ಪಾರಂಪರಿಕ ರಸ್ತೆಗಳಲ್ಲಿ ಫ್ಲೈ ಓವರ್‌ಗೆ ಸಂಸದ ಯದುವೀರ್‌ ವಿರೋಧ

| Published : Nov 06 2025, 01:15 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊನ್ನೆ ನಡೆಸಿದ ಗ್ರೇಟರ್‌ ಮೈಸೂರು ಸಭೆಯಲ್ಲಿ ಮೈಸೂರಿನ ಪಾರಂಪರಿಕತೆ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅದರಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಜನರ ವಿರೋಧದ ನಡುವೆ ಫ್ಲೈ ಓವರ್ ಕಾಮಗಾರಿ ಕೈಗೆತ್ತಿಕೊಂಡರೆ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ. ಜನರ ಸಹಕಾರದೊಂದಿಗೆ ಹೋರಾಟ ರೂಪಿಸುತ್ತೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಪಾರಂಪರಿಕ ರಸ್ತೆಗಳಾದ ಜೆ.ಎಲ್‌.ಬಿ ರಸ್ತೆ ಮತ್ತು ವಿನೋಬಾ ರಸ್ತೆಯಲ್ಲಿ ಫ್ಲೈ ಓವರ್‌ ನಿರ್ಮಿಸಬೇಕು ಎಂಬ ಸರ್ಕಾರದ ಉದ್ದೇಶಕ್ಕೆ ನಮ್ಮ ವಿರೋಧವಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನೋಬಾ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಿಸಲು ಮುಂದಾದರೆ ಹಲವು ಮರಗಳನ್ನು ತೆಗೆಯಬೇಕಾಗುತ್ತದೆ. ಹಾಗಾಗಿ ಈ ಮಾರ್ಗದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಬಾರದು ಎಂದರು.

ಜನಾಭಿಪ್ರಾಯ ಪಡೆಯದೇ ಈ ಮಾರ್ಗದಲ್ಲಿ ಫ್ಲೈ ಓವರ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಜನಪ್ರತಿನಿಧಿಗಳಿಗೂ ಈ ವಿಚಾರವಾಗಿ ಸರಿಯಾದ ಮಾಹಿತಿ ಇಲ್ಲ. ಆದರೂ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಫ್ಲೈ ಓವರ್ ನಿರ್ಮಾಣವೇ ಶಾಶ್ವತ ಪರಿಹಾರವಲ್ಲ ಎಂದರು.

ಎರಡೂ ಕಡೆ ಮೇಲ್ಸೇತುವೆ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ರಸ್ತೆಗಳ ಹಲವು ಕಡೆ ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಈ ಎರಡು ರಸ್ತೆಗಳು ಪಾರಂಪರಿಕಾ ರಸ್ತೆಗಳಾಗಿದ್ದೂ, ಅವುಗಳನ್ನು ಹಾಗೇಯೇ ಉಳಿಸಿಕೊಳ್ಳಬೇಕು. ಅಭಿವೃದ್ಧಿ ನೆಪದಲ್ಲಿ ಮೈಸೂರಿನ ಸೌಂದರ್ಯ ಹಾಳು ಮಾಡಬಾರದು. ಪಾರಂಪರಿಕ ನಗರಿಯ ಗುರುತು ಉಳಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊನ್ನೆ ನಡೆಸಿದ ಗ್ರೇಟರ್‌ ಮೈಸೂರು ಸಭೆಯಲ್ಲಿ ಮೈಸೂರಿನ ಪಾರಂಪರಿಕತೆ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅದರಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಜನರ ವಿರೋಧದ ನಡುವೆ ಫ್ಲೈ ಓವರ್ ಕಾಮಗಾರಿ ಕೈಗೆತ್ತಿಕೊಂಡರೆ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ. ಜನರ ಸಹಕಾರದೊಂದಿಗೆ ಹೋರಾಟ ರೂಪಿಸುತ್ತೇವೆ ಎಂದರು.

