ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ತಾಲೂಕಿನ ಸುಕ್ಷೇತ್ರ ಮುಚಖಂಡಿ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಡಿ.26ರಂದು ಮಹಾರಥೋತ್ಸವ ನಡೆಯಲಿದ್ದು, ಜಾತ್ರೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವೀರಭದ್ರೇಶ್ವರ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ ಗುರುಬಸವ ಸೂಳಿಭಾವಿ ತಿಳಿಸಿದರು.ಗುರುವಾರ ಜಾತ್ರೆಯ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ಕಾರ್ತಿಕೋತ್ಸವ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಎಲ್ಲ ಸಿದ್ಧತೆಯನ್ನು ಮುಚಖಂಡಿ ಗ್ರಾಮದ ಗುರುಹಿರಿಯರು, ಯುವಕರು ಹಾಗೂ ವೀರಭದ್ರೇಶ್ವರ ಜೀರ್ಣೋದ್ಧಾರ ಕಮಿಟಿಯ ಸದಸ್ಯರ ಸಹಕಾರದಿಂದೊಂದಿಗೆ ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.
ಹೊಸ್ತಿಲ ಹುಣ್ಣಿಮೆಯಲ್ಲಿ ಬರುವ ಜಾತ್ರೆಯು 1972ರಿಂದ ಆರಂಭಗೊಂಡಿದ್ದು, ಈ ವರ್ಷ 51ನೇ ವರ್ಷದ ಜಾತ್ರೆ ಆಚರಿಸಲಾಗುತ್ತಿದೆ. ಜಾತ್ರೆಯಲ್ಲಿ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.ಡಿ.22ರಂದು ಮುಚಖಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಗ್ರಾಮದ ಅಗಸಿ ಬಾಗಿಲವರೆಗೆ ಚಿಕ್ಕ ರಥೋತ್ಸವ ಸಂಜೆ 7 ಗಂಟೆಗೆ ಐದು ದಿನಗಳ ಕಾಲ ಗ್ರಾಮದಲ್ಲಿ ಸಂಭ್ರಮದಿಂದ ಜರುಗಲಿದೆ. ಡಿ.24ರಂದು ಬೆಳಗ್ಗೆ ಅಯ್ಯಾಚಾರ ಮತ್ತು ಶಿವದೀಕ್ಷೆ ಕಾರ್ಯಕ್ರಮ ಬಿಲ್ಕೆರೂರಿನ ಸಿದ್ಧಲಿಂಗ ಶಿವಾಚಾರ್ಯರು ಹಾಗೂ ಚರಂತಿಮಠದ ಪ್ರಭುಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯಲಿದೆ.
ಡಿ.26ರಂದು ಸಂಜೆ 4 ಗಂಟೆಗೆ ಚಿಕ್ಕರಥೋತ್ಸವ ಜರಗಿದ ನಂತರ ಮಹಾರಥೋತ್ಸವ ಸಂಜೆ 5 ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ಜಾತ್ರೆಗೆ ಬರುವ ಭಕ್ತರಿಗೆ ದೇವಸ್ಥಾನದ ಮುಂಭಾಗದಲ್ಲಿರುವ 4 ಎಕರೆ ಜಮೀನಿನಲ್ಲಿ ಸ್ವಚ್ಛಾತಾ ಕಾರ್ಯ ಮುಗಿದಿದ್ದು, ದೇವಸ್ಥಾನದ ಆವರಣದಲ್ಲಿರುವ ಎಲ್ಲ ಮಂಗಲಭವನದಲ್ಲಿ ಭಕ್ತರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಡಿ.26ರಂದು ರಾತ್ರಿ 10.30ಕ್ಕೆ ಗ್ರಾಮದ ಯುವಕರು ಸೇರಿಕೊಂಡು ಹರಹಂತಕರಿಗೊಬ್ಬ ನರಸಿಂಹ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಡಿ.27ರಂದು ಸಂಜೆ 4 ಗಂಟೆಗೆ ಪ್ರಸಿದ್ಧ ಪೈಲ್ವಾನರ ಕುಸ್ತಿಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಜಾತ್ರೆಯಲ್ಲಿ ಜನಸಂದಣಿ ಇರುವುದರಿಂದ ಭಕ್ತರು ಮಾಸ್ಕ್ ಕಡ್ಡಾಯವಾಗಿ ಧರಿಸುವ ಮೂಲಕ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಿಕೊಳ್ಳಬೇಕು ಎಂದು ಭಕ್ತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಈರಣ್ಣ ಗಂಗಾವತಿ, ಅರ್ಚಕ ಸಂಗಯ್ಯ ಸರಗಣಾಚಾರಿ, ರಾಚಯ್ಯ ಸರಗಣಾಚಾರಿ, ಚಂದ್ರಶೇಖರ ಶಿಕ್ಕೇರಿ, ರಂಗಪ್ಪ ಜಳೇಂದ್ರ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))