ಮುಡಾ, ವಾಲ್ಮೀಕಿ ನಿಗಮ ಹಗರಣ ಸಿಬಿಐ ತನಿಖೆಯಾಗಲಿ

| Published : Jul 13 2024, 01:33 AM IST / Updated: Jul 13 2024, 09:45 AM IST

ಸಾರಾಂಶ

ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

 ದಾವಣಗೆರೆ :  ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದರು.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪತ್ನಿಗೆ ಸೇರಿದ 3.16 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಬದಲಿಯಾಗಿ ಮುಡಾದಿಂದ ಕಾನೂನು ಪ್ರಕಾರ 1-2 ನಿವೇಶನ ನೀಡಬೇಕು. ಆದರೆ, ಮೈಸೂರು ಮಧ್ಯ ಭಾಗದಲ್ಲಿ ಅತಿ ದುಬಾರಿ ಮೌಲ್ಯದ 14 ನಿವೇಶನಗಳನ್ನು ಸಿಎಂ ಕುಟುಂಬ ಪಡೆದಿರುವುದೇ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 1992ರಲ್ಲಿ ಸ್ವಾಧೀನಪಡಿಸಿಕೊಂಡ ಜಮೀನನ್ನು ಸಿದ್ದರಾಮಯ್ಯ ಅವರ ಪತ್ನಿಯ ಸಹೋದರ ಖರೀದಿ ಮಾಡಿ, ಪಾರ್ವತಿ ಸಿದ್ದರಾಮಯ್ಯ ಅವರಿಗೆ ಗಿಫ್ಟ್ ಡೀಡ್ ನೀಡಲು ಹೇಗೆ ಸಾಧ್ಯ? ಕಾನೂನು ಪ್ರಕಾರ 1 ಎಕರೆ ಜಮೀನು ಸ್ವಾಧೀನಪಡಿಸಿಕೊಂಡರೆ 40-60 ಅಡಿ ಸುತ್ತಳತೆಯ ಜಾಗ ಬದಲಿಯಾಗಿ ನೀಡಬಹುದು. 3 ಎಕರೆಗೆ 14 ಸೈಟ್ ನೀಡಿದ್ದು ಕಾನೂನು ಪ್ರಕಾರ ಮಹಾಪರಾಧ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಸಿಎಂ ಹಗರಣದ ಬಗ್ಗೆ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬಡವರಿಗೆ ನೀಡಬೇಕಾದ ನಿವೇಶನವನ್ನು ಸಿಎಂ ತಾವೇ ತೆಗೆದುಕೊಂಡಿದ್ದು ದೊಡ್ಡ ತಪ್ಪು. ವಾಸ್ತವವಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ₹62 ಕೋಟಿ ಆಗುತ್ತದೆ. ₹18 ಕೋಟಿ ತೆಗೆದುಕೊಂಡಿದ್ದೇವೆ ಎಂಬುದಾಗಿ ಉಡಾಫೆಯಾಗಿ ಉತ್ತರ ನೀಡಿದ ಸಿದ್ದರಾಮಯ್ಯ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣಗಳನ್ನು ಸಿಬಿಐ ತನಿಖೆಗೊಪ್ಪಿಸಬೇಕು ಎಂದು ತಾಕೀತು ಮಾಡಿದರು.

ಮುಡಾದಂತೆ ರಾಜ್ಯದ ಇತರೆ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲೂ ನಿವೇಶನ ಹಂಚಿಕೆ ಇತರೆ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಈ ಎಲ್ಲವನ್ನೂ ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆಗೆ ಮಾಡಿಸಬೇಕು. ಬಿಜೆಪಿಯವರೋ, ಕಾಂಗ್ರೆಸ್ಸಿನವರೋ ಯಾರೇ ತಪ್ಪು ಮಾಡಿದ್ದರೂ ಅಂಥವರ ವಿರುದ್ಧ ಶಿಕ್ಷೆ ಕೈಗೊಳ್ಳಬೇಕು. ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಅವ್ಯವಹಾರ ಆಗಿದೆ. ನ್ಯಾಯಸಮ್ಮತ ತನಿಖೆಗಾಗಿ ಹಣಕಾಸು ಇಲಾಖೆ ಹೊಂದಿರುವ ಸಿಎಂ ಸಿದ್ದರಾಮಯ್ಯ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಲಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಬಿ,ಎಸ್.ಜಗದೀಶ, ಶಿವನಹಳ್ಳಿ ರಮೇಶ, ಶ್ರೀನಿವಾಸ ಟಿ.ದಾಸಕರಿಯಪ್ಪ, ಧನಂಜಯ ಕಡ್ಲಬಾಳು, ಕೊಂಡಜ್ಜಿ ಜಯಪ್ರಕಾಶ ಇತರರು ಇದ್ದರು.

