ಕಲಬುರಗಿಯಲ್ಲಿ ಮುಡಾ ಮಾದರಿ 100 ಕೋಟಿಗೂ ಅಧಿಕ ಹಗರಣ

| Published : Jul 29 2024, 12:47 AM IST

ಸಾರಾಂಶ

ಕಲಬುರಗಿ ಜಿಲ್ಲೆಯಲ್ಲಿಯೂ ನೂರು ಕೋಟಿಗೂ ಅಧಿಕವಾದ ಭ್ರಷ್ಟಾಚಾರ ನಡೆದಿದ್ದು, ಈ ಸಂಬಂಧ 2022ರಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರು ದೂರು ದಾಖಲಿಸಿದ್ದರೂ ಕೂಡಾ, ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ, ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮೈಸೂರಿನ ಮುಡಾ ಮಾದರಿಯಂತೆ ಕಲಬುರಗಿ ಜಿಲ್ಲೆಯಲ್ಲಿಯೂ ನೂರು ಕೋಟಿಗೂ ಅಧಿಕವಾದ ಭ್ರಷ್ಟಾಚಾರ ನಡೆದಿದ್ದು, ಈ ಸಂಬಂಧ 2022ರಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರು ದೂರು ದಾಖಲಿಸಿದ್ದರೂ ಕೂಡಾ, ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ, ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೊರವಲಯದ ಗುಲ್ಬರ್ಗ ವಿಶ್ವವಿದ್ಯಾಲಯದ ಬಳಿಯಿರುವ ಸ್ಥಳವನ್ನು ಖರ್ಗೆ ಒಡೆತನದ ಸಿದ್ಧಾರ್ಥ ವಿಹಾರ ದತ್ತಿ ಸಂಸ್ಥೆ ಹೆಸರಿನಲ್ಲಿ ಮಾಡಿಕೊಳ್ಳಲಾಗಿದೆ. 100 ಕೋಟಿಗೂ ಅಧಿಕವಾಗಿರುವ ಜಮೀನನ್ನು ವ್ಯವಸ್ಥಿತವಾಗಿ ಕಬಳಿಕೆ ಮಾಡಲಾಗಿದೆ ಎಂದು ಹೇಳಿದರು.

19 ಎಕರೆ ಜಮೀನಿನಲ್ಲಿ ಸರ್ಕಾರದಿಂದ ಅನುದಾನ ಪಡೆದು ಕಟ್ಟಡ ಸಹ ನಿರ್ಮಾಣ ಮಾಡಲಾಗಿದೆ. ಕುಸನೂರು ಗ್ರಾಮದ ಸರ್ವೇ ನಂ- 88/1ರಲ್ಲಿ ಕಾನೂನು ಬಾಹಿರವಾಗಿ ಸಿದ್ಧಾರ್ಥ ವಿಹಾರ ದತ್ತಿ ಸಂಸ್ಥೆಗೆ ಜಮೀನು ಮಂಜೂರು ಮಾಡಲಾಗಿತ್ತು. ಇಂದಿನ ದಿನಗಳಲ್ಲಿ ಆ ಶಿಕ್ಷಣ ಸಂಸ್ಥೆಯೂ ನೂರಾರು ಕೋಟಿಗೂ ಅಧಿಕ ಬೆಲೆಬಾಳುವ ಮೌಲ್ಯವನ್ನು ಹೊಂದಿದ್ದು, ಈ ಕಬಳಿಕೆಯ ಕುರಿತು 2022ರಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳು ದೂರು ನೀಡಿದ್ರೂ ಕೂಡಾ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಡಿಸಿ- ಎಸಿ ಬಾಯಿಗೆ ಬೀಗ: ಖರ್ಗೆ ಒಡೆತನದ ಸಿದ್ಧಾರ್ಥ ವಿಹಾರ ದತ್ತಿ ಸಂಸ್ಥೆ ಹೆಸರಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಬಳಿಯಿರುವ ಜಾಗವನ್ನು ವ್ಯವಸ್ಥಿತವಾಗಿ ಕಬಳಿಸಿ ನೂರು ಕೋಟಿಗೂ ಅಧಿಕ ಭ್ರಷ್ಟಾಚಾರ ಎಸಗಲಾಗಿದೆ ಎಂದು 2022ರಲ್ಲಿ ದೂರು ನೀಡಿದ್ರೂ, ಇಲ್ಲಿಯ ಕಲಬುರಗಿ ಡಿಸಿ ಆಗಲಿ ಎಸಿ ಆಗಲಿ ಬಾಯಿಗೆ ಬೀಗ ಹಾಕಿಕೊಂಡು ಕುಳಿತಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಇದರಿಂದ ಒಂದಂತು ಸಾಬೀತಾಗಿದೆ ಕಲಬುರ್ಗಿಯಲ್ಲಿ ಡಿಸಿ -ಎಸಿಗಳ ಆಡಳಿತವಿಲ್ಲ ಎಂಬಂಶ ಎದ್ದು ಕಾಣುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಗಂಗಾಧರ ಕುಲಕರ್ಣಿ, ಮಲಕಣ್ಣಾ ಹಿರೇ ಪೂಜಾರಿ, ಶಶಾಂಕ್ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಲಿ

