ಕಾರಟಗಿ: ತಾಲೂಕಿನ ಯರಡೋಣಾ ಗ್ರಾಮದ ಆರಾಧ್ಯ ದೈವ ಐತಿಹಾಸಿಕ ಹಿನ್ನೆಲೆಯ ಮೃಡಬಸವೇಶ್ವರ ಮಹಾರಥೋತ್ಸವ ಮಂಗಳವಾರ ಮಧ್ಯಾಹ್ನ ಸಡಗರ ಸಂಭ್ರಮದಿಂದ ಸಾವಿರಾರು ಜನರ ನಡುವೆ ಅದ್ಧೂರಿಯಾಗಿ ನಡೆಯಿತು.
ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನದ ಸಂಜೆ ದೇವಸ್ಥಾನದ ಆವರಣದಲ್ಲಿ ಬೃಹತ್ ರಥೋತ್ಸವ ನಡೆಯುತ್ತದೆ.ಈ ಬಾರಿ ಖಗ್ರಾಸ ಚಂದ್ರಗ್ರಹಣ ೩-೧೯ರಿಂದ ಸಂಜೆ ೬-೪೭ನಿಮಿಷದವರೆಗೆ ಇರುವುದರಿಂದ ರಥೋತ್ಸವವನ್ನು ಮಧ್ಯಾಹ್ನ ೧-೦೫ರ ಶುಭ ಮೂಹೂರ್ತಕ್ಕೆ ಭಕ್ತ ಸಮೂಹದ ಜಯಘೋಷಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ರಥೋತ್ಸವ ನಡೆಯಿತು.ದೇವಸ್ಥಾನದ ಆವರಣದ ಅಲಂಕೃತ ರಥಕ್ಕೆ ನಿಗದಿತ ಮುಹೂರ್ತ ಅರ್ಚಕರು ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದರು. ತಳಿರು ತೋರಣ ಹಾಗೂ ಬೃಹತ್ ಹೂವಿನ ಹಾರಗಳಿಂದ ಅಲಂಕೃತಗೊಳಿಸಿದ ಮಹಾರಥಕ್ಕೆ ಕಳಸಕೂಡಿಸಿ ಅರ್ಚಕರು ಪೂಜೆ ಸಲ್ಲಿಸಿದ ಬಳಿಕ ಬೂದುಗುಂಪಾದ ವಿರಕ್ತಮಠದ ಸಿದ್ದೇಶ್ವರ ಸ್ವಾಮೀಜಿ ಮತ್ತು ಶಿವಕುಮಾರಸ್ವಾಮಿ ಗಿಂಡಿಮಠದ ಯರಡೋಣಾ ಚಾಲನೆ ನೀಡಿದರು. ವಿವಿಧ ವಾದ್ಯ ಮೇಳ ಡೊಳ್ಳು ಭಾಜಾ ಭಜಂತ್ರಿಗಳ ವೈಭವದ ಮೆರವಣಿಗೆಯಲ್ಲಿ ವೀರಾಜಮಾನವಾಗಿ ಹೊರಟ ರಥೋತ್ಸವ ಬಸವಣ್ಣನ ಪಾದಗಟ್ಟೆ ತಲುಪಿ ನಂತರ ದೇವಸ್ಥಾನಕ್ಕೆ ಬಂದು ತಲುಪಿತು.
