ಮುದ್ದಂಡ ಕಪ್ ಕೊಡವ ಕೌಟುಂಬಿಕ ಹಾಕಿ ಉತ್ಸವ ಲೋಗೋ ಬಿಡುಗಡೆ

| Published : Jan 12 2025, 01:19 AM IST

ಮುದ್ದಂಡ ಕಪ್ ಕೊಡವ ಕೌಟುಂಬಿಕ ಹಾಕಿ ಉತ್ಸವ ಲೋಗೋ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ, ಮುದ್ದಂಡ ಹಾಕಿ ನಮ್ಮೆ ಈ ಬಾರಿ ಮಡಿಕೇರಿಯಲ್ಲಿ ನಡೆಯಲಿದ್ದು, ಹಾಕಿ ಉತ್ಸವದ ಲೋಗೋವನ್ನು ಗಣ್ಯರು ಶನಿವಾರ ಬಿಡುಗಡೆ ಮಾಡಿದರು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮಾ.28ರಿಂದ ಏಪ್ರಿಲ್ 27ರ ವರೆಗೆ ಒಂದು ತಿಂಗಳ ಕಾಲ ಪಂದ್ಯಾವಳಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಕುಟುಂಬಗಳ ನಡುವಿನ 25ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವ, ಮುದ್ದಂಡ ಹಾಕಿ ನಮ್ಮೆ ಈ ಬಾರಿ ಮಡಿಕೇರಿಯಲ್ಲಿ ನಡೆಯಲಿದ್ದು, ಹಾಕಿ ಉತ್ಸವದ ಲೋಗೋವನ್ನು ಗಣ್ಯರು ಶನಿವಾರ ಬಿಡುಗಡೆ ಮಾಡಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮಾ.28ರಿಂದ ಏಪ್ರಿಲ್ 27ರ ವರೆಗೆ ಒಂದು ತಿಂಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ಹಾಕಿ ಉತ್ಸವಕ್ಕೆ ತಯಾರಿ ಭರದಿಂದ ಸಾಗಿದೆ.

ನಗರದ ಕಾವೇರಿ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದ್ದಂಡ ಹಾಕಿ ಉತ್ಸವದ ಲೋಗೋವನ್ನು ಸಂಸದ ಯದುವೀರ್ ಒಡೆಯರ್, ಶಾಸಕರಾದ ಎ.ಎಸ್. ಪೊನ್ನಣ್ಣ ಸೇರಿದಂತೆ ಹಲವರು ಬಿಡುಗಡೆ ಮಾಡಿದರು.

ಸಂಸದ ಯದುವೀರ್ ಒಡೆಯರ್ ಮಾತನಾಡಿ, ಕ್ರೀಡೆಯಿಂದ ಮಾತ್ರ ಎಲ್ಲರನ್ನು ಒಗ್ಗೂಡಿಸಲು ಸಾಧ್ಯ. ಕೊಡಗಿನ ಸಂಸ್ಕೃತಿ, ಪರಂಪರೆ ವಿಶಿಷ್ಟವಾದದ್ದು, ಇಂತಹ ಸಂಸ್ಕೃತಿಯನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ. ಇಲ್ಲಿನ ಹಾಕಿ ಉತ್ಸವ ಕೂಡ ಅಷ್ಟೇ ವಿಶೇಷವಾಗಿದ್ದು, ಹಾಕಿ ಉತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವ ಮೂಲಕ ಉತ್ತೇಜನ ನೀಡಲಾಗುವುದು ಎಂದರು.