ಮೈಸೂರಿನ ಮುಡಾ ಮಾದರಿಯಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಊರಲ್ಲಿ ಸಿದ್ಧಾರ್ಥ ವಿಹಾರ ದತ್ತಿ ಸಂಸ್ಥೆಯ ಹೆಸರಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಬಳಿಯಿರುವ 100 ಕೋಟಿಗೂ ಅಧಿಕ ಮೌಲ್ಯದ ಜಾಗವನ್ನು ಕಬಳಿಸುವ ಮೂಲಕ ಭ್ರಷ್ಟಾಚಾರ ನಡೆದಿದ್ದರೂ, ಇಲ್ಲಿಯ ಸಚಿವರು ಮಾತ್ರ ತುಟಿಕ್ ಪಿಟಿಕ್ ಅಂತಿಲ್ಲ. ಜಿಲ್ಲೆಯಲ್ಲಿ ಭ್ರಷ್ಟಾಚಾರಗಳು, ಹಲ್ಲೆಗಳು ನಡೆಯುತ್ತಿದ್ದರು ಸಚಿವರು ಯಾಕೆ ಮೌನ ವಹಿಸಿದ್ದಾರೆಂದು ಮೊದಲು ಉತ್ತರಿಸಲಿ. ಆಡಳಿತ ನಡೆಸುವುದಕ್ಕೆ ಆಗದೆ ಹೋದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೊಲಗಲಿ ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.ಬಿಜೆಪಿಯವರು ಅಯೋಗ್ಯರು: ಮುತಾಲಿಕ್‌

2022ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಇತ್ತು. ಆಗ ಯಾಕೆ ಕ್ರಮಕೈಗೊಂಡಿಲ್ಲ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ ಮುತಾಲಿಕ್, ಹೌದು ಬಿಜೆಪಿ ಅಧಿಕಾರಕ್ಕೆ ಇತ್ತು. ಆದರೆ, ಬಿಜೆಪಿಯವರು ಅಯೋಗ್ಯರು. ಅನ್ಯಾಯ, ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಲಿಲ್ಲ. ಬಿಜೆಪಿಯವರ ಗಂಡಸ್ಥನ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು. ತಮ್ಮದೇ ಪಕ್ಷದ ಅಭ್ಯರ್ಥಿ ಕುರಿತು ಮಾತನಾಡದ ಕಲಬುರಗಿ ಜಿಲ್ಲಾ ಬಿಜೆಪಿ ಘಟಕಕವನ್ನು ಸಂಪೂರ್ಣವಾಗಿ ವಿಸರ್ಜನೆ ಗೊಳಿಸಬೇಕು ಎಂದು ಘರ್ಜಿಸಿದರು.