ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರು ಗುರುವಾರ ಎತ್ತಿನಗಾಡಿ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ವಿಶೇಷವಾಗಿ ವಾಹನ ಸಿದ್ಧಗೊಂಡಿದ್ದರೂ ಕೊನೆಯ ಗಳಿಗೆಯಲ್ಲಿ ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ ಪಾಪಣ್ಣ ಅವರು ಸಾರಥಿಯಾಗಿ, ತಾವು ಸಾಕಿರುವ ಎತ್ತುಗಳಿಗೆ ಟೈರ್‌ಗಾಡಿ ಹೂಡಿ, ಅದರಲ್ಲಿ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದ ಹನುಮೇಗೌಡರು, ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಎಸ್, ಆರ್.ಶ್ರೀನಿವಾಸ್, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಮಾಜಿ ಸಚಿವ ವೆಂಕಟರವಣಪ್ಪ, ಕೆ.ಎಸ್.ಕಿರಣ್ ಕುಮಾರ್ ಸೇರಿದಂತೆ ಹಲವರು ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಅಶೋಕ ರಸ್ತೆ ಮೂಲಕ ಮೆರವಣಿಗೆ ನಡೆಸಿ, ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಕುಣಿಗಲ್ ತಾಲೂಕಿನ ಸೋಬಗಾನಹಳ್ಳಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯ ದಲ್ಲಿ ಕುಟಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದ ಮುದ್ದಹನುಮೇಗೌಡ ಬಳಿಕ ಮೊದಲ ಸೆಟ್ ನಲ್ಲಿ ಚುನಾವಾಣಾಧಿಕಾರಿ ಶುಭಾ ಕಲ್ಯಾಣ್ ಗೆ ನಾಮಪತ್ರ ಸಲ್ಲಿಸಿದರು. ಬಳಿಕ ತುಮಕೂರಿನ ಟೌನ್‌ಹಾಲ್‌ನಿಂದ ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಎರಡನೇ ಸೆಟ್‌ನಲ್ಲಿ ನಾಮಪತ್ರ ಸಲ್ಲಿಸಿದರು.ಎಐಸಿಸಿ ಕಾರ್ಯದರ್ಶಿ ಮಯೂರು ಜಯಕುಮಾರ್ ಮಾತನಾಡಿ, ದೇಶದಲ್ಲಿ ಬಿಜೆಪಿ ಸರಕಾರ ತನ್ನ ಕೊನೆಯದಿನಗಳನ್ನು ಎನಿಸುತ್ತಿದೆ.ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ ರೀತಿಯಲ್ಲಿಯೇ ಕೇಂದ್ರದಲ್ಲಿಯೂ ಹಲವು ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿಗೆ ತರಲಿದೆ ಎಂದರು..ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,2014ರಿಂದ 2019ರವರೆಗೆ ಐದು ವರ್ಷಗಳ ಕಾಲ ಸಂಸದನಾಗಿ ಈ ಜಿಲ್ಲೆ, ರಾಜ್ಯದ ಹಲವಾರು ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಾಸ್ತಾಪಿಸುವ ಮೂಲಕ ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ನಡೆಸಿದ್ದೇನೆ. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಿದ್ದೇನೆ. ರಾಜ್ಯದ ನೆಲ, ಜಲ, ಭಾಷೆ, ಕೈಗಾರಿಕೆ, ರೈತರ ಸಮಸ್ಯೆ, ಕೊಬ್ಬರಿ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಿ, ಪರಿಹಾರ ದೊರಕಿಸುವ ಪ್ರಯತ್ನ ನಡೆಸಿದ್ದು, ಮುಂದೆ ಜನತೆ ಅವಕಾಶ ಮಾಡಿಕೊಟ್ಟರೆ, ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪಾರ್ಲಿಮೆಂಟಿನ ಒಳ, ಹೊರಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್,ವೆಂಕಟರಮಣಪ್ಪ, ಎಸ್.ಷಪಿ ಅಹಮದ್,ಬೆಮೆಲ್ ಕಾಂತರಾಜು, ಕೆ.ಎಸ್.ಕಿರಣ ಕುಮಾರ್, ರಾಜ್ಯ ವಕ್ತಾರ ನಿಕೇತ್‌ರಾಜ್ ಮೌರ್ಯ ಅವರುಗಳು ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್,ಗಂಗಹನುಮಯ್ಯ,ಇಕ್ಬಾಲ್ ಅಹಮದ್,ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಲ ರಾಜಣ್ಣ,ಸದಸ್ಯರಾದ ರಾಧಾ ದೇವರಾಜು, ಮಾಜಿ ಮೇಯರಗಳಾದ ಪ್ರಭಾವತಿ, ಫರ್ಹಾನ ಬೇಗಂ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಗೀತಾ ರಾಜಣ್ಣ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ----------------------------------ಸಂವಿಧಾನ ಉಳಿವಿಗಾಗಿ ಬಿಜೆಪಿ ಸೋಲಿಸಿ: ಡಾ.ಜಿ.ಪರಮೇಶ್ವರ್
ಸಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಪಿಐ ಮೂಲಕ ವಿರೋಧ ಪಕ್ಷಗಳನ್ನು ದಮನ ಮಾಡಿ, ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ಬಿಜೆಪಿಯನ್ನು ಸೋಲಿಸುವ ಮೂಲಕ ಅಪಾಯದಲ್ಲಿರುವ ಪ್ರಜಾಪ್ರಭುತ್ರವವನ್ನು ರಕ್ಷಿಸಬೇಕಾಗಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ನಾಮಪತ್ರ ಹಿನ್ನೆಲೆ ನಡೆದ ಮೆರವಣಿಗೆಗೂ ಮುನ್ನ ಮಾತನಾಡಿದ ಅವರು, ಪದೇ ಪದೇ ಸಂವಿಧಾನ ಬದಲಾವಣೆಯ ವಿಚಾರಗಳನ್ನು ಬಿಜೆಪಿ ಸಂಸದರು ಮಾತನಾಡುತ್ತಿದ್ದರು ಮೌನ ವಹಿಸಿ, ಅವರ ಮಾತುಗಳಿಗೆ ಕುಮ್ಮಕ್ಕು ನೀಡುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂವಿಧಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠವೆನಿಸಿಕೊಂಡಿರುವ ಭಾರತದ ಸಂವಿಧಾನವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಬಿಜೆಪಿಯನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದರು.ಇದು ಸತ್ಯ ಮತ್ತು ಅಸತ್ಯದ ನಡುವೆ ನಡೆಯುತ್ತಿರುವ ಹೋರಾಟವಾಗಿದೆ. ಅಸತ್ಯ ಎಷ್ಟೇ ವಿಜೃಂಭಿಸಿದರೂ, ಕೊನೆಗೆ ಸತ್ಯಕ್ಕೆ ಗೆಲುವು ಹಾಗಾಗಿ ಸರಳ, ಸಜ್ಜನ ಹಾಗೂ ಉತ್ತಮ ಸಂಸದೀಯ ಪಟು ಎಂದು ಹೆಸರು ಪಡೆದಿರುವ ಎಸ್.ಪಿ. ಮುದ್ದಹನುಮೇಗೌಡ ಅವರು ಗೆಲ್ಲಬೇಕಿದೆ. ಆ ಮೂಲಕ ಜಿಲ್ಲೆಯ ಜಲ್ವಂತ ಸಮಸ್ಯೆಗಳಾದ ಕೊಬ್ಬರಿ ಬೆಲೆ ಇಳಿಕೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಎಲ್ಲಿಂದಲೋ ಬಂದ ವಿ.ಸೋಮಣ್ಣ ಅವರಿಗೆ ಮತ ಹಾಕುವುದರಿಂದ ಇದು ಸಾಧ್ಯವಿಲ್ಲ. ಹಾಲಿ ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ರಾಜ್ಯದಿಂದ ಆರಿಸಿ ಹೋದ ೨೬ ಬಿಜೆಪಿ ಸಂಸದರು ಒಂದು ದಿನವೂ ರಾಜ್ಯದ ನೆಲ,ಜಲ, ಭಾಷೆಯ ವಿಚಾರದಲ್ಲಿ ದ್ವನಿ ಎತ್ತಿ ಮಾತನಾಡಲಿಲ್ಲ. ಅವರ ಹಾದಿ ಯಲ್ಲಿಯೇ ಇರುವ ಸೋಮಣ್ಣ ಅವರಿಂದ ಏನನ್ನಾದರೂ ನಿರೀಕ್ಷೆ ಮಾಡಲು ಸಾಧ್ಯವೆ ಎಂದು ಪರಮೇಶ್ವರ್ ಪ್ರಶ್ನಿಸಿದರು.ಬರ ಬಂದಾಗ, ನೆರೆ ಬಂದಾಗ ಬಾರದ ಅಮಿತ್ ಷಾ ಇಂದು ಚುನಾವಣೆಗೋಸ್ಕರ ರಾಜ್ಯಕ್ಕೆ ಬಂದ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಸುಳ್ಳು ಹುಟ್ಟಿದ್ದೇ ಬಿಜೆಪಿಯಿಂದ, ಬೀಕರ ಬರಗಾಲದಿಂದ ಇಡೀ ಜನತೆ ತತ್ತರಿಸಿದ್ದು,18 ಸಾವಿರ ಕೋಟಿ ರು. ಪರಿಹಾರ ಕೇಳಿದರೆ ಇದುವೆರಗೂ ನೀಡಿಲ್ಲ ಎಂದರು. -------------------------------------
ಬಿಜೆಪಿ-ಜೆಡಿಎಸ್‌ದು ಅಪವಿತ್ರ ಮೈತ್ರಿ: ರಾಜಣ್ಣಹತ್ತು ವರ್ಷಗಳ ಕಾಲ ಡಿಸಿಸಿ ಅಧ್ಯಕ್ಷರಾಗಿ, ಮೂರು ಬಾರಿ ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿರುವ ಎಸ್.ಪಿ.ಮುದ್ದಹನುಮೇಗೌಡರು ಸರಳ ಸಜ್ಜನಿಕೆಗೆ ಹೆಸರಾದವರು. ಅವರನ್ನು ಈ ಬಾರಿ ಗೆಲ್ಲಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಬಿಜೆಪಿ-ಜೆಡಿಎಸ್‌ದು ಅಪವಿತ್ರ ಮೈತ್ರಿ ಎಂದು ಸಚಿವ ಕೆ.ಎನ್.ರಾಜಣ್ಣ ಕಿಡಿ ಕಾರಿದ್ದಾರೆ.
