ಸಮಗ್ರ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ನಿಮಿತ್ತ ಶನಿವಾರ ಮುದ್ದೇಬಿಹಾಳ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸಮಗ್ರ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ನಿಮಿತ್ತ ಶನಿವಾರ ಮುದ್ದೇಬಿಹಾಳ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ.

ಧರಣಿ ಸತ್ಯಾಗ್ರಹದ ಐದನೇ ದಿನವಾದ ಶುಕ್ರವಾರ ಮುದ್ದೇಬಿಹಾಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎ.ಎಸ್. ಪಾಟೀಲ ನಡಹಳ್ಳಿ, ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಗ್ರ ವಿಜಯಪುರ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಸೆ.8ರಂದು ಪಟ್ಟಣದ ಬಜಾರ್ ಹನುಮಾನ್ ಮಂದಿರದಲ್ಲಿ ಪಟ್ಟಣದ ವರ್ತಕರು ಹಾಗೂ ವ್ಯಾಪಾರಸ್ಥರ ಸಭೆ ನಡೆಸಿ ಬಂದ್ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಪಟ್ಟಣದ ಎಲ್ಲ ವ್ಯಾಪಾರಸ್ಥರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೆ.12ರಂದು ಬೆಳಗ್ಗೆಯಿಂದ ಸಂಜೆ 6 ಗಂಟೆಯವರೆಗೆ ಮುದ್ದೇಬಿಹಾಳ ಪಟ್ಟಣ ಸಂಪೂರ್ಣ ಸ್ತಬ್ಧವಾಗಲಿದೆ. ಔಷಧಿ ಅಂಗಡಿಗಳು ಹಾಗೂ ಹಾಲಿನ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ಮನವಿ ಮಾಡಲಾಗಿದೆ. ಯಾವುದೇ ಚಹಾ ಅಂಗಡಿಗಳನ್ನೂ ತೆರೆಯಬಾರದು ಎಂದು ನಡಹಳ್ಳಿ ಹೇಳಿದರು.

ರೈತರ ಹೋರಾಟಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಸಾರಿಗೆ ಘಟಕದ ವ್ಯವಸ್ಥಾಪಕರಿಗೂ ಮನವಿ ಸಲ್ಲಿಸಲಾಗಿದ್ದು, ಸೆ.12ರಂದು ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯದಂತೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ. ಅದರಂತೆ ಖಾಸಗಿ ವಾಹನಗಳು, ಆಟೋ, ಕ್ರೂಸರ್ ಸೇರಿದಂತೆ ಯಾವುದೇ ವಾಹನಗಳನ್ನು ರಸ್ತೆಗೆ ಇಳಿಸದೆ ಅನ್ನದಾತ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪಕ್ಷದ ಚಿಹ್ನೆ, ಧ್ವಜವಿಲ್ಲದ ಹೋರಾಟ:

ಸೆ.12ರಂದು ಮುದ್ದೇಬಿಹಾಳದ ಹಳೆಯ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಸೈನಿಕ ಮೈದಾನದಲ್ಲಿ ಅನಿರ್ದಿಷ್ಟಾವಧಿ ಸರಣಿ ಸತ್ಯಾಗ್ರಹ ಮುಂದುವರಿಯಲಿದೆ. ಈ ಧರಣಿ ಯಾವುದೇ ರಾಜಕೀಯ ಪಕ್ಷದ ಚಿಹ್ನೆ ಅಥವಾ ಧ್ವಜವಿಲ್ಲದೆ ನಡೆಯಲಿದೆ. ಪಟ್ಟಣದ ನಾಗರಿಕರು, ವರ್ತಕರು ಹಾಗೂ ವ್ಯಾಪಾರಸ್ಥರು ಪಕ್ಷಾತೀತವಾಗಿ ಭಾಗವಹಿಸಲಿದ್ದಾರೆ ಎಂದು ನಡಹಳ್ಳಿ ತಿಳಿಸಿದರು.

ಇದು ಯಾವುದೇ ಪಕ್ಷದ ಹೋರಾಟವಲ್ಲ. ಅನ್ನದಾತ ರೈತರ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ. ಪಟ್ಟಣದ ಪ್ರತಿಯೊಬ್ಬ ನಾಗರಿಕರು, ವ್ಯಾಪಾರಸ್ಥರು ಹಾಗೂ ವಿವಿಧ ಸಂಘಟನೆಗಳು ಪಕ್ಷಾತೀತವಾಗಿ ಬಂದ್‌ಗೆ ಬೆಂಬಲ ನೀಡಿ, ಸಮಗ್ರ ವಿಜಯಪುರ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಎ.ಎಸ್. ಪಾಟೀಲ ನಡಹಳ್ಳಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣನವರ, ಕೆಂಚಪ್ಪ ಬಿರಾದಾರ, ಲಕ್ಷ್ಮಣ ಬಿಜ್ಜೂರ, ಗಿರೀಶಗೌಡ ಪಾಟೀಲ ಮುರಾಳ, ಚೇತನ ಸಂಗಮ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನುಗುಂದ, ಬಸಯ್ಯ ನಂದಿಕೇಶ್ವಮಠ, ಶೇಖರ ಆಲೂರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.