ಸಮಾಜ ಸನ್ಮಾರ್ಗದಲ್ಲಿ ನಡೆಸಲು ಶ್ರಮಿಸಿದ ಮಲ್ಲಿಕಾರ್ಜುನ ಶ್ರೀ

| Published : Feb 16 2024, 01:51 AM IST

ಸಮಾಜ ಸನ್ಮಾರ್ಗದಲ್ಲಿ ನಡೆಸಲು ಶ್ರಮಿಸಿದ ಮಲ್ಲಿಕಾರ್ಜುನ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸಾಣೇಹಳ್ಳಿಯಲ್ಲಿ ನಡೆದ ತರಳಬಾಳು ಜಗದ್ಗುರು ಬೃಹನ್ಮಠದ ಚರಪಟ್ಟಾಧ್ಯಕ್ಷರಾದ ಮಲ್ಲಿಕಾರ್ಜುನ ಶ್ರೀಗಳ 16ನೆಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಹೊಸದುರ್ಗ

ಕಾಯಕ ಯೋಗಿ, ಇಷ್ಟಲಿಂಗ ನಿಷ್ಠರು, ಸಮಾಜ ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗಲು ಬೇಕಾದ ಶಕ್ತಿ ತುಂಬಿದವರು ಮಲ್ಲಿಕಾರ್ಜುನ ಶ್ರೀಗಳು ಎಂದು ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿ ಶಿವಕುಮಾರ ರಂಗಮಂದಿರದಲ್ಲಿ ಗುರುವಾರ ನಡೆದ ತರಳಬಾಳು ಜಗದ್ಗುರು ಬೃಹನ್ಮಠದ ಚರಪಟ್ಟಾಧ್ಯಕ್ಷರಾದ ಮಲ್ಲಿಕಾರ್ಜುನ ಶ್ರೀಗಳ 16ನೆಯ ಶ್ರದ್ಧಾಂಜಲಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಲ್ಲಿಕಾರ್ಜುನ ಶ್ರೀ ಮಠದಲ್ಲಿದ್ದುದೇ ಕಡಿಮೆ. ಸದಾ ಊರೂರು ಸುತ್ತಿ ಮಠಕ್ಕೆ ಬೇಕಾದ ದವಸ ಧಾನ್ಯಗಳನ್ನು ಸಂಗ್ರಹಿಸುತ್ತಿದ್ದ ಶ್ರೀಗಳು ಅಲ್ಲಿನ ಭಕ್ತರ ಕಷ್ಟಗಳಿಗೆ ಸ್ಪಂದಿಸಿ ಭಕ್ತರ ಕೃಷಿಗೆ ಪೂರಕವಾದ ಮಾರ್ಗದರ್ಶನ ನೀಡುತ್ತಿದ್ದುದರ ಪರಿಣಾಮ ಇಂದು ಅನೇಕ ಭಕ್ತರು ತೆಂಗು ಸೇರಿ ಅಡಿಕೆ ತೋಟ ಮಾಡಿಕೊಂಡು ಆರ್ಥಿಕ ಸಬಲರಾಗಿದ್ದಾರೆ. ಅಲ್ಲದೆ ಊರೂರು ಸುತ್ತುವ ವೇಳೆ ನ್ಯಾಯಪೀಠಗಳನ್ನು ನಡೆಸಿ ಗ್ರಾಮಗಳಲ್ಲಿನ ವ್ಯಾಜ್ಯಗಳನ್ನು ಬಗೆಹರಿಸುವುದನ್ನು ರೂಢಿಸಿಕೊಂಡಿದ್ದರು. ಅಲ್ಲದೆ ನೀತಿವಂತರಾಗಬೇಕು, ಸತ್ಯವಂತರಾಗಬೇಕು, ಪ್ರಾಮಾಣಿಕರಾಗಬೇಕು, ಚೆನ್ನಾಗಿ ದುಡಿಯಬೇಕು, ಮಠ ನಿಮ್ಮದು ಎಂದು ಭಾವಿಸಿಕೊಳ್ಳಬೇಕು, ಮಠದ ಶಕ್ತಿಯೇ ಭಕ್ತರು ಎನ್ನುವುದನ್ನು ಜನರಿಗೆ ಮನವರಿಕೆ ಮಾಡುತ್ತಿದ್ದರು ಎಂದರು.