ರಥೋತ್ಸವದಲ್ಲಿ ಪಾಲ್ಗೊಂಡ ಸಹಸ್ರಾರು ಸಂಖ್ಯೆಯ ಸದ್ಭಕ್ತರು ರಥಕ್ಕೆ ಹೂವು ಹಣ್ಣು ಉತ್ತತ್ತಿ ಅರ್ಪಿಸಿದರು. ಅಲ್ಲದೆ ಮದುವೆಯಾದ ಹೊಸತರಲ್ಲಿ ತೇರು ನೋಡಬೇಕು ಎಂಬ ಪದ್ಧತಿ ಹಿನ್ನೆಲೆ ತೇರು ನೋಡಲು ಬಹಳಷ್ಟು ಸಂಖ್ಯೆಯ ನವ ದಂಪತಿಗಳು ರಥೋತ್ಸವದಲ್ಲಿ ಕಂಡುಬಂದರು.ಮಂಗಳವಾರ ಮಧ್ಯಾಹ್ನದ ನಂತರ ಚಂದ್ರಗ್ರಹಣ ನಡೆಯುವ ಹಿನ್ನೆಲಯಲ್ಲಿ ಬೆಳಗ್ಗೆ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಫಲಪುಷ್ಪಗಳ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾಕಾರ್ಯಗಳು ವಿಧಿವತ್ತಾಗಿ ಅರ್ಚಕರ ನೇತೃತ್ವದಲ್ಲಿ ಜರುಗಿದವು.
ಇನ್ನು ರಥೋತ್ಸವಕ್ಕೆ ಸಾವಿರಾರು ಭಕ್ತರು ನೆರೆದಿದ್ದರಿಂದ ದೇವಸ್ಥಾನದ ಬಾಗಿಲು ನಿರಂತರವಾಗಿ ತೆರೆದಿತ್ತು. ಖಗ್ರಾಸ ಗ್ರಹಣದ ನಿಮಿತ್ತ ದೇವಸ್ಥಾದ ಬಾಗಿಲು ಮುಚ್ಚದೇ ದೂರದೂರುಗಳಿಂದ ವರ್ಷಕ್ಕೆ ಒಂದು ಬಾರಿ ನಡೆಯುವ ಉತ್ಸವದಲ್ಲಿ ದೇವರ ದರ್ಶನ ಭಾಗ್ಯ ಎಲ್ಲರಿಗೂ ದೊರೆಯಲಿ ಎನ್ನುವ ಉದ್ದೇಶದಿಂದ ಬಾಗಿಲು ಹಾಕಲಿಲ್ಲ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಜಾತ್ರಾಮಹೋತ್ಸವದ ಅಂಗವಾಗಿ ಫೆ.೨೦ರಿಂದ ಮಾ.೨ಸೋಮವಾರದ ವರೆಗೆ ಶಂಭಯ್ಯ ಶಾಸ್ತ್ರಿ ಕಂಬಾಳಿಮಠ ಬಳಗಾನೂರ ವಿರಚಿತ ಸಿದ್ಧಗಂಗೆಯ ಶ್ರೀಕುಮಾರೇಶ್ವರ ದಿವ್ಯ ಚಿರತಾಮೃತ ಪುರಾಣ ಪ್ರವಚನ ನಡೆದು ಮಹಾಮಂಗಲಗೊಂಡಿತು.
ಈ ಸಂದರ್ಭದಲ್ಲಿ ಹರಚರ ಗುರುಮೂರ್ತಿಗಳು, ವಿವಿಧ ಪಕ್ಷದ ಗಣ್ಯರು ಸೇರಿದಂತೆ ಚುನಾಯಿತ ಜನಪ್ರತಿನಿಧಿ,ದೇವಸ್ಥಾನ ಸೇವಾ ಸಮಿತಿ ಸದಸ್ಯರು, ಮುಖಂಡರು,ಗ್ರಾಮಸ್ಥರು ಸೇರಿದಂತೆ ಬೂದಗುಂಪ, ಮರ್ಲಾನಹಳ್ಳಿ, ಜೂರಟಗಿ, ಕಾರಟಗಿ ಹಾಗೂ ಸುತ್ತಲಿನ ವಿವಿಧ ಗ್ರಾಮಗಳ ಕ್ಯಾಂಪಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಮೃಡಬಸವೇಶ್ವರರ ದರ್ಶನಾಶಿರ್ವಾದ ಪಡೆದುಕೊಂಡರು.