ಕನ್ನಡಪ್ರಭ ವಾರ್ತೆ, ಬೆಂಗಳೂರು:
ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಹೆಚ್ಚಿಸುವುದರ ಜೊತೆಗೆ ತೆಂಗಿನ ನಾರಿನ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇನ್ನುಮುಂದೆ ಎಂಎಸ್‌ಐಎಲ್ ಮಳಿಗೆಗಳಲ್ಲಿ ತೆಂಗಿನ ನಾರಿನಿಂದ ಮಾಡಿದ ಡೋರ್‌ಮ್ಯಾಟ್‌ಗಳನ್ನು ಬಳಸಲು ತೀರ್ಮಾನಿಸಲಾಗಿದೆ.ಈ ಹಿನ್ನೆಲೆಯಲ್ಲಿ ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್ ಅವರು 2134 ತೆಂಗಿನ ನಾರಿನ ಡೋರ್‌ಮ್ಯಾಟ್‌ಗಳನ್ನು ಪೂರೈಸುವಂತೆ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮಕ್ಕೆ ಮನವಿ ಮಾಡಿದ್ದಾರೆ. ಪೂರೈಕೆ ಆದೇಶವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಅವರಿಗೆ ಹಸ್ತಾಂತರಿಸಿದರು.
ಈ ಕುರಿತು ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್, ಸ್ಥಗಿತಗೊಂಡಿದ್ದ ತೆಂಗಿನ ನಾರಿನ ಉತ್ಪನ್ನಗಳ ಉತ್ಪಾದನಾ ಘಟಕವನ್ನು ಖಾಸಗಿ ಸಹಭಾಗಿತ್ವದಲ್ಲಿ ಪುನರಾರಂಭಿಸಲಾಗಿದೆ. ಈ ಮೂಲಕ 300ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ದೊರಕಿದಂತಾಗಿದೆ. ಮಾರುಕಟ್ಟೆ ವಿಸ್ತರಿಸುವ ಮೂಲಕ ತೆಂಗಿನ ನಾರಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಿ ಕನಿಷ್ಠ ಒಂದೂವರೆ ಸಾವಿರ ಮಹಿಳೆಯರಿಗೆ ಉದ್ಯೋಗ ಒದಗಿಸುವ ಗುರಿಯೊಂದಿಗೆ ತೆಂಗಿನ ನಾರಿನ ಅಭಿವೃದ್ಧಿ ನಿಗಮವು ಮುನ್ನಡೆದಿದೆ ಎಂದು ತಿಳಿಸಿದರು.ತೆಂಗಿನ ನಾರಿನ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸುವ ಭಾಗವಾಗಿ ದೆಹಲಿ ಮತ್ತು ರಾಜಸ್ಥಾನದಲ್ಲಿ ಶೋ ರೂಂಗಳನ್ನು ತೆರೆಯಲು ಉತ್ತೇಜನ ನೀಡಲಾಗಿದೆ. ಈಗ ಸರ್ಕಾರಿ ಸಂಸ್ಥೆಗಳು ತೆಂಗಿನ ನಾರಿನ ಉತ್ಪನ್ನಗಳ ಬಳಕೆ ಮಾಡುವಂತೆ ಕೇಳಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳು ಮತ್ತು ಕಚೇರಿಗಳಲ್ಲಿ ತೆಂಗಿನ ನಾರಿನ ಉತ್ಪನ್ನಗಳ ಬಳಕೆಗೆ ಮಾತುಕತೆ ಜಾರಿಯಲ್ಲಿದೆ. ಸದ್ಯದಲ್ಲೇ ಮುಜರಾಯಿ ಇಲಾಖೆಯಿಂದಲೂ ಪೂರೈಕೆ ಆದೇಶ ಪಡೆದುಕೊಳ್ಳುವ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಎಂಎಸ್ಐಎಲ್ ಮಾರುಕಟ್ಟೆ ನಿರ್ದೇಶಕ ಎ.ಎಂ. ಚಂದ್ರಪ್ಪ ಹಾಗೂ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಜಂಟಿ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ ಇದ್ದರು.