ನಿವೃತ್ತ ಪ್ರಾಚಾರ್ಯ ಐ.ಜಿ. ಚಂದ್ರಶೇಖರಯ್ಯ ಮಾತನಾಡಿ ಮಲ್ಲಿಕಾರ್ಜುನ ಶ್ರೀಗಳು ಚಕ್ಕಡಿಗಾಡಿಯಲ್ಲಿ ನಾಡಿನಾದ್ಯಂತ ಗ್ರಾಮಗಳಿಗೆ ಭೇಟಿ ನೀಡಿ ಕಾಣಿಕೆ ಸಂಗ್ರಹ ಮಾಡುತ್ತಿದ್ದರು. ಶ್ರೀಗಳು ನಿಜವಾದ ಲಿಂಗವಂತ ಆಚಾರ್ಯರು. ಆಧ್ಯಾತ್ಮಿಕ ಶಕ್ತಿ ಹೊಂದಿದವರು. ಅವರ ಆಶೀರ್ವಚನದ ವಸ್ತು ಬಸವಾದಿ ಶಿವಶರಣರ ವಚನಗಳು. ಶಿವಯೋಗಿಗಳಂತೆ ಕಾಯಕಯೋಗಿಗಳೂ ಆಗಿದ್ದರು. ನೂರಾರು ಎಕರೆ ತೆಂಗಿನತೋಟವನ್ನು ಮಾಡಿದರು. ಬೆಳಗಿನಿಂದ ಸಂಜೆಯವರೆಗೂ ತೋಟದಲ್ಲಿ ದುಡಿಯುತ್ತಿದ್ದರು. ಮಠದ ಶಿಷ್ಯರನ್ನು ಸಮಾಜದ ಆಸ್ತಿಯನ್ನಾಗಿ ಮಾಡಿದರು. ಶಿಷ್ಯರ ಮನೆಯ ಕತ್ತಲೆಯನ್ನು ಕಳೆದವರು. ಸಾಣೇಹಳ್ಳಿಯಲ್ಲಿ 200 ತೆಂಗಿನಗಿಡಗಳನ್ನು ನೆಟ್ಟು ಬೆಳೆಸಿದರು. ತರಳರ ಬಾಳನ್ನು ಹಸನಗೊಳಿಸಬೇಕೆಂಬ ಹಂಬಲ ಬಲವಾಗಿತ್ತು. 60 ವರ್ಷಗಳ ಕಾಲ ಸಂನ್ಯಾಸಿ ಜೀವನವನ್ನು ಸಮಾಜಕ್ಕಾಗಿ ಸಮರ್ಪಣ ಭಾವದಿಂದ ಸವೆಸಿದರು ಎಂದರು.

ವೇದಿಕೆಯಲ್ಲಿ ಮುಖ್ಯ ಶಿಕ್ಷಕ ಬಸವರಾಜ್, ಹೊನ್ನೇಶಪ್ಪ, ಶಿವಕುಮಾರ್, ಶಿಲ್ಪಾ ಉಪಸ್ಥಿತರಿದ್ದರು. ಶಿವಸಂಚಾರದ ಕಲಾವಿದರಾದ ನಾಗರಾಜ್ ಎಚ್ .ಎಸ್. ಹಾಗೂ ತಬಲಸಾಥಿ ಶರಣ ವಚನಗೀತೆಗಳನ್ನು ಹಾಡಿದರು. ಅಧ್ಯಾಪಕ ಬಸನಗೌಡ ಪೋಲೀಸ್‌ ಪಾಟೀಲ್ ಸ್ವಾಗತಿಸಿದರು. ಮಲ್ಲಿಕಾರ್ಜುನ್ ನಿರೂಪಿಸಿ ವಂದಿಸಿದರು. ಉಭಯ ಶಾಲೆಗಳ ಅಧ್ಯಾಪಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.