5 ಪ್ರಮುಖ ಯೋಜನೆಗೆ ಅನುದಾನ ಇದೆ: ಸಿದ್ದೇಶ್ವರ

- ಅವುಗಳನ್ನೇ ಮುಂದುವರಿಸಲು ನೂತನ ಸಂಸದೆಗೆ ಸಲಹೆ ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಐದು ಪ್ರಮುಖ ಯೋಜನೆಗಳಿಗೆ ನಾನು ಸಂಸದನಾಗಿದ್ದ ವೇಳೆ ಅನುದಾನ ಮಂಜೂರಾಗಿದೆ. ಅದನ್ನು ಬಳಸಿಕೊಂಡು ಹಾಲಿ ಸಂಸದರು ಅಭಿವೃದ್ಧಿ ಕಾರ್ಯ ಮುಂದುವರಿಸಲು ಸಲಹೆ ನೀಡುವೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಡಾ. ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಐದು ಪ್ರಮುಖ ಯೋಜನೆಗಳಿಗೆ ಅನುದಾನವೂ ಮಂಜೂರಾಗಿದ್ದು, ನೂತನ ಸಂಸದರು ಅದನ್ನು ಪರಿಶೀಲಿಸಲಿ. ಸಂಸದನಾಗಿ ನನಗೂ 20 ವರ್ಷ ಅನುಭವವಿದ್ದು, ಸಲಹೆ ಕೇಳಿದರೆ ಖಂಡಿತಾ ನೀಡತ್ತೇನೆ ಎಂದರು.

ಸಂಸದರೆ ಬುದ್ಧಿವಂತರಿದ್ದರೆ ಸಮರ್ಪಕವಾಗಿ ಕೆಲಸ ಮಾಡಲಿ. ಹೊಸದಾಗಿ ಯಾವುದೇ ಅನುದಾನ ಬಂದಿಲ್ಲ. ನಾನು ಸಂಸದನಿದ್ದಾಗ ತಂದ ಯೋಜನೆಗಳಿಗೆ ಅನುದಾನ ಇದೆ. ಅದನ್ನು ಮುಂದುವರಿಸುವಂತೆ ಹಾಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಸಲಹೆ ನೀಡುತ್ತೇನೆ ಎಂದು ಸಿದ್ದೇಶ್ವರ ಹೇಳಿದರು.

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಸಂದರ್ಭ ಹಗರಣ ಮಾಡಿದ್ದೇನೆಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಹಗರಣ ನಡೆದಿದ್ದರೆ ಈಗ ನಿಮ್ಮದೇ ಸರ್ಕಾರವಿದೆ, ಯಾರು ಹಗರಣ ಮಾಡಿದ್ದಾರೆ, ಯಾರು ಯಾರೆಲ್ಲಾ ಪಾಲುದಾರರಿದ್ದಾರೆಂಬ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಆರೋಪಕ್ಕೆ ಸಿದ್ದೇಶ್ವರ ಪ್ರತಿಕ್ರಿಯಿಸಿದರು.

ಟಾಪ್‌ ಕೋಟ್‌ ಮುಡಾ ನಿವೇಶನ ಹಗರಣದಲ್ಲಿ ಸಿಲುಕಿದ ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸೇರಿದ ತಾವು 2ನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಕ್ಕೆ ಬಿಜೆಪಿಯವರಿಗೆ ಹೊಟ್ಟೆಯುರಿ ಎಂಬ ಹೇಳಿಕೆ ಒಳ್ಳೆಯ ಮಾತಲ್ಲ

- ಜಿ.ಎಂ. ಸಿದ್ದೇಶ್ವರ, ಮಾಜಿ ಸಂಸದ