ಸಾರಾಂಶ
ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಆರ್.ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಮಿಥುನ್ ಚಕ್ರವರ್ತಿ ಮಾತನಾಡಿ, ಏಳು ದಿನಗಳ ಈ ಶಿಬಿರ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಆತ್ಮಸ್ಥೈರ್ಯ ಕಲಿಸಿಕೊಡುತ್ತಾ, ತನ್ಮೂಲಕ ಉತ್ತಮ ಪ್ರಜೆಗಳಾಗಿ ಬದುಕಲು ಸಹಕಾರಿಯಾಗಿದೆ ಎಂದರು.
ಸಮಾರೋಪ ಭಾಷಣ ಮಾಡಿದ ಅತಿಥೇಯ ಶಾಲೆಯ ಶಿಕ್ಷಕಿ ಜಯಂತಿ ಶೆಟ್ಟಿ ಅವರು, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಗಳನ್ನು ಹಾಗೂ ಸೇವಾ ಮನೋಭಾವವನ್ನು ಬಿತ್ತಿ ಬೆಳೆಸಲು ಅತ್ಯಂತ ಸಹಕಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ಮಣ್ಣು ಗ್ರಾಪಂ ಪಿಡಿಒ ಮಮತಾ ಶೆಟ್ಟಿ ಮಾತನಾಡಿ, ಈ ಶಾಲೆ ಈ ಶಿಬಿರಾರ್ಥಿಗಳ ಸೃಜನಶೀಲ ತೊಡಗುವಿಕೆಯಿಂದ ಸಾರ್ಥಕ್ಯ ಸಾಧಿಸಿದೆ ಎಂದರು.‘ಯೂತ್ ಫಾರ್ ಮೈ ಭಾರತ್’ ಮತ್ತು ‘ಡಿಜಿಟಲ್ ಸಾಕ್ಷರತೆ’ ಎಂಬ ಶಿಬಿರದ ಧ್ಯೇಯವಾಕ್ಯವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಶಿಬಿರದ ಕಾರ್ಯಚಟುವಟಿಕೆಗಳು ನಡೆದಿವೆ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.
ಎನ್.ಎಸ್.ಎಸ್. ನಾಯಕ ಶ್ರೇಯಸ್ ವಿಶೇಷ ಶಿಬಿರದ ವರದಿ ವಾಚಿಸಿದರು. ಅನುಷಾ, ಪ್ರೇರಣಾ, ಸನಾತನ, ಮಮತ ಇವರು ಶಿಬಿರದ ಅನಿಸಿಕೆಗಳನ್ನು ಹಂಚಿಕೊಂಡರು. ಕಾಲೇಜಿನ ಉಪನ್ಯಾಸಕಿ ವರಮಹಾಲಕ್ಷ್ಮಿ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹೇಮಲತಾ ಶೆಟ್ಟಿ ವಂದಿಸಿದರು. ಘಟಕದ ನಾಯಕಿ ಅನಿಷ ಕಾರ್ಯಕ್ರಮ ನಿರೂಪಿಸಿದರು.