ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿಯ ತಮ್ಮ ಶಾಖಾ ಮಠವಾದ ಮಲ್ಲಿಕಾರ್ಜುನ ಮಠದಲ್ಲಿ ಎರಡು ದಿನಗಳಿಂದ ತಂಗಿದ್ದ ಮಹಾರಾಷ್ಟ್ರದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶನಿವಾರ ತಮ್ಮ ಮೂಲ ಮಠವಾದ ಕನ್ಹೇರಿಗೆ ತೆರಳಿದರು.ಲಿಂಗಾಯತ ಶ್ರೀಗಳ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಬಾಗಲಕೋಟೆ ಜಿಲ್ಲಾ ಪ್ರವೇಶ ನಿರ್ಬಂಧಿಸಿ ಆದೇಶಿಸಿ ಜಿಲ್ಲಾಡಳಿತ ಶುಕ್ರವಾರ ಆದೇಶ ಹೊರಡಿಸಿತ್ತು. ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿಯ ತಮ್ಮ ಶಾಖಾ ಮಠವಾದ ಮಲ್ಲಿಕಾರ್ಜುನ ಮಠದಲ್ಲಿ ಎರಡು ದಿನದಿಂದ ಕನ್ಹೇರಿ ಶ್ರೀಗಳು ವಾಸವಿದ್ದರು. ಶುಕ್ರವಾರ ಸಂಜೆ ಬೀಳಗಿ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶದ ಪ್ರತಿಯೊಂದಿಗೆ ಚಿಕ್ಕಾಲಗುಂಡಿಯ ಮಠಕ್ಕೆ ಆಗಮಿಸಿ ಜಿಲ್ಲಾಡಳಿತ ಆದೇಶದ ಪ್ರತಿ ನೀಡಿ ತಕ್ಷಣವೇ ಮಠ ತೊರೆಯುವಂತೆ ಒಂದು ಗಂಟೆಯ ಸಮಯ ನೀಡಿದ್ದರು. ಆದರೆ ಇದಕ್ಕೆ ಒಪ್ಪದ ಶ್ರೀಗಳು ನಾನಿರುವುದು ನಮ್ಮ ಶಾಖಾ ಮಠದಲ್ಲಿ ನಾನೇಕೇ ಹೋಗಲಿ? ಬೇಕಾದರೆ ಬಂಧಿಸಿ ಜೈಲಿಗೆ ಹಾಕಿ ಎಂದು ಪಟ್ಟು ಹಿಡಿದಿದ ಕಾರಣ ಅಧಿಕಾರಿಗಳು ಮಠದಿಂದ ವಾಪಸಾಗಿದ್ದರು. ಶ್ರೀಗಳ ಈ ಪಟ್ಟು ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.ಕೊನೆಗೆ ಜಿಲ್ಲಾಡಳಿತ ಶ್ರೀಗಳ ಮೇಲಿನ ಜಿಲ್ಲಾ ಪ್ರವೇಶ ನಿಷೇಧ ಆದೇಶ ವಾಪಸ್ ಪಡೆಯಲು ಒಪ್ಪಿದ್ದರಿಂದ ಕನ್ಹೇರಿ ಶ್ರೀಗಳು, ಶನಿವಾರ ಬೆಳಗ್ಗೆ ೫.೪೫ ವೇಳೆಗೆ ಶ್ರೀಗಳು ಚಿಕ್ಕಾಲಗುಂಡಿಯಿಂದ ತಮ್ಮ ಮೂಲಮಠವಾದ ಮಹಾರಾಷ್ಟ್ರದ ಕನ್ಹೇರಿಯತ್ತ ಪ್ರಯಾಣ ಬೆಳೆಸಿದರು.