ಮುದಗಲ್ ಮೊಹರಂ: ಹರಿದು ಬಂದ ಭಕ್ತ ಸಾಗರ

| Published : Jul 17 2024, 12:46 AM IST

ಸಾರಾಂಶ

ಕಿಲ್ಲಾದಲ್ಲಿರುವ ಹುಸೇನ್ ಪಾಷಾ, ಮೇಗಳಪೇಟೆಯ ಹಸನ್ ಪಾಷಾ ದರ್ಗಾದಲ್ಲಿ ಖತಲ್ ರಾತ್ರಿ ನಿಮಿತ್ತ ಭಕ್ತರ ದಂಡು ಆಗಮನ. ಭಕ್ತನೋರ್ವ 101 ಕಾಯಿಯನ್ನು ಹುಸೇನಿ ಆಲಂ ಮುಂದೆ ಒಡೆದು ತನ್ನ ಹರಕೆ ತೀರಿಸಿರುವುದು ಕಂಡು ಬಂದಿತು.

ಕನ್ನಡಪ್ರಭ ವಾರ್ತೆ ಮುದಗಲ್

ಐತಿಹಾಸಿಕ ಮುದಗಲ್‌ ಮೊಹರಂ ಆರಂಭವಾಗಿ 9ನೇ ದಿನದಂದು ಕಿಲ್ಲಾದಲ್ಲಿರುವ ಹುಸೇನ್ ಪಾಷಾ, ಮೇಗಳಪೇಟೆಯ ಹಸನ್ ಪಾಷಾ ದರ್ಗಾಕ್ಕೆ ಖತಲ್ ರಾತ್ರಿ ನಿಮಿತ್ತ ವಾಗಿ ಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿರುವ ದೃಶ್ಯ ಕಂಡು ಬಂದಿತು.

ಪಟ್ಟಣದಲ್ಲಿ ನಡೆಯುತ್ತಿರುವ ಮೊಹರಂಗೆ ಕಳೆ ತರುತ್ತಿರುವ ಭಕ್ತರು ಹರಕೆ ಅಷ್ಟಿಷ್ಟಲ್ಲ. ಹೆಜ್ಜೆ ಕುಣಿತ, ಹುಲಿ ವೇಷ ಕುಣಿತ, ಕಣಿ ಹಲಿಗೆ ವಾದ್ಯ ಸೇರಿದಂತೆ ವಿವಿಧ ರೀತಿಯಲ್ಲಿ ಭಕ್ತರು ಹರಕೆ ತೀರಿಸುವುವದು ಸರ್ವೆ ಸಾಮಾನ್ಯವಾಗಿತ್ತು. ನೆರೆದ ಭಕ್ತ ಸಾಗರಕ್ಕೆ ಹೆಜ್ಜೆ ಕುಣಿತ, ಹುಲಿ ವೇಷಧಾರಿಗಳ ಕುಣಿತ ಆಕರ್ಷಿಸುತ್ತಿದ್ದವು. ಕಿಲ್ಲಾಕ್ಕೆ ಪ್ರವೇಶ ನೀಡುವ ಚಾವಡಿ ರಸ್ತೆ, ಬಾಗಲಕೋಟ ರಸ್ತೆಗಳ ಕಡೆಗೆ ಭಕ್ತರು ರಸ್ತೆಯ ತುಂಬೆಲ್ಲ ತುಂಬಿರುವದು ಕಂಡು ಬಂದಿತು. ಹುಸೇನಿ ಆಲಂ ದರ್ಗಾದಲ್ಲಿ ಕೆಂಪು ಸಕ್ಕರೆ, ದಟ್ಟಿ, ಬೆಳ್ಳಿ ಕುದುರೆ, ತೊಟ್ಟಿಲು ನೀಡಿ, ಮುಡುಪನ್ನು ಹಾಕುವ ಮೂಲಕ ತಮ್ಮ ಸೇವೆಯನ್ನು ಸಮರ್ಪಿಸಿದರು. ಭಕ್ತನೋರ್ವ 101 ಕಾಯಿಯನ್ನು ಹುಸೇನಿ ಆಲಂ ಮುಂದೆ ಒಡೆದು ತನ್ನ ಹರಕೆ ತೀರಿಸಿರುವುದು ಕಂಡು ಬಂದಿತು.

ಹುಸೇನಿ ಆಲಂ ಕಮಿಟಿಯ ನೂತನ ಅಧ್ಯಕ್ಷರಾದ ಎಸ್.ಎ. ನಯೀಮ್ ನೇತೃತ್ವದಲ್ಲಿ ಗಫೂರಖಾನ್, ತಸ್ಲಿಂ ಮುಲ್ಲಾ, ವಾಹಿದ್ ಖುರೇಷಿ ಸೇರಿದಂತೆ ಸಮಿತಿಯ ಸದಸ್ಯರು ದರ್ಗಾದಲ್ಲಿ ಬರುವ ಭಕ್ತರಿಗೆ ಆಲಂ ದೃಶ್ಯಕ್ಕೆ ಸಿದ್ಧತೆ ಮಾಡಲಾಗಿತ್ತು. ಯಾವದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಮಸ್ಕಿ ಸಿಪಿಐ ಬಾಲಚಂದ್ರ ನಿಕ್ಕಂ, ಮುದಗಲ್ಲ ಪಿಎಸ್ಐ ವೆಂಕಟೇಶ ಮಾಡಗೇರಿ ನೇತೃತ್ವದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.