ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣದ ಕುರಿತಂತೆ ಏನೇ ಇದ್ದರೂ ತನಿಖಾ ವರದಿಗಾಗಿ ನಾವು ಕಾಯಬೇಕಾಗುತ್ತದೆ. ನಂತರ ಹೇಳಿಕೆ ಕೊಡುತ್ತೇನೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣದ ಕುರಿತಂತೆ ಏನೇ ಇದ್ದರೂ ತನಿಖಾ ವರದಿಗಾಗಿ ನಾವು ಕಾಯಬೇಕಾಗುತ್ತದೆ. ನಂತರ ಹೇಳಿಕೆ ಕೊಡುತ್ತೇನೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿಳಿಸಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಅರಮನೆ ಬಳಿಯ ಸ್ಪೋಟ ಪ್ರಕರಣದ ಕುರಿತಂತೆ ತಜ್ಞರ ವರದಿ ಬಂದ ಬಳಿಕ ನಮ್ಮ ಹೇಳಿಕೆ ಕೊಡೋಣ. ಸದ್ಯಕ್ಕೆ ಸುಮ್ಮನೇ ಹೇಳಿಕೆ ಕೊಡುವುದು ಸರಿಯಾಗುವುದಿಲ್ಲ. ಮೊದಲು ತಜ್ಞರಿಂದ ಅಧಿಕೃತ ವರದಿ ಬರಲಿ ಎಂದರು.
ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಒತ್ತುವರಿ ತೆರವು ವಿಚಾರದಲ್ಲಿ ಕೇರಳ ಸರ್ಕಾರ ಮಧ್ಯ ಪ್ರವೇಶಿಸಿದೆ. ಕಾನೂನು ಪ್ರಕಾರ ರಾಜ್ಯ ಸರ್ಕಾರ ಮುಂದುವರಿಯುವುದು ಸೂಕ್ತ. ನೆರೆ ರಾಜ್ಯದ ತಂತ್ರಗಾರಿಕೆ ಇತ್ಯಾದಿಯನ್ನು ಆ ರಾಜ್ಯದವರಿಗೆ ಕೇಳಬೇಕು. ಅಕ್ರಮವೋ, ಅಧಿಕೃತವೋ ನಮ್ಮ ನ್ಯಾಯಾಲಯ, ಅಧಿಕಾರಿಗಳು ತೀರ್ಮಾನಿಸುತ್ತಾರೆ. ಕಾಂಗ್ರೆಸ್ ತಂತ್ರಗಾರಿಕೆ ಬಗ್ಗೆ ಬಗ್ಗೆ ನಾನು ಹೇಳುವುದಕ್ಕೆ ಬರುವುದಿಲ್ಲ. ಕಾನೂನಾತ್ಮಕವಾಗಿ ಕೆಲಸ ಮಾಡಿಯೆಂದಷ್ಟೇ ನಾವು ಹೇಳಬಹುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಿ, ಡ್ರಗ್ಸ್ ಉತ್ಪಾದನೆ ಮಾಡುತ್ತಿದ್ದ ಘಟಕ ಬಯಲಿಗೆಳೆದಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಗೂ ನಮ್ಮ ರಾಜ್ಯ ಸರ್ಕಾರ ಸ್ವಾತಂತ್ರ್ಯ ನೀಡಬೇಕು. ಕೆಲವು ವಿಚಾರದಲ್ಲಿ ತನಿಖೆ ಪ್ರಕಾರ ಮಹಾರಾಷ್ಟ್ರ ಪೊಲೀಸರಿಗೆ ಸ್ವಾತಂತ್ರ್ಯವಿದೆ. ಇದೇ ರೀತಿ ಮೈಸೂರಿನಲ್ಲೂ ಮಹಾರಾಷ್ಟ್ರ ಪೊಲೀಸರು ಡ್ರಗ್ಸ್ ಉತ್ಪಾದನೆ ಮಾಡುತ್ತಿದ್ದ ಸ್ಥಳದ ಮೇಲೆ ಹಿಂದೆ ಕಾರ್ಯಾಚರಣೆ ನಡೆಸಿದ್ದರು ಎಂದು ತಿಳಿಸಿದರು.
