ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೂಡಲಪಾಯ ಪ್ರದರ್ಶಕ ಕಲೆಗಳನ್ನು ಉಳಿಸಿಕೊಳ್ಳಬೇಕು. ಈ ಕಲೆ ಉಳಿಯಬೇಕೆಂದರೆ ಬದಲಾವಣೆಗೆ ಒಡ್ಡಿಕೊಳ್ಳಬೇಕಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್ ಗೌಡ ತಿಳಿಸಿದರು.ನಗರದ ರಂಗಾಯಣದ ಭೂಮಿಗೀತದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯು ರಂಗಾಯಣ, ಮಹಾರಾಜ ಕಾಲೇಜು ಜಾನಪದ ವಿಭಾಗ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂಡಲಪಾಯ ಬಯಲಾಟ ಪರಂಪರೆ ಕುರಿತ ವಿಚಾರ ಸಂಕಿರಣದಲ್ಲಿ ಅವರು, ಮೂಡಲಪಾಯ ಬಯಲಾಟದ ಹೊಸ ಸಾಧ್ಯತೆಗಳು ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಡಲಪಾಯ ಪ್ರದರ್ಶಕ ಕಲೆಯು ಎಷ್ಟು ಸಮೃದ್ಧವಾಗಿದೆ. ಬಳಕೆಯಾಗುವ ಕಿರೀಟ, ಆಹಾರ್ಯ ಸಾಧನಗಳೆಲ್ಲವನ್ನೂ ಮರದಲ್ಲೇ ಮಾಡಲಾಗುತ್ತದೆ. ಶ್ರಮಿಕ ವರ್ಗಕ್ಕೆ ಮಾತ್ರ ಭಾರದ ಉಡುಪು ಧರಿಸಿ ಅಭಿನಯಿಸುವ ಶಕ್ತಿಯಿದೆ ಎಂದು ಅವರು ಹೇಳಿದರು.ಜನಪದರಿಂದಲೇ ಶಾಸ್ತ್ರೀಯ ಸಂಗೀತಗಾರರು ರಾಗಗಳನ್ನು ತೆಗೆದುಕೊಂಡರು. ಆದರೆ, ಜನಪದರಿಗೆ ರಾಗ ಏನೆಂಬುದು ಗೊತ್ತಿಲ್ಲ. ತ್ರಿಪುಡೆಯಂಥ ರಾಗಗಳು ಕರತಾಳ ಮೇಳದಿಂದ ಬಂದದ್ದು, ಶಾಸ್ತ್ರೀಯ ಸಂಗೀತ ಕಲಾವಿದರಿಗೆ ನೀಡುವ ಗೌರವ ಹಾಗೂ ಭತ್ಯೆಯನ್ನು ಜಾನಪದ ಕಲಾವಿದರಿಗೂ ನೀಡಬೇಕು. ತಮಟೆ ಏಟುಗಳು, ವೀರಗಾಸೆಯ ಹೆಜ್ಜೆಗಳು ಸೇರಿದಂತೆ ಜಾನಪದ ಕಲೆಗಳ ಮಟ್ಟುಗಳನ್ನು ವಿಸ್ತರಿಸುವ ಪ್ರಯೋಗಗಳು ನಡೆಯಬೇಕು. ಯಕ್ಷಗಾನವನ್ನು ಶಿಸ್ತಿನಿಂದ ಹೇಳಿಕೊಡುವವರಿದ್ದಾರೆ. ಮೂಡಲಪಾಯ ಹೇಳಿಕೊಡುವ ವಿಧಾನ ಕಲಾವಿದರಿಗೇ ತಿಳಿದಿಲ್ಲ. ಈ ಸವಾಲುಗಳನ್ನು ಮೀರಿ ಕಲೆಯನ್ನು ರಕ್ಷಿಸಬೇಕು ಎಂದರು.
ಅಕಾಡೆಮಿಗಳು ಕಾರ್ಯಾಗಾರವನ್ನು ಮಾಡಬೇಕು. ಬಾಯಿ ಮಾತಿನಲ್ಲಿ ಜಾನಪದ ನಮ್ಮ ಅಸ್ಮಿತೆ ಎಂದರೆ ಸಾಲದು. ಹಣ ಕೊಡಬೇಕು. ಮಹಾರಾಜ ಕಾಲೇಜು ಸೇರಿದಂತೆ ಇರುವ ಕೆಲವೇ ಕಾಲೇಜುಗಳಲ್ಲಿ ಜಾನಪದ ವಿಭಾಗವಿದ್ದರೂ ಅಧ್ಯಯನಕ್ಕೇ ಮಾತ್ರ ಸೀಮಿತವಾಗಿದೆ. ಅಲ್ಲಿ ಪ್ರಯೋಗಗಳು ನಡೆಯಬೇಕಿವೆ. ಐಚ್ಛಿಕ ವಿಷಯವಾಗಿ ಪರಿಗಣಿಸಬೇಕಿದೆ. ಶಾಲಾ ಕಾಲೇಜುಗಳಲ್ಲೂ ಜಾನಪದ ಪ್ರದರ್ಶಕ ಕಲೆಗಳನ್ನು ಕಲಿಯಲು ಅವಕಾಶ ನೀಡಬೇಕು. ಜಾನಪದ ಅಧ್ಯಯನ ಮಾಡಿರುವವರನ್ನು ಶಿಕ್ಷಕರು ಹಾಗೂ ಉಪಾನ್ಯಾಸಕರಾಗಿ ನೇಮಿಸಬೇಕು ಎಂದು ಅವರು ತಿಳಿಸಿದರು.ಸಾಹಿತಿ ಪ್ರೊ.ಡಿ.ಕೆ. ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಪ್ರಸಾರಂಗದ ನಿರ್ದೇಶಕ ಪ್ರೊ. ನಂಜಯ್ಯ ಹೊಂಗನೂರು, ವಿಮರ್ಶಕರಾದ ಪ್ರೊ. ಮೈಲಹಳ್ಳಿ ರೇವಣ್ಣ, ಡಿ. ತಿಪ್ಪಣ್ಣ, ಕಲಾವಿದ ಮರಿಯಯ್ಯ, ಮಹಾರಾಜ ಕಾಲೇಜು ಜಾನಪದ ವಿಭಾಗದ ಮುಖ್ಯಸ್ಥೆ ಪ್ರೊ.ಎಚ್.ಆರ್. ಚೇತನಾ, ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮನಾಪುರ ಮೊದಲಾದಲರು ಇದ್ದರು.