ಕಲಬುರಗಿ: ನಾಳೆ ಎಂಆರ್‌ ಮೆಡಿಕಲ್ ಕಾಲೇಜು ಎಸ್‍ಎಸಿ ಕಟ್ಟಡ ಉದ್ಘಾಟನೆ

| Published : Jan 26 2024, 01:47 AM IST

ಕಲಬುರಗಿ: ನಾಳೆ ಎಂಆರ್‌ ಮೆಡಿಕಲ್ ಕಾಲೇಜು ಎಸ್‍ಎಸಿ ಕಟ್ಟಡ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧನಾ ಸಿಬ್ಬಂದಿ ವೈದ್ಯಕೀಯ ಶಿಕ್ಷಣ ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಈ ನೂತನ ಕೇಂದ್ರ ಮೀಸಲಾಗಿರಲಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಾನುಸಾರ ನಿರ್ಮಿಸಲ್ಪಟಿರುವ ಈ ಕೇಂದ್ರದಲ್ಲಿ ಎಲ್ಲ ವಿವಿಧ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವರ್ಷದುದ್ದಕ್ಕೂ ನಡೆಯಲಿವೆ ಎಂದು ಡಾ.ಬಿಲಗುಂದಿ ವಿವರಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ನೂತನ ಚಟುವಟಿಕಾ ಕೇಂದ್ರ (ಎಸ್‍ಎಸಿ) ಕಟ್ಟಡದ ಉದ್ಘಾಟನೆ ಜ.27ರಂದು ಮ.3ಕ್ಕೆ ನಡೆಯಲಿದೆ ಎಂದು ಎಚ್‍ಕೆಇ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ತಿಳಿಸಿದ್ದಾರೆ.

ನಗರದ ಬಸವೇಶ್ವರ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚಂದ್ರಶೇಖರ ಪಾಟೀಲ್ ಮೆಮೊರಿಯಲ್ ಹಾಸ್ಟೆಲ್ ಪ್ರಾಂಗಣದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಉದ್ಘಾಟಿಸಲಿದ್ದಾರೆ ಎಂದರು.

ರಾಜ್ಯ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿರುವ ಈ ಸಮಾರಂಭದಲ್ಲಿ ಎಚ್‍ಕೆಇ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಚ್‍ಕೆಇ ಉಪಾಧ್ಯಕ್ಷ ಡಾ.ಎಸ್.ಆರ್.ಹರವಾಳ, ಕಾರ್ಯದರ್ಶಿ ಡಾ.ಜಗನ್ನಾಥ ಬಿಜಾಪುರ, ಸಹ ಕಾರ್ಯದರ್ಶಿ ಡಾ.ಮಹಾದೇವಪ್ಪ ರಾಂಪುರೆ ಹಾಗೂ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧನಾ ಸಿಬ್ಬಂದಿ ವೈದ್ಯಕೀಯ ಶಿಕ್ಷಣ ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಈ ನೂತನ ಕೇಂದ್ರ ಮೀಸಲಾಗಿರಲಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಾನುಸಾರ ನಿರ್ಮಿಸಲ್ಪಟಿರುವ ಈ ಕೇಂದ್ರದಲ್ಲಿ ಎಲ್ಲ ವಿವಿಧ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವರ್ಷದುದ್ದಕ್ಕೂ ನಡೆಯಲಿವೆ ಎಂದು ಡಾ.ಬಿಲಗುಂದಿ ವಿವರಿಸಿದರು.

ಎಚ್‍ಕೆಇ ಉಪಾಧ್ಯಕ್ಷ ಡಾ.ಎಸ್ಆರ್ ಹರವಾಳ, ಎಂಆರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಎಸ್.ಎಂ.ಪಾಟೀಲ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆರು ವರ್ಷಗಳ ಸಾಧನೆ ಪ್ರಕಟ:

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಬಳಿಕ ತಾವು ಆರು ವರ್ಷಗಳ ಆಡಳಿತಾವಧಿಯಲ್ಲಿ ಕೈಗೊಂಡ ಸಾಧನೆಗಳ ಕುರಿತು ಮುಂದಿನ ಒಂದು ವಾರದಲ್ಲಿ ಸಾಧನಾ ಪಟ್ಟಿ ಪ್ರಕಟಿಸುವುದಾಗಿ ಎಚ್‍ಕೆಇ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ತಿಳಿಸಿದರು.

ಎಚ್‍ಕೆಇ ಅಂದಕೂಡಲೇ ಅದೊಂದು ಸಂಸ್ಥೆಯಾಗಿದ್ದು, ಅಲ್ಲಿ ಕೇವಲ ರಾಜಕೀಯ ನಡೆಯುತ್ತದೆ ಎಂಬ ಮನೋಭಾವ ಎಲ್ಲರಲ್ಲೂ ಇದೆ. ಆದರೆ, ರಾಜಕೀಯ ಹೊರತುಪಡಿಸಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸುಧಾರಣೆಗೆ ತಾವು ಹೆಚ್ಚು ಒತ್ತು ನೀಡುತ್ತಾ ಬಂದಿರುವುದಾಗಿ ಹೇಳಿದರು.

ಎಚ್‍ಕೆಇ ಅಧ್ಯಕ್ಷರಾಗಿ ತಮ್ಮ ಆರು ವರ್ಷಗಳ ಕಾರ್ಯಾವಧಿಯಲ್ಲಿ ಪಿಡಿಎ ಇಂಜಿನಿಯರಿಂಗ್ ಕಾಲೇಜು, ಎಂಆರ್ ಮೆಡಿಕಲ್ ಕಾಲೇಜು ಸೇರಿ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಪಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಬಸವೇಶ್ವರ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು ತಮ್ಮ ಮುಂದಿನ ಆದ್ಯತೆ ಆಗಿರಲಿದೆ ಎಂದು ಅಧ್ಯಕ್ಷ ಡಾ.ಬಿಲಗುಂದಿ ಪ್ರಕಟಿಸಿದರು. ಆಸ್ಪತ್ರೆ ಪ್ರಸೂತಿ ವಿಭಾಗದಲ್ಲಿ ದಾಖಲಾಗುವ ಗರ್ಭಿಣಿಯರಿಗೆ ಉಚಿತ ಹೆರಿಗೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಡಿಸ್ಜಾರ್ಜ್ ಸಂದರ್ಭದಲ್ಲಿ ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯದ ಹಿತದೃಷ್ಟಿಯಿಂದ ಆಕೆಗೆ ಎರಡು ಸಾವಿರ ರು ಚೆಕ್ ನೀಡುವ ವ್ಯವಸ್ಥೆ ಜಾರಿಗೆ ತರುವ ಚಿಂತನೆ ನಡೆದಿದೆ ಎಂದರು.