ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ(ಎಂಎಸ್‌ಐಎಲ್) ಚಿಟ್ ಫಂಡ್ ವಹಿವಾಟು ಪ್ರಸ್ತುತ ವಾರ್ಷಿಕ ₹500 ಕೋಟಿಗಿಂತ ಕಡಿಮೆ ಇದೆ. ಇದನ್ನು ಮುಂದಿನ ದಿನಗಳಲ್ಲಿ ₹10 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ(ಎಂಎಸ್‌ಐಎಲ್) ಚಿಟ್ ಫಂಡ್ ವಹಿವಾಟು ಪ್ರಸ್ತುತ ವಾರ್ಷಿಕ ₹500 ಕೋಟಿಗಿಂತ ಕಡಿಮೆ ಇದೆ. ಇದನ್ನು ಮುಂದಿನ ದಿನಗಳಲ್ಲಿ ₹10 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ವಿಧಾನಸೌಧದಲ್ಲಿ ಶನಿವಾರ ಎಂಎಸ್‌ಐಎಲ್‌ನಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಎಂಎಸ್‌ಐಎಲ್ ಚಿಟ್ಸ್‌ನ ಹೊಸ ಸಾಫ್ಟ್‌ವೇರ್ ಹಾಗೂ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದರು.
ಎಂಎಸ್‌ಐಎಲ್ ಸರ್ಕಾರಿ ಸಂಸ್ಥೆಯು ಹಲವು ದಶಕಗಳಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. 2005ರಿಂದ ಚಿಟ್ ಫಂಡ್ ವ್ಯವಸ್ಥೆ ಪ್ರಾರಂಭವಾಗಿದೆ. ಕೇರಳವು ಚಿಟ್ ಫಂಡ್ ಕ್ಷೇತ್ರದಲ್ಲಿ ವಾರ್ಷಿಕ ₹47 ಸಾವಿರ ಕೋಟಿ ವಹಿವಾಟು ನಡೆಸುತ್ತದೆ. ಆದರೆ ನಮ್ಮಲ್ಲಿ ಕೇವಲ ₹500 ಕೋಟಿ ವ್ಯವಹಾರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ₹10 ಸಾವಿರ ಕೋಟಿಯಷ್ಟು ವಹಿವಾಟು ನಡೆಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ತಿಳಿಸಿದರು.ಹೂಡಿಕೆ ಸುಭದ್ರ ಗ್ಯಾರಂಟಿ:
ಹೂಡಿಕೆ ಹಣ ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯ. ಎಂಎಸ್‌ಐಎಲ್‌ನ ಚಿಟ್ ಫಂಡ್ ಈ ಭರವಸೆಯನ್ನು ನೀಡುತ್ತದೆ. ಸಾಮಾನ್ಯವಾಗಿ ನಡೆಯುವ ಚೀಟಿ ವ್ಯವಹಾರಗಳಲ್ಲಿ ಮೋಸವಾಗುವ ಸಾಧ್ಯವಿರುತ್ತದೆ. ಆದರೆ ಎಂಎಸ್ಐಎಲ್ ಸರ್ಕಾರಿ ಸಂಸ್ಥೆಯಾಗಿದ್ದು, ಜನರ ಹೂಡಿಕೆಗೆ ಭದ್ರತೆ ಒದಗಿಸುತ್ತದೆ. ತಮ್ಮ ಹೂಡಿಕೆಯಲ್ಲಿ ಕೇವಲ ಶೇ.5ರಷ್ಟು ಲಾಭ ಪಡೆಯುವ ಸಂಸ್ಥೆ, ಜನರ ಆರ್ಥಿಕ ಭದ್ರತೆಗೆ ನೆರವಾಗಿದೆ ಎಂದು ಬಣ್ಣಿಸಿದರು.ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಜನರಿಗೆ ರಕ್ಷಣೆ ಒದಗಿಸಲು ಕಾಯ್ದೆ ಜಾರಿಗೊಳಿಸಲಾಗಿದೆ. ಅಗತ್ಯ ಸಂದರ್ಭದಲ್ಲಿ ಉಳಿತಾಯದ ಹಣ ನೆರವಿಗೆ ಬರುತ್ತದೆ. ಜಾತಿವರ್ಗಗಳ ಭೇದವಿಲ್ಲದೇ ಜಾರಿಯಾಗಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ, ಅನ್ನಭಾಗ್ಯದಿಂದ ಉಳಿತಾಯವಾಗುವ ಹಣವನ್ನು ಜನರು, ವಿಶೇಷವಾಗಿ ಮಹಿಳೆಯರು ಹೂಡಿಕೆ ಮಾಡಬೇಕು ಎಂದು ಕರೆ ನೀಡಿದರು.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಎಂಎಸ್‌ಐಎಲ್ ಅಧ್ಯಕ್ಷ ಪುಟ್ಟರಂಗ ಶೆಟ್ಟಿ ಉಪಸ್ಥಿತರಿದ್ದರು.ಸೇನೆ ಕ್ಯಾಂಟೀನ್ ಮಾದರೀಲಿ ಎಂಎಸ್‌ಐಎಲ್ ಸ್ಟೋರ್ ಶುರು:
ಸರ್ಕಾರಿ ನೌಕರರಿಗೆ ಎಲ್ಲಾ ವಸ್ತುಗಳೂ ಸಬ್ಸಿಡಿ ದರದಲ್ಲಿ ಸಿಗುವಂತೆ ಮಾಡಲು ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಎಂಎಸ್‌ಐಎಲ್ ಸ್ಟೋರ್‌ಗಳನ್ನು ತೆರೆಯುವ ಚಿಂತನೆ ಇದ್ದು ಸಾಧಕ-ಬಾಧಕ ಅಧ್ಯಯನ ನಡೆಸಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.ವಿಧಾನಸೌಧದಲ್ಲಿ ಶನಿವಾರ ಎಂಎಸ್‌ಐಎಲ್ ಚಿಟ್ಸ್‌ನ ಹೊಸ ಸಾಫ್ಟ್‌ವೇರ್ ಹಾಗೂ ಮೊಬೈಲ್ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಥೆಯು 27 ಶಾಖೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲೂ ಶಾಖೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.ಬ್ಯಾಂಕ್‌ಗಳಿಗಿಂತ ನಮ್ಮಲ್ಲಿ ಹೆಚ್ಚಿನ ಲಾಭ ಸಿಗಲಿದೆ. ಸರ್ಕಾರಿ ನೌಕರರಿಗೆ ಎಲ್ಲ ವಸ್ತುಗಳೂ ಸಬ್ಸಿಡಿ ದರದಲ್ಲಿ ಸಿಗುವಂತೆ ಮಾಡಲು ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಎಂಎಸ್‌ಐಎಲ್ ಸ್ಟೋರ್ ತೆರೆಯುವ ಚಿಂತನೆ ಇದೆ. ಇದು ಕೈಗೂಡಿದರೆ 20 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.ಸುಗಮ ಚಿಟ್ ವ್ಯವಹಾರಕ್ಕಾಗಿ ಏಜೆಂಟರನ್ನು ನೇಮಿಸಲಿದ್ದು, ಇದರಿಂದ 10 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಸಿಗಲಿದೆ. ಸ್ವಸಹಾಯ ಸಂಘಗಳ ಮಹಿಳೆಯರಿಗೆ ವಿಶೇಷ ಉಳಿತಾಯ ಸ್ಕೀಮುಗಳನ್ನು ತರಲಾಗುವುದು. ಇದರಲ್ಲಿ ಈ ಸಂಘಗಳ ಸಖಿಯರೇ ಏಜೆಂಟರಾಗಿ ನೇಮಕಗೊಳ್ಳಲಿದ್ದಾರೆ. ಇವರಲ್ಲದೆ, ಹೋಟೆಲ್, ಕಿರಾಣಿ ಅಂಗಡಿಗಳನ್ನೂ ಏಜೆಂಟ್ ರೀತಿ ಕಾರ್ಯನಿರ್ವಹಿಸಲು ವ್ಯವಸ್ಥೆ ರೂಪಿಸಲಾಗುವುದು ಎಂದು ವಿವರಿಸಿದರು.