ಮಡಿಕೇರಿ: ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ, ಮೈಸೂರು–ಕೊಡಗು ಭಾಗಕ್ಕೆ ಸಂಬಂಧಿಸಿದ ಎರಡು ಮಹತ್ವದ ವಿಷಯಗಳ ಕುರಿತು ಮನವಿ ಸಲ್ಲಿಸಿದರು. ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನೆ–ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದು ಹಾಗೂ ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ನಗರ ವನ (ನಗರ್ ವನ್) ಯೋಜನೆ ಜಾರಿಗೊಳಿಸುವುದು ಈ ಮನವಿಗಳ ಪ್ರಮುಖ ಅಂಶ.

ಸಭೆಯಲ್ಲಿ ಮಾತನಾಡಿದ ಯದುವೀರ್ ಒಡೆಯರ್ ಅವರು, ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಆನೆಗಳು ಕೃಷಿ ಭೂಮಿಗಳು ಮತ್ತು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ನಿರಂತರವಾಗಿ ಹೆಚ್ಚುತ್ತಿದ್ದು, ಇದು ಜಿಲ್ಲೆಯ ಜನರ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಸಚಿವರ ಗಮನಕ್ಕೆ ತಂದರು.ಆನೆಗಳ ದಾಳಿಯಿಂದ ಮಾನವ ಜೀವ ಹಾನಿ, ಗಾಯಗಳು, ಬೆಳೆ ನಷ್ಟ, ಆಸ್ತಿ ಹಾನಿ ಮತ್ತು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ವಿವರಿಸಿದರು. ವಿಶೇಷವಾಗಿ ಅರಣ್ಯದ ಅಂಚಿನ ಗ್ರಾಮಗಳಲ್ಲಿ ವಾಸಿಸುವ ರೈತರು, ತೋಟಗಾರರು ಮತ್ತು ಕಾರ್ಮಿಕರು ಈ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಆನೆ-ಮಾನವ ಸಂಘರ್ಷವನ್ನು ಕಡಿಮೆಗೊಳಿಸಲು ಸಮಗ್ರ ಹಾಗೂ ದೀರ್ಘ ಕಾಲೀನ ಕಾರ್ಯತಂತ್ರವನ್ನು ರೂಪಿಸಲು ಕೇಂದ್ರ ಸರ್ಕಾರದ ನೆರವು ಅಗತ್ಯವಿದೆ ಎಂದು ಅವರು ಮನವಿ ಮಾಡಿದರು. ಆನೆ ತಡೆಗೋಡೆಗಳ ಬಲವರ್ಧನೆ, ಸೌರ ಬೇಲಿ ವ್ಯವಸ್ಥೆ, ಆನೆಗಳ ಚಲನ ವಲನದ ವೈಜ್ಞಾನಿಕ ಮೇಲ್ವಿಚಾರಣೆ, ಮುನ್ನೆಚ್ಚರಿಕೆ ವ್ಯವಸ್ಥೆ, ಅರಣ್ಯ ವಾಸ ಸ್ಥಳಗಳ ಸುಧಾರಣೆ, ತ್ವರಿತ ಪ್ರತಿಕ್ರಿಯಾ ತಂಡಗಳ ರಚನೆ ಹಾಗೂ ಪೀಡಿತ ಕುಟುಂಬಗಳಿಗೆ ಮತ್ತು ರೈತರಿಗೆ ಸೂಕ್ತ ಪರಿಹಾರ ನೀಡುವ ವ್ಯವಸ್ಥೆಯನ್ನು ಬಲಪಡಿಸುವಂತೆ ಕೋರಿದರು.

ಸಭೆಯ ನಂತರ ಮಾತನಾಡಿದ ಯದುವೀರ್ ಒಡೆಯರ್ ಅವರು, ಕೊಡಗಿನ ಆನೆ-ಮಾನವ ಸಂಘರ್ಷ ಮತ್ತು ಮೈಸೂರಿನ ನಗರ ಹಸಿರು ಮೂಲಸೌಕರ್ಯ ಅಭಿವೃದ್ಧಿ ಎರಡೂ ವಿಷಯಗಳು ತಕ್ಷಣದ ಗಮನಕ್ಕೆ ಅರ್ಹವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಜನರ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಸಮನ್ವಯಗೊಳಿಸುವ ನಿಟ್ಟಿನಲ್ಲಿ ತಾವು ನಿರಂತರವಾಗಿ ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದರು.ಸಂಸದರ ಮನವಿಗಳನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವ ಭೂಪೇಂದ್ರ ಯಾದವ್ ಭರವಸೆ ನೀಡಿದರು.