ ಅಸೋಸಿಯೇಷನ್ ಆಫ್ ಆಕಾಶವಾಣಿ ಮತ್ತು ದೂರದರ್ಶನ ಎಂಜಿನಿಯರ್ಸ್ ಎಂಪ್ಲಾಯಿಸ್ ಸಂಘಟನೆ ಕೂಡ ಪ್ರಯತ್ನ ನಡೆಸಿದೆ ಎಂದು ವಕ್ತಾರ ಚಂದ್ರಶೇಖರ್ ತಿಳಿಸಿದ್ದಾರೆ.ಉಡುಪಿಯಲ್ಲಿ ಆಕಾಶವಾಣಿಯ ರಿಲೇ ಕೇಂದ್ರ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಮಂಜೂರಾತಿ ಹಂತದಲ್ಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜ.19ರಂದು ಪ್ರಧಾನಿಯವರು ರಿಲೇ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಲೆ, ಸಂಸ್ಕೃತಿ ಸೇರಿದಂತೆ ಕೇಂದ್ರ ಸರ್ಕಾರದ ಮನ್ ಕಿ ಬಾತ್ ಮತ್ತಿತರ ಜನೋಪಯೋಗಿ ಕಾರ್ಯಕ್ರಮಗಳು ಜನರನ್ನು ತಲುಪಲು ಇದು ಮತ್ತಷ್ಟು ಸಹಕಾರಿಯಾಗಲಿದೆ ಎನ್ನುತ್ತಾರೆ ಕೇಂದ್ರ ಸಚಿವೆ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ.