ಸಾರಾಂಶ
ಕುಷ್ಟಗಿ:
ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಗಾಗಿ ಆಗಮಿಸಿದ ಶಾಸಕ ದೊಡ್ಡನಗೌಡ ಪಾಟೀಲ ಅವರು ಗ್ರಾಮಸ್ಥರ ವಿರೋಧದ ಹಿನ್ನೆಲೆ ಉದ್ಘಾಟನೆ ರದ್ದುಗೊಳಿಸಿ ಮರಳಿದ ಘಟನೆ ತಾಲೂಕಿನ ಮುದೇನೂರು ಗ್ರಾಮದಲ್ಲಿ ಬುಧವಾರ ನಡೆದಿದೆ.ಮುದೇನೂರು ಗ್ರಾಮದಲ್ಲಿ ₹ 9 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಿದ್ದು ಅಧಿಕಾರಿಗಳು ದಿಢೀರ್ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಈ ಕುರಿತು ಯಾರಿಗೂ ಮಾಹಿತಿ ಇರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಕರಾರು ತೆಗೆದು ಇಂದು ಉದ್ಘಾಟನೆ ಕಾರ್ಯಕ್ರಮ ರದ್ದುಗೊಳಿಸಿ, ಮತ್ತೊಂದು ದಿನಾಂಕ ನಿಗದಿಪಡಿಸಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಬೇಕೆಂದು ಒತ್ತಾಯಿಸಿದರು.
ಗೋಟುರಗೆ ತರಾಟೆ:ಆರೋಗ್ಯ ಕೇಂದ್ರದ ಉದ್ಘಾಟನೆಗೆ ಆಗಮಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ₹ 9 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆಸ್ಪತ್ರೆಯ ಉದ್ಘಾಟನೆ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ಸಾಂಕೇತಿಕವಾಗಿ ಉದ್ಘಾಟಿಸಲು ಕಾರಣವೇನು?. ಆಸ್ಪತ್ರೆಯಲ್ಲಿ ಇನ್ನೂ ಅನೇಕ ಕಾಮಗಾರಿ ಬಾಕಿ ಇವೆ. ಸ್ವಚ್ಛತೆ ಸಹ ಮಾಡಿಲ್ಲ. ಇಂತಹ ಅವ್ಯವಸ್ಥೆಯಲ್ಲಿ ಉದ್ಘಾಟಿಸುತ್ತಿರುವುದು ಏಕೆ? ಆಮಂತ್ರಣ ಪತ್ರಿಕೆ ಸಹ ಮಾಡಿಸಿಲ್ಲ ಏಕೆ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು, ಉದ್ಘಾಟನೆ ಕಾರ್ಯಕ್ರಮ ಮುಂದೂಡುವಂತೆ ಪಟ್ಟು ಹಿಡಿದರು.
ಸಭೆ ನಡೆಸಿದಿ ಶಾಸಕ:ಆರೋಗ್ಯ ಕೇಂದ್ರಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಆಗಮಿಸುತ್ತಿದ್ದಂತೆ ಗ್ರಾಮಸ್ಥರು, ಆಸ್ಪತ್ರೆ ಕುರಿತು ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಸ್ವಚ್ಛತೆಗೆ ಕ್ರಮಕೈಗೊಂಡಿಲ್ಲ. ಹೀಗಾಗಿ ಉದ್ಘಾಟನೆ ಬೇಡವೆಂದರು. ಆಗ ಸಭೆ ನಡೆಸಿದ ಶಾಸಕರು, ಜೂ.4ರಂದು ಉದ್ಘಾಟನಾ ಕಾರ್ಯಕ್ರಮ ಆಯೋಜಿಸುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.
ಇದೇ ವೇಳೆ ಗ್ರಾಮಸ್ಥರು ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಿಸುವುದು, ಗ್ರಾಮಕ್ಕೆ ಬಸ್ ಸೌಕರ್ಯ, ಕೆ. ಬೆಂಚಮಟ್ಟಿ ಗ್ರಾಮದ ಟಿಸಿ ಸುಟ್ಟ ಪರಿಣಾಮ ವಿದ್ಯುತ್ ಇಲ್ಲದೆ ಸಮಸ್ಯೆಯಾಗಿರುವ ಕುರಿತು ಶಾಸಕರ ಗಮನ ಸೆಳೆದರು. ಆಗ ಶಾಸಕರು ಶೀಘ್ರದಲ್ಲಿಯೇ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ, ಗ್ರಾಪಂ ಸದಸ್ಯ ಹುಸೇನಪ್ಪ ಹಿರೇಮನಿ, ಚಂದ್ರಶೇಖರಸ್ವಾಮಿ ಹಿರೇಮಠ, ಮನು ಹಳೇಗೌಡರ ಸೇರಿದಂತೆ ಅನೇಕರು ಇದ್ದರು. ತೋರಣ ತೆಗೆದು ಹಾಕಿದರು
ಆರೋಗ್ಯ ಕೇಂದ್ರದ ಉದ್ಘಾಟನೆ ರದ್ದಾದ ಹಿನ್ನೆಲೆಯಲ್ಲಿ ಕೇಂದ್ರದ ಮುಂದೆ ಹಾಕಿದ್ದ ಹೂವಿನ ತೋರಣವನ್ನು ತೆಗೆದು ಹಾಕಿದರು. ಉದ್ಘಾಟನೆಗೆ ಮಾಡಿಸಿದ ಉಪಾಹಾರ ಕೆಡಿಸಬಾರದೆಂಬ ಕಾರಣಕ್ಕೆ ಆಗಮಿಸಿದ ಜನರು ಸೇವಿಸಿದರು.ಮುದೇನೂರು ಗ್ರಾಮಸ್ಥರ ಒತ್ತಾಯದ ಮೇರೆಗೆ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಯನ್ನು ಜೂ. 4ರಂದು ನಿಗದಿಪಡಿಸಲು ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ.
ದೊಡ್ಡನಗೌಡ ಪಾಟೀಲ ಶಾಸಕರು ಕುಷ್ಟಗಿ