ಮೆಟ್ರೋ ವಿರೋಧವಿಲ್ಲ:

ನಗರದ ಭವಿಷ್ಯದ ಬೆಳವಣಿಗೆಯ ದೃಷ್ಟಿ ಇಟ್ಟುಕೊಂಡು ಮೆಟ್ರೋ ಮಾರ್ಗ ನಿರ್ಮಿಸಲು ನಮ್ಮ ವಿರೋಧವಿಲ್ಲ. ಆದರೆ ಮುಂಬೈ ಮಾದರಿಯಲ್ಲಿ ಭೂಮಿಯ ಒಳಗೆ ಸುರಂಗ ಮಾಡಿ ಮೆಟ್ರೋ ನಿರ್ಮಿಸಬೇಕು. ಮೈಸೂರಿನ ಜನಸಂಖ್ಯೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಗ್ರೇಟರ್ ಮೈಸೂರು ನಿರ್ಮಾಣದ ವೇಳೆ ಸ್ಥಳೀಯರ ಅನುಕೂಲ ನೋಡಬೇಕು. ಗ್ರೇಟರ್ ಮೈಸೂರಿನಿಂದ ನಗರಕ್ಕೆ ಒಳಿತಾಗಲಿದೆ. ಆದರೆ ಗ್ರೇಟರ್ ಮೈಸೂರು ನಿರ್ಮಾಣ ಮಾಡುವಾಗ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಬೆಂಗಳೂರು ಮಾದರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಬಾರದು ಎಂದು ಅವರು ಎಚ್ಚರಿಸಿದರು.

ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಲಿ:

ಕಬ್ಬಿಗೆ ವೈಜ್ಞಾನಿವಾಗಿ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ಮನವಿಗೆ ಸ್ಪಂದಿಸಬೇಕು. ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದಿನಿಂದಲೂ ಏನೇ ಆದರೂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೇ ಆರೋಪಿಸುತ್ತಿದ್ದರು. ಅದನ್ನು ಬಿಟ್ಟು ಅವರು ರೈತರ ಸಮಸ್ಯೆ ಬಗೆಹರಿಸಬೇಕು ಎಂದರು.

ಜಿಲ್ಲಾಧಿಕಾರಿ ಎದುರು ಪ್ರತಿಷ್ಠಾಪಿಸಿರುವ ಪ್ರತಿಮೆಯು ಡಿ. ದೇವರಾಜ ಅರಸು ಅವರನ್ನು ಹೋಲುತ್ತಿಲ್ಲ. ಈ ಬಗ್ಗೆ ದೇವರಾಜ ಅರಸು ಅವರ ಪುತ್ರಿ ಭಾರತಿ ಅರಸು ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಮೆ ಅನಾವರಣಕ್ಕೂ ಮುನ್ನಾ ಸಂಬಂಧಪಟ್ಟವರು ಪರಿಶೀಲಿಸಬೇಕಿತ್ತು. ಪ್ರತಿಮೆ ಲೋಕಾರ್ಪಣೆ ಬಳಿಕ ಇದು ಗಮನಕ್ಕೆ ಬಂದಿದೆ. ಹಾಗಾಗಿ ಪ್ರತಿಮೆಯಲ್ಲಿ ಆಗಿರುವ ಲೋಪ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮನ್ನು ದೇವರಾಜ ಅರಸು ಅವರಿಗೆ ಹೋಲಿಸಿಕೊಳ್ಳುತ್ತಾರೆ. ಅರಸು ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರೂ ಅವರ ಪ್ರತಿಮೆಯಲ್ಲಿ ಆದ ತಪ್ಪನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಹುಲ್‌ ಹೇಳಿಗೆ ಸುಳ್ಳು:

ಶೇ.10ರಷ್ಟು ಜನ ದೇಶದ ಸೇನೆ ನಿಭಾಯಿಸುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಸುಳ್ಳನ್ನು ಸತ್ಯ ಮಾಡಲು ಹೋಗುತ್ತಾರೆ. ಸುಳ್ಳು ಎಷ್ಟು ಬಾರಿ ಹೇಳಿದರು ಸುಳ್ಳೇ. ಅದು ಸತ್ಯ ಆಗುವುದಿಲ್ಲ. ಅವರ ಹೇಳಿಕೆ ಯಾವಾಗಲೂ ಇದೇ ರೀತಿ ಇರುತ್ತವೆ ಎಂದು ಟೀಕಿಸಿದರು.