ಸಾರಾಂಶ
ಕಾವೇರಿ ವನ್ಯಜೀವಿ ಧಾಮ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಅರಣ್ಯದ ಸುತ್ತಮುತ್ತ ಮಾನವ- ವನ್ಯಜೀವಿ ಸಂಘರ್ಷ ತಡೆಗೆ ಆನೆ ಕಂದಕ, ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು 157 ಕೋಟಿ ರು. ಹೆಚ್ಚುವರಿಯಾಗಿ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ
ಚಾಮರಾಜನಗರ : ಕಾವೇರಿ ವನ್ಯಜೀವಿ ಧಾಮ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಅರಣ್ಯದ ಸುತ್ತಮುತ್ತ ಮಾನವ- ವನ್ಯಜೀವಿ ಸಂಘರ್ಷ ತಡೆಗೆ ಆನೆ ಕಂದಕ, ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು 157 ಕೋಟಿ ರು. ಹೆಚ್ಚುವರಿಯಾಗಿ ನೀಡಲು ಗುರುವಾರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 88 ಕಿ.ಮೀ. ರೈಲ್ವೆ ಬ್ಯಾರಿಕೇಡ್, 53 ಕಿ.ಮೀ. ಆನೆ ಕಂದಕ, 50 ಕಿ.ಮೀ. ಸೌರ ತೂಗು ಬೇಲಿ (ಸೋಲಾರ್ ಟೆಂಟಕಲ್ ಫೆನ್ಸಿಂಗ್) ನಿರ್ಮಾಣಕ್ಕೆ ಈ ಹೆಚ್ಚಿನ ಅನುದಾನ ಮಂಜೂರು ಮಾಡಲಾಗಿದೆ ಎಂದರು. ಮಾನವ ವನ್ಯಜೀವಿ ಅದರಲ್ಲೂ ಆನೆಗಳಿಂದ ಬೆಳೆಹಾನಿ, ಜೀವಹಾನಿ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ವನ್ಯಜೀವಿಧಾಮಗಳಲ್ಲಿ ಲಂಟನಾ, ಸನ್ನಾ ಕಳೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಆನೆಗಳು ಮತ್ತು ಸಸ್ಯಹಾರಿ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗುತ್ತಿದೆ.
ಕೂಡಲೇ ದೊಡ್ಡ ಪ್ರಮಾಣದಲ್ಲಿ ಲಂಟನಾ, ಸನ್ನಾ ತೆರವಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು. ಅರಣ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆಸಲು ಹಾಗೂ ಡಿಗ್ರೇಡ್ ಆಗಿರುವ ಅರಣ್ಯದಲ್ಲಿ ಸ್ಥಳೀಯ ಪ್ರಭೇದದ ಗಿಡ ಬೆಳೆಸಲು ಮತ್ತು ಅರಣ್ಯದೊಳಗಿರುವ ಜಲಗುಂಡಿಗಳಲ್ಲಿ ಶೇಖರವಾಗಿರುವ ಹೂಳು ತೆಗೆಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತೆ ಕ್ರಮ ವಹಿಸಲು ಸೂಚಿಸಿದರು.
ಸೆಕ್ಷನ್ 4 ಪ್ರಕರಣ ಇತ್ಯರ್ಥಕ್ಕೆ ಸೂಚನೆ:ಕೊಳ್ಳೆಗಾಲ ವಲಯದಲ್ಲಿ ಕರ್ನಾಟಕ ಅರಣ್ಯ ಕಾಯಿದೆಯಡಿ ಸೆಕ್ಷನ್ 4 ಆಗಿರುವ ಎಲ್ಲ 14 ಪ್ರಕರಣಗಳನ್ನು 3 ತಿಂಗಳ ಒಳಗಾಗಿ ಇತ್ಯರ್ಥಪಡಿಸಲು ಅರಣ್ಯ ಸಂಸ್ಥಾಪನಾಧಿಕಾರಿ (ಎಫ್ಎಸ್ಒ) ಜೊತೆ ಸಹಕರಿಸುವಂತೆ ಆದರೆ, ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿರುವವರನ್ನು ತೆರವು ಮಾಡಿಸಲು ತತ್ ಕ್ಷಣವೇ ಕ್ರಮ ವಹಿಸುವಂತೆ ಸೂಚಿಸಿದರು. ಅರಣ್ಯ ವಿಸ್ತರಣೆ ಮತ್ತು ಅರಣ್ಯ ಒತ್ತುವರಿ ತೆರವಿಗೆ ಆದ್ಯತೆ ನೀಡುವಂತೆ ಹಾಗೂ 2015ರ ಸರ್ಕಾರದ ನಡಾವಳಿಯಂತೆ ಜೀವನೋಪಾಯಕ್ಕೆ ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವವರಿಗೆ ತೆರವು ಮಾಡದಂತೆ ಸೂಚಿಸಿದರು.ಸ್ವಾತಂತ್ರ್ಯ ಪೂರ್ವದಲ್ಲಿ ಅರಣ್ಯ ಭೂಮಿ ಗುತ್ತಿಗೆ ಪಡೆದಿರುವ ಕೆಲವು ಕಂಪನಿಗಳು ಇಲಾಖೆಗೆ ಗುತ್ತಿಗೆ ಹಣವನ್ನೂ ಪಾವತಿಸುತ್ತಿಲ್ಲ, ಗುತ್ತಿಗೆ ಅವಧಿ ಪೂರ್ಣಗೊಂಡರೂ ಮರಳಿ ಇಲಾಖೆಗೆ ನೀಡಿಲ್ಲ. ಈ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಈ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸರ್ಕಾರಿ ವಕೀಲರಿಗೆ ಸೂಕ್ತ ದಾಖಲೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ಸಂಸ್ಥೆಗೆ ನೋಟಿಸ್ ನೀಡಲು ಆದೇಶ:
ಜಿಲ್ಲೆಯ 620 ಕೆರೆಗಳ ಪೈಕಿ 100 ಕೆರೆಗಳ ನೀರು ಕಲುಷಿತವಾಗಿರುವುದು ಪರೀಕ್ಷೆಯಿಂದ ದೃಢವಾಗಿದ್ದು, ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡಿ ಜಲ ಗುಣಮಟ್ಟ ಕಾಯ್ದುಕೊಳ್ಳಲು ಸೂಚಿಸುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದರು. ಸಭೆಯಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಎಪಿಸಿ, ಸಿಎಫ್‌ಗಳಾದ ಕುಮಾರ್ ಪುಷ್ಕರ್, ಲಿಂಗರಾಜ್, ಸಿಸಿಎಫ್ ಹೀರಾಲಾಲ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.