. ಈ ಹಿಂದೆ ಎರಡು ಪಕ್ಷಗಳ ನಾಯಕರು ಪರಸ್ವರರ ಕುರಿತು ಯಾವ ರೀತಿ ಮಾತನಾಡಿಕೊಂಡಿದ್ದಾರೆ ಎಂಬುದನ್ನು ಒಮ್ಮೆ ಅವಲೋಕಿಸಿದರೆ, ಇದು ಸ್ವಾರ್ಥ ಕುಟುಂಬ ರಾಜಕಾರಣಕ್ಕೆ, ದೇವೇಗೌಡರು ತಮ್ಮ ಕುಟುಂಬದಲ್ಲಿಯೇ ಅಧಿಕಾರ ಉಳಿಯಬೇಕೆಂಬ ಕಾರಣಕ್ಕೆ ಮಾಡಿಕೊಂಡು ಒಪ್ಪಂದವಾಗಿದೆ. ಮಗ, ಮೊಮ್ಮಗ, ಅಳಿಯನಿಗಾಗಿ ದೇವೇಗೌಡರು ಈ ಇಳಿವಯಸ್ಸಿನಲ್ಲಿ ಸುತ್ತುತ್ತಿರುವುದನ್ನು ನೋಡಿದರೆ ನಿಜಕ್ಕೂ ನೋವಾ ಗುತ್ತದೆ. ಅಧಿಕಾರದ ಆಸೆಗೆ ಅವರ ಮಕ್ಕಳು, ಮೊಮ್ಮಕ್ಕಳು ಸಾಯವ ಕಾಲದಲ್ಲಿಯೂ ಅವರಿಗೆ ನೆಮ್ಮದಿ ಕೊಡಲಿಲ್ಲವಲ್ಲ ಎಂದು ಅನುಕಂಪ ಮೂಡುತ್ತದೆ ಎಂದರು.--------------------------ಸೋಮಣ್ಣ ಸೋಲಿಸಲು ದೇವೇಗೌಡರಿಂದ ಪರೋಕ್ಷ ಕರೆದೇವೇಗೌಡರು ತುಮಕೂರಿಗೆ ಬಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಮತ ಕೇಳುತ್ತಿಲ್ಲ. ಬದಲಿಗೆ ದೇವೇಗೌಡರನ್ನು ಸೋಲಿಸಿದವರನ್ನು ಸೋಲಿಸಿ ಎಂದು ಕರೆ ಕೊಡುತ್ತಿದ್ದಾರೆ. 2019ರ ಚುನಾವಣೆಯಲ್ಲಿ ದೇವೇ ಗೌಡರನ್ನು ಸೋಲಿಸಿದ್ದು ಇದೇ ಜಿ.ಎಸ್.ಬಸವರಾಜು ಮತ್ತು ವಿ.ಸೋಮಣ್ಣ. ದೇವೇಗೌಡರು ಕೇಳುತ್ತಿರುವುದು ಸಹ ಅವರನ್ನು ಸೋಲಿಸಿ ಎಂದು. ಹಾಗಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಕ್ರಿಯಾಶೀಲ ಸಂಸದರು ಎಂದು ಹೆಸರು ಪಡೆದಿದ್ದ ಮುದ್ದಹನುಮೇಗೌಡರು ಮತ್ತೊಮ್ಮೆ ಗೆಲುವು ಸಾಧಿಸುವಂತೆ ನಾವೆಲ್ಲರು ಮಾಡಬೇಕಾಗಿದೆ.
- ಕೆ.ಎನ್.ರಾಜಣ್ಣ ಸಚಿವ