ಸಾರಾಂಶ
ಹುಬ್ಬಳ್ಳಿ: ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗಿಂತ ಹೆಚ್ಚು ಮಹಿಳೆಯರೇ ಸಾಧನೆ ಮಾಡುತ್ತಿದ್ದು, ಬಾಹ್ಯಾಕಾಶದಲ್ಲಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮಾಡಿದ ಸಾಧನೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಇಲ್ಲಿನ ಜೆಸಿ ನಗರದ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಭಾಭವನದಲ್ಲಿ ಕೆಸಿಸಿಐ ಮಹಿಳಾ ಉದ್ದಿಮೆದಾರರ ಸಮಿತಿ ವತಿಯಿಂದ ಶುಕ್ರವಾರ ಸಂಜೆ ನಡೆದ ವೃದ್ಧಿ -2025ರ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಆಧುನಿಕತೆ ಹಾಗೂ ಎಐ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆಯಾಗುತ್ತಿವೆ. ಆದರೆ, ಮೊದಲಿನಿಂದಲೂ ಮಹಿಳೆಯರನ್ನು ಕಾಡುತ್ತಿರುವ ತಾತ್ಸಾರ ಭಾವನೆ ಹಾಗೂ ಪುರುಷ ಪ್ರಧಾನ ಧೋರಣೆ ಇಂದಿಗೂ ಮಾತ್ರ ಕಡಿಮೆಯಾಗದಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದರು.
ಮಹಿಳೆಯರು ಎಷ್ಟೇ ಸಾಧನೆಯ ಶಿಖರವೇರುತ್ತಿದ್ದರೂ ಅವರನ್ನು ಸಮಾಜವು ನಿರ್ಲಕ್ಷ್ಯ ಮಾಡುತ್ತಿದೆ. ಹೆಣ್ಣಿಗಿಂತ ಗಂಡು ಮಗು ಶ್ರೇಷ್ಠ ಎಂಬ ಮನೋಭಾವನೆ ಇಂದಿಗೂ ಮುಂದುವರೆಯುತ್ತಿರುವುದು ದುರದೃಷ್ಟಕರ ಸಂಗತಿ. ಪಾಲಕರು ಹೆಣ್ಣು ಗಂಡು ಎಂದು ತಾತ್ಸಾರ ಮಾಡದೇ, ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಅವಳು ಮತ್ತಷ್ಟು ಮಹಾನ್ ಸಾಧನೆ ಮಾಡುತ್ತಾಳೆ ಎಂದರು.ಕೆಸಿಸಿಐ ಸಂಸ್ಥೆಯಲ್ಲಿ 3500 ಸದಸ್ಯರ ಪೈಕಿ 500ಕ್ಕೂ ಹೆಚ್ಚು ಮಹಿಳೆಯರು ಇರುವುದು ಹೆಮ್ಮೆಯ ಸಂಗತಿ. ಪುರುಷರಿಗಿಂತ ಅದ್ಭುತ ಶಕ್ತಿ ಸಾಮರ್ಥ್ಯ ಭಗವಂತ ಮಹಿಳೆಯರಿಗೆ ನೀಡಿದ್ದಾನೆ. ಅದನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಮಿಸ್ ಇಂಡಿಯಾ(2013ರ) ವಿಜೇತೆ ಹಾಗೂ ನಟಿ ಸಿಮ್ರಾನ್ ಅಹುಜಾ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನದಲ್ಲಿ ನವರಸಗಳ ಅನುಭವ ಆಗಬೇಕು. ಅಂದಾಗ ಮಾತ್ರ ಜೀವನಕ್ಕೆ ಹಾಗೂ ಬದುಕಿಗೆ ಅರ್ಥ ಬರುತ್ತದೆ. ಇಂದಿನ ಎಐ ಯುಗದಲ್ಲಿ ನಾವಿದ್ದೇವೆ. ಆದರೆ ಆಯಾ ಯುಗದಲ್ಲಿ ಅದರದೆಯಾದ ಕೆಲವು ಸವಾಲುಗಳು ಇರುತ್ತವೆ. ಅವುಗಳನ್ನು ಎದುರಿಸಿದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದರು.ತಾವು ಬದುಕಿನಲ್ಲಿ ಎದುರಿಸಿದ ಸವಾಲು ಹಾಗೂ ಕಷ್ಟದ ದಿನಗಳನ್ನು, ತದ ನಂತರ ಫ್ಯಾಷನ್, ಸಿನಿಮಾರಂಗ ಮತ್ತು ಆ್ಯಂಕರಿಂಗ್ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಎಳೆಎಳೆಯಾಗಿ ವಿವರಿಸಿದರು. ನಂತರ ನಡೆದ ಸಂವಾದದಲ್ಲಿ ಕೇಳುಗರ ಪ್ರಶ್ನೆಗೆ ನಟಿ ಸಿಮ್ರಾನ್ ಅಹುಜಾ ಉತ್ತರಿಸಿದರು.
ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗಾರ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ, ವಿರೇಶ ಮೊಟಗಿ, ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಮಹಿಳಾ ಉದ್ದಿಮೆದಾರರ ಸಮಿತಿಯ ಅಧ್ಯಕ್ಷೆ ನೀಪಾ ಮೆಹತಾ ಸೇರಿದಂತೆ ಮಹಿಳಾ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಮಹಿಳಾ ಸಾಧಕರಿಗೆ ಸನ್ಮಾನ:ಸಮಾರಂಭದಲ್ಲಿ ಬಸವಾದಿ ಶರಣರ ವಚನ ವ್ಯಾಖ್ಯಾನ ಒಳಗೊಂಡ ಅನೇಕ ಸಂಕಲನಗಳನ್ನು ಪ್ರಕಟಿಸಿದ ಶರಣೆ ಗಿರಿಜಕ್ಕ ಧರ್ಮರಡ್ಡಿ, ಮಹಿಳಾ ಉದ್ದಿಮೆದಾರರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜ್ಯೋತಿ ಎಂ. ಹಿರೇಮಠ ಹಾಗೂ ಶಿಲ್ಪಾ ಮೆಡಿಕೇರ್ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಕೆ.ಆರ್.ರಾಜಶ್ರೀ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.