ಕಾಡಂಚಲ್ಲಿ ಕಚ್ಚಾ ಬಾಂಬಿಂದ
ವನ್ಯಜೀವಿ ಹಾನಿ ಆಗದಂತೆ ಕ್ರಮ
ಕೊಳ್ಳೆಗಾಲ: ಕಾಡು ಹಂದಿ ಬೇಟೆಗಾಗಿ ಕಾಡಿನಂಚಿನ ಗ್ರಾಮಗಳಲ್ಲಿ ಕಡಿಮೆ ತೀವ್ರತೆಯ ಕಚ್ಚಾ ಬಾಂಬ್ ಇಡಲಾಗುತ್ತಿದ್ದು, ಇದನ್ನು ಸೇವಿಸಿ ಜಾನುವಾರು ಮತ್ತು ವನ್ಯಜೀವಿಗಳು ಮೃತಪಡುತ್ತಿರುವ ದೂರುಗಳಿದ್ದು, ಈ ಬಗ್ಗೆ ಸೂಕ್ತ ನಿಗಾ ಇಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಕೊಳ್ಳೆಗಾಲದ ಕೀರ್ತಿಚಕ್ರ ಪಿ ಶ್ರೀನಿವಾಸ್ ಅತಿಥಿಗೃಹದಲ್ಲಿ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಚ್ಚಾ ಬಾಂಬ್ ತಿಂದು ಹಲವು ಆನೆ ಮರಿಗಳ ಬಾಯಿಯಲ್ಲೇ ಸ್ಫೋಟವಾಗಿ, ದವಡೆ ಛಿದ್ರವಾಗಿ, ಹಸಿವಿನಿಂದ ಬಳಲಿ ಸಾಯುತ್ತಿವೆ ಎಂದು ವರದಿಯಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆ ರೀತಿ ಬಾಂಬ್ ಇಡುವವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನಿರ್ದೇಶಿಸಿದರು.
ಆನೆ ಕಾಡಲ್ಲಿ ಬಿದಿರು ಬೆಳೆ:ಕಾವೇರಿ ವನ್ಯಜೀವಿ ವಿಭಾಗದಲ್ಲಿ ಸಮೃದ್ಧವಾಗಿ ಬಿದಿರು ಬೆಳೆಸಲಾಗಿದೆ, ಬಿದಿರು ಸ್ವಾಭಾವಿಕ ಮತ್ತು ಜೈವಿಕ ಬ್ಯಾರಿಕೇಡ್ ನಂತೆ ಕಾರ್ಯ ನಿರ್ವಹಿಸುತ್ತದೆ. ಇದು ಆನೆಗಳಿಗೆ ಆಹಾರವೂ ಆಗುತ್ತದೆ. ಜೊತೆಗೆ ಆನೆಗಳು ನಾಡಿಗೆ ಬಾರದಂತೆ ತಡೆಯುತ್ತದೆ. ಇದನ್ನು ಬೇರೆ ವಲಯದಲ್ಲಿ ಬೆಳೆಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಹೋಂಸ್ಟೇ, ರೆಸಾರ್ಟ್ ತೆರವು:
ಅರಣ್ಯದೊಳಗೆ ಮತ್ತು ಸೂಕ್ಷ್ಮ ಪರಿಸರ ವಲಯದಲ್ಲಿ ಹೋಂ ಸ್ಟೇ ಹೆಸರಲ್ಲಿ ಶಾಶ್ವತ ರೆಸಾರ್ಟ್ ಕಟ್ಟಡ ತಲೆ ಎತ್ತುತ್ತಿದೆ ಎಂದು ದೂರುಗಳು ಬಂದಿದ್ದು, ಇವುಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ವಹಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು. ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್ ಮಾಡಿ ಸಂರಕ್ಷಿಸುವಂತೆಯೂ ನಿರ್ದೇಶನ ನೀಡಿದರು. ಸಭೆಯಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಎಪಿಸಿಸಿಎಫ್ ಕುಮಾರ್ ಪುಷ್ಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಮೊದಲಾದವರು ಭಾಗಿಯಾಗಿದ್ದರು.