ತಂಬ್ರಹಳ್ಳಿಯಲ್ಲಿ ಡಿಗ್ರಿ ಕಾಲೇಜು ಆರಂಭಿಸಲು ಸಂಸದರಿಗೆ ಒತ್ತಾಯ

| Published : Sep 29 2024, 01:31 AM IST

ತಂಬ್ರಹಳ್ಳಿಯಲ್ಲಿ ಡಿಗ್ರಿ ಕಾಲೇಜು ಆರಂಭಿಸಲು ಸಂಸದರಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸುತ್ತಲಿನ ಗ್ರಾಮಗಳಿಗೆ ತಂಬ್ರಹಳ್ಳಿ ಕೇಂದ್ರ ಸ್ಥಾನವಾಗಿದೆ.

ಸಂಡೂರು: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳ ಮುಖಂಡರು ಶನಿವಾರ ಸಂಡೂರು ಹೊರವಲಯದಲ್ಲಿರುವ ಕೃಷ್ಣಾನಗರದಲ್ಲಿ ಸಂಸದ ಈ.ತುಕಾರಾಂ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ತಂಬ್ರಹಳ್ಳಿ ಗ್ರಾಮದ ಮಾಜಿ ಜಿಪಂ ಸದಸ್ಯ ಅಕ್ಕಿ ತೋಟೇಶ, ಸುತ್ತಲಿನ ಗ್ರಾಮಗಳಿಗೆ ತಂಬ್ರಹಳ್ಳಿ ಕೇಂದ್ರ ಸ್ಥಾನವಾಗಿದೆ. ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲದ ಕಾರಣ ಗ್ರಾಮ ಸೇರಿ ಸುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕಾಗಿ ಹಗರಿಬೊಮ್ಮನಹಳ್ಳಿ, ಹೊಸಪೇಟೆ ಹಾಗೂ ಹರಪನಹಳ್ಳಿಗೆ ಹೋಗಿ ಬರುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದರು.

ತಂಬ್ರಹಳ್ಳಿ ಗ್ರಾಮದಲ್ಲಿ ಗ್ರಾಮದ ದಾನಿಗಳಾದ ಅಕ್ಕಿ ಕೊಟ್ರಪ್ಪ ತೋಟಪ್ಪ ಅವರ ಹೆಸರಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾದರೆ ₹೨೦ ಲಕ್ಷ ದೇಣಿಗೆಯನ್ನು ನೀಡಲು ಅವರ ಕುಟುಂಬದವರು ಒಪ್ಪಿದ್ದಾರೆ. ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಿಗೆ ಶಿಫಾರಸು ಮಾಡಿ, ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮುಖಂಡರು ತಂಬ್ರಹಳ್ಳಿ ಭಾಗಕ್ಕೆ ೨ನೇ ಹಂತದ ಏತ ನೀರಾವರಿ ಯೋಜನೆ ಮಂಜೂರಾತಿ ನೀಡಿ ಅನುಷ್ಠಾನಗೊಳಿಸಲು ಹಾಗೂ ತಂಬ್ರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ಮುಖ್ಯಮಂತ್ರಿಗೆ, ಸಣ್ಣ ನೀರಾವರಿ ಸಚಿವರಿಗೆ, ಆರೋಗ್ಯ ಸಚಿವರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿ, ಈ ಯೋಜನೆಗಳನ್ನು ಅನುಷ್ಠಾನಗೊಳ್ಳುವಂತೆ ಕ್ರಮಕೈಗೊಂಡು ರೈತರಿಗೆ, ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.

ಮನವಿ ಸ್ವೀಕರಿಸಿದ ಸಂಸದರು, ನಂದಿಹಳ್ಳಿ ಗ್ರಾಮಕ್ಕೆ ಈಗಾಗಲೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗಿದೆ. ಸಿಎಂ ಜತೆ ಚರ್ಚಿಸಿ ತಂಬ್ರಹಳ್ಳಿ ಗ್ರಾಮಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿಸಿಕೊಡುವುದಲ್ಲದೆ, ಕಾಲೇಜಿಗೆ ₹೧ ಕೋಟಿ ಅನುದಾನ ಮಂಜೂರು ಮಾಡಿಸಿಕೊಡುವೆ. ಗ್ರಾಮದ ೨ನೇ ಹಂತರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಕುರಿತಂತೆ ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಬಾವಿ ಬೆಟ್ಟಪ್ಪ, ಅಕ್ಕಿ ಶಿವಣ್ಣ, ಹಲವು ಮುಖಂಡರು, ವಿದ್ಯಾರ್ಥಿಗಳು, ಬಪ್ಪಕಾನ್ ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.