ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ಶೀಘ್ರದಲ್ಲೇ ಮುಧೋಳ ಗ್ರಾಮೀಣ ಪೊಲೀಸ್ ಠಾಣೆ ಅಥವಾ ಸಂಚಾರ ಪೊಲೀಸ್ ಠಾಣೆ ಆರಂಭಿಸಲಾಗುವುದು ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.ಸ್ಥಳೀಯ ಸಿಪಿಐ ಕಚೇರಿ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ನೂತನ ಬುಲೆರೋ ಜೀಪ್ ಮತ್ತು ಮೂರು ಚೀತಾ ಬೈಕ್ ಗಳ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶೀಘ್ರದಲ್ಲೇ ಮುಧೋಳ ಗ್ರಾಮೀಣ ಪೊಲೀಸ್ ಠಾಣೆ ಅಥವಾ ಸಂಚಾರ ಪೊಲೀಸ್ ಠಾಣೆ ಆರಂಭಿಸಲು ಮಂಜೂರಾತಿ ಪಡೆದುಕೊಳ್ಳಲಾಗುವುದು ಎಂದರು.
ಶಾಸಕರ ಅನುದಾನದಲ್ಲಿ ಆರಕ್ಷಕರಿಗೆ ಸುಸಜ್ಜಿತವಾದ ವಾಹನಗಳನ್ನು ನೀಡಬೇಕು ಎಂದು ನಗರದ ಪ್ರಮುಖ ಮುಖಂಡರು ಹೇಳಿದ್ದರು. ಪೊಲೀಸ್ ಇಲಾಖೆಯ ಸಬ್ ಇನ್‌ಸ್ಪೆಕ್ಟರ್ ಹಾಗೂ ಪೊಲೀಸರ ಮನವಿ ಮೇರೆಗೆ ಅನುದಾನ ನೀಡಲಾಗಿತ್ತು. ಈ ಅನುದಾನದಲ್ಲಿ ತಂದಿರುವ ವಾಹನಗಳ ಸೇವೆಗೆ ಚಾಲನೆ ನೀಡಿದ್ದಕ್ಕೆ ಸಂತಸವಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಲು ಪೊಲೀಸ್ ಸಿಬ್ಬಂದಿಗೆ ಸುಸಜ್ಜಿತ ವಾಹನಗಳನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಮತ್ತು ಕಳ್ಳರನ್ನು ಭೇದಿಸಲು ಇನ್ನುಳಿದ ಕ್ರೈಂಗಳ ಬೆನ್ನು ಹತ್ತಿ ಕೇಸುಗಳನ್ನು ನಿಭಾಯಿಸಲು ವಾಹನಗಳು ಬೇಕಾಗುತ್ತವೆ ಎಂದು ಹೇಳಿದರು.ಪಿಎಸ್ಐ ಅಜಿತಕುಮಾರ ಹೊಸಮನಿ ಮತನಾಡಿ, ಪೊಲೀಸ್ ಠಾಣೆಯಲ್ಲಿ ತಿಂಗಳಿಗೆ ಸುಮಾರು 400ಕ್ಕೂ ಅಧಿಕ ಕ್ರೈಂಗಳು ಆಗುತ್ತವೆ. ಅನೇಕ ಜನರು ದೂರಗಳನ್ನು ನೀಡಲು ಬೆಳಗಿಂದ ಸಂಜೆಯ ತನಕ ಕುಳಿತು ಹೋಗುತ್ತಾರೆ, ನಮಗೂ ಕೂಡ ಬೇಜಾರಾಗುತ್ತದೆ. ಕ್ಷೇತ್ರ ಬಹಳ ದೊಡ್ಡದಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹಾಗೂ ಗ್ರಾಮೀಣ ಭಾಗದ ಜನರ ಸಮಸ್ಯೆಗಳು, ಇನ್ನುಳಿದ ದೂರಗಳನ್ನು ಸ್ವೀಕರಿಸಲು ವಿಳಂಬ ಆಗುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸಿಬ್ಬಂದಿ ಹೆಚ್ಚಿಗೆ ಬೇಕು ಮತ್ತು ಮುಧೋಳದಲ್ಲಿ ಕಾನೂನು ಸುವ್ಯವಸ್ಥೆ ಸರಳವಾಗಬೇಕಾದರೆ ಮುಧೋಳ ಗ್ರಾಮೀಣ ಠಾಣೆಯ ಅವಶ್ಯಕತೆ ಇದೆ ಎಂದು ಹೇಳಿದರು.
ಡಿವೈಎಸ್ಪಿ ಶಾಂತವೀರ ಮಾತನಾಡಿ, ಸಚಿವರು ತಮ್ಮ ಅನುದಾನದಲ್ಲಿ ನೀಡಿದ ಹಣದಲ್ಲಿ ಒಂದು ಬುಲೆರೋ ಮತ್ತು ಮೂರು ಚೀತಾ ಬೈಕ್‌ಗಳನ್ನು ತೆಗೆದುಕೊಂಡಿದ್ದೇವೆ. ಸಚಿವರು ಪೊಲೀಸ್ ಇಲಾಖೆ ಮೇಲೆ ಇಟ್ಟಿರುವ ವಿಶ್ವಾಸ, ನಂಬಿಕೆಯನ್ನು ನಾವು ಉಳಿಸಿಕೊಂಡು ಹೋಗುತ್ತೇವೆ. ಸರ್ಕಾರ ಪೊಲೀಸ್ ಇಲಾಖೆ ಬಗ್ಗೆ ಹೆಚ್ಚು ವಿಶ್ವಾಸ ಇಟ್ಟಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಸಚಿವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮುಧೋಳ ತಹಸೀಲ್ದಾರ್ ವಿನೋದ ಹತ್ತಳ್ಳಿ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ದಾನೇಶ ತಡಸಲೂರ, ರಾಘವೇಂದ್ರ ಮೊಕಾಶಿ, ಸದುಗೌಡ ಪಾಟೀಲ, ಮುದಕಣ್ಣ ಅಂಬಿಗೇರ ಇತರರು ಉಪಸ್ಥಿತರಿದ್ದರು.