ನಮ್ಮಲ್ಲೂ ಒಳ್ಳೆಯ ಗುಪ್ತಚರ ಇಲಾಖೆ, ವಿಭಾಗವಿದೆ. ಕಾನೂನು ಸುವ್ಯವಸ್ಥೆ ಇದೆ. ನಮ್ಮ ಪೊಲೀಸರಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಪೊಲೀಸರು ಕೊಟ್ಟ ಸಲಹೆ, ವರದಿ ಮೇಲೆ ಸರ್ಕಾರದ ನಿರ್ಧಾರ ಕೈಗೊಳ್ಳಬೇಕು. ಆಳುವವರೇ ಪೊಲೀಸರಿಗೆ ನಿರ್ದೇಶನ ಕೊಟ್ಟರೆ ಎಲ್ಲಿಯೋ ಒಂದು ಕಡೆ ಹಿನ್ನಡೆಯಾಗುತ್ತದೆ. ಹಾಗಾಗಿ ಪೊಲೀಸ್ ಇಲಾಖೆಗೆ ಸ್ವಾತಂತ್ರ್ಯ ನೀಡಬೇಕು ಎಂದು ಪುನರುಚ್ಛರಿಸಿದರು.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ಸಿನವರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗೆ ಜನರನ್ನು ದಿಕ್ಕುತಪ್ಪಿಸುವುದೇ ಕಾಂಗ್ರೆಸ್ಸಿನ ತಂತ್ರವಾಗಿದೆ. ವಿಕಸಿತ ಭಾರತವು ಮಹಾತ್ಮ ಗಾಂಧೀಜಿ ಕನಸಾಗಿದೆ. ಗಾಂಧೀಜಿ ಆದರ್ಶಗಳು ಜೀವಿತವಾಗಿವೆ. ವಿಕಸಿತ ಭಾರತದಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಮಹಾತ್ಮ ಗಾಂಧಿ ಹೆಸರು ಜೀವಿತವಾಗಿದೆ. ಎಸ್ಐಆರ್ ವಿರುದ್ಧ ಕಾಂಗ್ರೆಸ್ ಹೋರಾಟವೂ ವಿಫಲವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಮುಖಂಡರಾದ ಶಿವರಾಜ ಪಾಟೀಲ, ಶಾಮನೂರು ಹರೀಶ ಇತರರು ಇದ್ದರು.ಕುರ್ಚಿಗಾಗಿ ಹಗ್ಗ ಜಗ್ಗಾಟ ಸರಿಯಲ್ಲ
ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ಸರ್ಕಾರದಲ್ಲಿರುವವರು ಹಗ್ಗ ಜಗ್ಗಾಟದಲ್ಲಿ ತೊಡಗಿರುವುದು ಖಂಡನೀಯ ಎಂದು ಸಂಸದ ಯಧುವೀರ ಒಡೆಯರ್ ಬೇಸರ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ಸಿಗರಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿರುವುದು ಖಂಡನೀಯ. ಕುರ್ಚಿ ಕಾದಾಟದಿಂದ ರಾಜ್ಯದ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ ಎಂದರು.
ರಾಜ್ಯದ ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡಬೇಕಾಗಿರುವುದು ಯಾವುದೇ ಸರ್ಕಾರದ ಪ್ರಥಮಾದ್ಯತೆಯಾಗಬೇಕು. ವಿಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದು, ಭವಿಷ್ಯದಲ್ಲೂ ನಾವು ಸಮರ್ಥವಾಗಿ ಕೆಲಸ ಮಾಡುತ್ತೇವೆ. ನಮ್ಮದು ಆಡಳಿತ ಪಕ್ಷವಾಗಿರಲಿ, ವಿಪಕ್ಷವೇ ಆಗಿರಲಿ ಸಮರ್ಥವಾಗಿ ಕೆಲಸವನ್ನೂ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.