ಹುಬ್ಬಳ್ಳಿ:
ಭಾರತದ ಆರ್ಥಿಕತೆ ಹಾಗೂ ಉದ್ಯೋಗ ನೀಡಿಕೆಯಲ್ಲಿ ಸಣ್ಣ ಕೈಗಾರಿಕೆಗಳ (ಎಂಎಸ್‌ಎಂಇ) ಪಾತ್ರ ಅತ್ಯಂತ ನಿರ್ಣಾಯಕ. ಆದರೆ, ಅವುಗಳ ಸಮಸ್ಯೆಗಳನ್ನೇ ಹತ್ತಿಕ್ಕಲಾಗುತ್ತಿದೆ. ಎಂಎಸ್‌ಎಂಇಗಳು ಕೇವಲ ರಾಜಕೀಯ ಪ್ರೋತ್ಸಾಹವನ್ನು ಅವಲಂಬಿಸುವುದನ್ನು ಬಿಟ್ಟು, ನೀತಿ ನಿರೂಪಣೆಯಲ್ಲಿ ತಮ್ಮ ಹಕ್ಕನ್ನು ಪ್ರತಿಪಾದಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.ಮೆಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಸೇರಿದಂತೆ ಕೇಂದ್ರ ಸರ್ಕಾರದ ಕೈಗಾರಿಕಾ ನೀತಿಗಳ ವಿರುದ್ಧ ಹರಿಹಾಯ್ದರಲ್ಲದೇ, ತಲಾಆದಾಯದಲ್ಲಿ ಹಿಂದುಳಿದಿದ್ದೇವೆ. ಆದರೆ, ಆ ಬಗ್ಗೆ ಚರ್ಚೆಯಾಗ್ತಿಲ್ಲ. 4 ಟ್ರಿಲಿಯನ್ ಜನಸಂಖ್ಯೆಯ ಪ್ರತಿಫಲ. ಇದರಲ್ಲಿ ಕೇಂದ್ರದ್ದೇನೂ ಸಾಧನೆಯಿಲ್ಲ ಎಂದು ಕಿಡಿಕಾರಿದರು.
ಕೆಸಿಸಿಐ ಇಲ್ಲಿನ ಅಮರಗೋಳ ಎಪಿಎಂಸಿಯಲ್ಲಿ ಆಯೋಜಿಸಿರುವ ಇನ್‌ಕಾಮೆಕ್ಸ್ -2026 ಕಾರ್ಯಕ್ರಮದಲ್ಲಿ ತಮ್ಮದೇ ಸ್ಟ್ರೈಲ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದಕ್ಕೂ ಮುಂಚೆ ಭಾಷಣ ಮಾಡಿ ತೆರಳಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಕೇಂದ್ರದ ಸಾಧನೆ ಟೀಕಿಸುವ ಮೂಲಕ ಇಬ್ಬರಿಗೂ ತಮ್ಮ ಭಾಷಣದುದ್ದಕ್ಕೂ ಟಾಂಗ್ ನೀಡಿದರು.ದೇಶದಲ್ಲಿ ಈ ವಲಯವು ಶೇ.64ರಷ್ಟು ಉದ್ಯೋಗಾವಕಾಶ ನೀಡುತ್ತದೆ. ದೇಶದ ಆರ್ಥಿಕತೆಯ ಉಳಿವು ಈ ವಲಯದ ಶಕ್ತಿಯನ್ನೇ ಅವಲಂಬಿಸಿದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಸಿಗುವ ಆದ್ಯತೆ ಎಂಎಸ್‌ಎಂಇಗಳಿಗೆ ಸಿಗುತ್ತಿಲ್ಲ. ಸಬ್ಸಿಡಿ ಕೊರತೆ, ವಿಳಂಬ ಪಾವತಿ ಮತ್ತು ಸಾಂಸ್ಥಿಕ ಬೆಂಬಲದ ಕೊರತೆಯಿಂದಾಗಿ ಸ್ಥಳೀಯ ಕೈಗಾರಿಕೆಗಳು ಸಂಕಷ್ಟದಲ್ಲಿವೆ ಎಂದರು.
ಯಾವುದೇ ರಾಜಕಾರಣಿ ಹಾಗೂ ಸರ್ಕಾರವನ್ನು ಒಲೈಕೆ ಮಾಡಬೇಡಿ. ಕರ್ನಾಟಕದಲ್ಲಿ ನೀವು 70 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೀರಿ. ನೀವು ಕೇವಲ ಒಂದು ದಿನ ಕೆಲಸ ನಿಲ್ಲಿಸಿ ಬೀದಿಗಿಳಿದರೆ, ಪ್ರತಿಯೊಂದು ರಾಜಕೀಯ ಪಕ್ಷವೂ ನಿಮ್ಮ ಮಾತಿಗೆ ಓಗೊಡುತ್ತದೆ. ನಿಮ್ಮ ಶಕ್ತಿ ಅರಿತುಕೊಂಡು ಸರ್ಕಾರಗಳಿಂದ ಕೆಲಸ ಮಾಡಿಸಿಕೊಳ್ಳಿ ಎಂದರು.
ಕಳೆದ ದಶಕದಲ್ಲಿ ಒಂದು ಲಕ್ಷಕ್ಕೂ ಅಧಿಕ ಸಣ್ಣ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿನ್ನುತ್ತಾ ಹೋದರೆ, ಸಣ್ಣ ಕೈಗಾರಿಕೆಗಳು ಹೇಗೆ ಬದುಕಲು ಸಾಧ್ಯ? ಎಂದು ಅವರು ಪ್ರಶ್ನಿಸಿದರು.
ಸ್ಟಾರ್ಟ್‌ಆಪ್, ಮೇಕ್ ಇನ್ ಇಂಡಿಯಾ ಬಗ್ಗೆಯೆಲ್ಲ ಭಾರೀ ಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗಿದೆ ಎಂದು ಹೇಳಲಾಗುತ್ತಿದೆ. ಇದು ಕೇವಲ ಜನಸಂಖ್ಯಾ ಬೆಳವಣಿಗೆಯ ಪ್ರತಿಫಲ. ಇದರಲ್ಲೇನು ವಿಶೇಷ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದರು. ಜಪಾನ್, ಚೀನಾ ಮತ್ತು ಅಮೆರಿಕದಂತಹ ದೇಶಗಳಿಗೆ ಹೋಲಿಸಿದರೆ ಭಾರತದ ತಲಾ ಆದಾಯ ಇಂದಿಗೂ ಗಣನೀಯವಾಗಿ ಕಡಿಮೆಯಿದೆ. ಆದರೆ ಈ ಬಗ್ಗೆಯೆಲ್ಲ ಚರ್ಚೆಯೇ ಆಗುವುದಿಲ್ಲ ಎಂದು ಟೀಕಿಸಿದರು.