ಮುಡಾ ಹಗರಣದಿಂದ ಸಿದ್ದರಾಮಯ್ಯ ಭವಿಷ್ಯ ಅಂತ್ಯ: ಬೆಲ್ಲದ

| Published : Sep 25 2024, 12:47 AM IST / Updated: Sep 25 2024, 12:48 AM IST

ಸಾರಾಂಶ

ಕಾಂಗ್ರೆಸ್ ದೊಡ್ಡ ಪಕ್ಷ. ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರಯುತವಾಗಿ ರಾಜೀನಾಮೆ ನೀಡಬೇಕು. ವಿಚಾರಣೆ ನಡೆಯುವ ವೇಳೆ ಸಿಎಂ ಸ್ಥಾನದಲ್ಲಿ ಇರುವುದು ಸೂಕ್ತವಲ್ಲ ಎಂದು ಅರವಿಂದ ಬೆಲ್ಲದ ಹೇಳಿದ್ದಾರೆ.

ಹುಬ್ಬಳ್ಳಿ:

ಮುಡಾ ಹಗರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನವೇ ಅಂತ್ಯವಾಗಲಿದೆ ಎಂದು ‍ವಿಧಾನಸಭೆಯ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಭವಿಷ್ಯ ನುಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ, ಭ್ರಷ್ಟಚಾರವನ್ನು ಪರಮಾವಧಿಗೆ ಮುಟ್ಟಿಸಿದ್ದಾರೆ. ಅವರು ಮಾಡಿದ ತಪ್ಪಿಗೆ ನ್ಯಾಯಾಲಯದ ತೀರ್ಪು ಮೊದಲ ಹಂತದ ಶಿಕ್ಷೆಯಾದಂತಿದೆ ಎಂದರು.

ಮುಡಾ ಹಗರಣವಾಗಿರುವ ಕುರಿತು ರಾಜ್ಯಪಾಲರು ಮುಖ್ಯಮಂತ್ರಿಗೆ ಸ್ಪಷ್ಟನೆ ಕೇಳಿದಾಗ ಅವರು ನೀಡಲಿಲ್ಲ. ಆದ್ದರಿಂದ ರಾಜ್ಯಪಾಲರು ಅನಿವಾರ್ಯವಾಗಿ ಪ್ರಾಸಿಕ್ಯೂಷನ್‌ಗೆ ನೀಡಿದ್ದರು. ಆದರೆ, ಮುಖ್ಯಮಂತ್ರಿಗಳು ಸಂವಿಧಾನಕ್ಕೆ ಬೆಲೆ ನೀಡುವ ಬದಲು ಅದರ ವಿರುದ್ಧ ಹೈಕೋರ್ಟ್‌ ಮೊರೆ ಹೋಗಿದ್ದರು. ಈಗ ಕೋರ್ಟ್ ಅವರ ವಿರುದ್ಧ ತೀರ್ಪು ನೀಡಿದೆ. ಕಾನೂನಿನಲ್ಲಿ ಎಲ್ಲರೂ ಸಮಾನರು ಎಂಬ ಆದೇಶ ಬಂದಿದೆ. ರಾಜ್ಯದ ಜನರು ನಿರೀಕ್ಷೆಯು ಇದೆ ಆಗಿತ್ತು. ಕಾಂಗ್ರೆಸ್‌ಗೆ ಹೊಸ ಸಿಎಂ ನೋಡುವ ಅನಿವಾರ್ಯ ಬಂದಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ದೊಡ್ಡ ಪಕ್ಷ. ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರಯುತವಾಗಿ ರಾಜೀನಾಮೆ ನೀಡಬೇಕು. ವಿಚಾರಣೆ ನಡೆಯುವ ವೇಳೆ ಸಿಎಂ ಸ್ಥಾನದಲ್ಲಿ ಇರುವುದು ಸೂಕ್ತವಲ್ಲ. ಹೈಕಮಾಂಡ್‌ಗೆ ಬೇರೆ ಅನಿವಾರ್ಯವಿಲ್ಲ. ಸಿದ್ದರಾಮಯ್ಯ ರಾಜೀನಾಮೆ ನೀಡುವ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಮೊದಲೇ ಸುಳಿವಿದ್ದು, ಈಗಾಗಲೇ ಹಲವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಟವೆಲ್ ಹಾಕಿದ್ದಾರೆ ಎಂದರು.

ಕರ್ನಾಟಕದಲ್ಲಿ ಹಿಂದೆ ಕಾಣದಂತಹ ಹಗರಣ, ಕೋಮು ಗಲಭೆಯಾಗುತ್ತಿವೆ. ಮೈತುಂಬ ಕಪ್ಪು ಇದ್ದವರಿಗೆ ಕಪ್ಪು ಚುಕ್ಕೆ ಇಲ್ಲ ಎಂಬುವುದು ಹಾಸ್ಯಾಸ್ಪದ. ಮಾತನಾಡುವುದು ಸಮಾಜವಾದ. ಮಾಡುವುದು ಭ್ರಷ್ಟಾಚಾರ. ಈಗ ನೋಡಿದರೆ ಬಿಜೆಪಿ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.