ವಿರಾಜಪೇಟೆ ಶಾಸಕ ಎ.ಎಸ್‌‌. ಪೊನ್ನಣ್ಣ ಮಾತನಾಡಿ, ಕೊಡಗಿನವರು ಕ್ರೀಡೆ, ಸೇನೆಯಲ್ಲಿ ಇರಬೇಕು. ಇದರಿಂದಲೇ ನಾವು ಹೊರಗಿನವರ ಪ್ರೀತಿಯನ್ನು ಗಳಿಸಿದ್ದೇವೆ. ಇದನ್ನು ಕಳೆದುಕೊಳ್ಳುವ ಕೆಲಸ ಮಾಡಬಾರದು. ಎಲ್ಲಾ ಜನಾಂಗಗಳು ನಮ್ಮನ್ನು ಪ್ರೀತಿ ಮಾಡುವಾಗ ನಾವು ಅದನ್ನು ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಈ ಬಾರಿ ನಡೆಯಲಿರುವ ಮುದ್ದಂಡ ಹಾಕಿ ಉತ್ಸವ ಮತ್ತೊಂದು ವಿಶ್ವದಾಖಲೆಯಾಗಲಿ. ಧರ್ಮ, ಜಾತಿ ಬೇಧ ಇಲ್ಲದೆ ಹಾಕಿ ಉತ್ಸವಕ್ಕೆ ಹಲವರು ಪ್ರೋತ್ಸಾಹ ನೀಡಿದ್ದು, ಅದನ್ನು ಉಳಿಸಿಕೊಳ್ಳಬೇಕೆಂದು ಹೇಳಿದರು‌.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕೊಡಗಿನಲ್ಲಿ ಹಾಕಿ ರಕ್ತಗತವಾಗಿ ಬೆಳೆದು ಬಂದ ಕ್ರೀಡೆ. ಕ್ರೀಡೆಯ ಮೂಲಕ ಎಲ್ಲರೂ ಒಂದಾಗಬೇಕು‌. ನನ್ನ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, 2008ರಲ್ಲಿ ನಮ್ಮ ಸರ್ಕಾರ ಹಾಕಿ ಉತ್ಸವಕ್ಕೆ ಮೊದಲ ಬಾರಿಗೆ ರು.5 ಲಕ್ಷ ಅನುದಾನ ನೀಡಿದೆ. ಅಪ್ಪಚ್ಚೆಟ್ಟೋಂಡ ಹಾಕಿ ಉತ್ಸವಕ್ಕೆ ರು‌. 1 ಕೋಟಿ ಅನುದಾನ ನೀಡಿದೆ. ಈ ಅನುದಾನವನ್ನು ರಾಜ್ಯ ಸರ್ಕಾರ ಈಗ ಮುಂದುವರಿಸುತ್ತಿದೆ. ಮುದ್ದಂಡ ಹಾಕಿ ಉತ್ಸವಕ್ಕೆ ಸರ್ಕಾರದಿಂದ ರು.1.5 ಕೋಟಿ ಅನುದಾನ ದೊರೆಯುವ ವ್ಯವಸ್ಥೆ ಮಾಡಬೇಕೆಂದರು.

ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, ಮುದ್ದಂಡ ಕುಟುಂಬಕ್ಕೆ ಹಾಕಿ ಅಕಾಡೆಮಿಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದರು.

ಮುದ್ದಂಡ ಹಾಕಿ ಉತ್ಸವದ ಅಧ್ಯಕ್ಷ ರಶಿನ್ ಸುಬ್ಬಯ್ಯ ಮಾತನಾಡಿ, ಈ ಬಾರಿ ಹಾಕಿ ಉತ್ಸವವನ್ನು ವಿಶೇಷ ರೀತಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ 540 ಕುಟುಂಬಗಳನ್ನು ಸಂಪರ್ಕಿಸಲಾಗಿದೆ. ಈ ಪೈಕಿ 340 ಕುಟುಂಬಗಳು ಒಪ್ಪಿಗೆ ನೀಡಿದೆ. ಮಹಿಳೆಯರಿಗಾಗಿ ಹಾಕಿ ಪಂದ್ಯಾವಳಿ ಆಯೋಜಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮ ವೈವಿಧ್ಯ:

ಹಾಕಿ ಉತ್ಸವ ಸಮಿತಿ ಕಾರ್ಯದರ್ಶಿ ಆದ್ಯ ತಿಮ್ಮಯ್ಯ ಮಾತನಾಡಿ ಹಾಕಿ ಉತ್ಸವದಲ್ಲಿ ಕ್ರೀಡೆಯೊಂದಿಗೆ ವಿವಿಧ ಕಾರ್ಯಕ್ರಮ ಕೂಡ ಆಯೋಜಿಸಲು ನಿರ್ಧರಿಸಲಾಗಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಫ್ಯಾಷನ್ ಶೋ, ಗುಂಡು ಹೊಡೆಯುವ ಸ್ಪರ್ಧೆ, ಖ್ಯಾತ ಗಾಯಕರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದರು.

ಮುದ್ದಂಡ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ ಮಾತನಾಡಿ, ಹಾಕಿ ಉತ್ಸವಕ್ಕೆ ಹಾಲಿ ಹಾಗೂ ಮಾಜಿ ಶಾಸಕರು ಸೇರಿದಂತೆ ಹಲವರು ಸಹಕಾರ ನೀಡುತ್ತಿದ್ದಾರೆ. ಈ ಕ್ರೀಡಾಕೂಟ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಮುದ್ದಂಡ ಕುಟುಂಬದ ಗೌರವ ಅಧ್ಯಕ್ಷ ಎಂ.ಬಿ. ದೇವಯ್ಯ ಮತ್ತಿತರರು ಹಾಜರಿದ್ದರು.