ಸಾರಾಂಶ
ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಎರಡು ಎಕರೆ ಜಮೀನು ನೀಡಿರುವ ಮುಗಳಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳ ಶೈಕ್ಷಣಿಕ ಕಾಳಜಿ ಅಭಿನಂದನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.
ಶಿಗ್ಗಾಂವಿ: ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಎರಡು ಎಕರೆ ಜಮೀನು ನೀಡಿರುವ ಮುಗಳಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳ ಶೈಕ್ಷಣಿಕ ಕಾಳಜಿ ಅಭಿನಂದನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.
ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಜಮೀನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಭವಿಷ್ಯದಲ್ಲಿ ಗ್ರಾಮ ಇನ್ನಷ್ಟು ಬೆಳೆಯಲಿದೆ. ಸಂಕೀರ್ಣ ಜಾಗೆಯಲ್ಲಿ ಉತ್ತಮ ಶೈಕ್ಷಣಿಕ ಪರಿಸರ ಸೃಷ್ಟಿಗೆ ಕಷ್ಟವಾಗುತ್ತದೆ. ವಿಶಾಲ ಜಾಗೆಯಲ್ಲಿ ಅಧ್ಯಯನಕ್ಕೆ ಪೂರಕ ವಾತಾವರಣ ಇರುವ ಕಾರಣಕ್ಕೆ ಎರಡು ಎಕರೆ ಜಮೀನಿನಲ್ಲಿ ಸುಸಜ್ಜಿತ ಕಟ್ಟಡ ಮತ್ತು ಮೈದಾನ ನಿರ್ಮಿಸಬಹುದು. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಆಗುತ್ತದೆ ಎಂದರು. ಶ್ರೀ ಕಲ್ಮೇಶ್ವರ ದೇವಸ್ಥಾನದ ಎರಡು ಎಕರೆ ಜಮೀನನ್ನು ರಾಜ್ಯಪಾಲರ ಹೆಸರಿಗೆ ಬಿಟ್ಟು ಕೊಡಬೇಕು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧತೆ ಮಾಡಿಕೊಂಡು ಶೀಘ್ರದಲ್ಲೇ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಲು ಗ್ರಾಮಸ್ಥರ ಸಹಕಾರ ಅಗತ್ಯ ಎಂದರು.ಶ್ರೀ ಕಲ್ಮೇಶ್ವರ ದೇವಸ್ಥಾನದ ಟ್ರಸ್ಟಿ ಮಹಾದೇವಪ್ಪ ಕಾಮನಹಳ್ಳಿ ಮಾತನಾಡಿ, ಮುಗಳಿ ಗ್ರಾಮಸ್ಥರು ಶೈಕ್ಷಣಿಕ ಕಾಳಜಿಗೆ ಯಾವಾಗಲೂ ಉತ್ಸುಕರು. ಅದೇ ರೀತಿ ಪ್ರೌಢಶಾಲೆಯ ಕಟ್ಟಡ ಮತ್ತು ಮೈದಾನ ನಿರ್ಮಾಣಕ್ಕೆ ಒಮ್ಮತದಿಂದ ಎರಡು ಎಕರೆ ಜಮೀನು ಬಿಟ್ಟು ಕೊಡುತ್ತಿದ್ದೇವೆ. ಶಿಕ್ಷಣ ಇಲಾಖೆಯ ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ಹೇಳಿದರು.
ಬಿಆರ್ ಸಿಗಳಾದ ಗೀತಾಂಜಲಿ ತೆಪ್ಪದ, ಟಿ.ಕೆ. ಪಾಟೀಲ, ಪ್ರೌಢಶಾಲೆ ಮುಖ್ಯ ಶಿಕ್ಷಕ ಗಣೇಶ ಕಾಚೋಕರ್, ದೈಹಿಕ ಶಿಕ್ಷಕ ಬಿ.ಜಿ. ಕಂಕಣವಾಡ, ದೇವಸ್ಥಾನ ಟ್ರಸ್ಟ್‌ನ ಬಸಪ್ಪ ಭದ್ರಶೆಟ್ಟಿ, ಬಸವರಾಜ ಪೂಜಾರ, ಗ್ರಾಮ ಪಂಚಾಯತಿ ಸದಸ್ಯ ಶಿವಾನಂದ ಬಿಶೆಟ್ಟಿ, ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ವಿ.ಜಿ. ದುಂಡಪ್ಪನವರ, ಮಹಾದೇವಪ್ಪ ತಳವಾರ, ಗೂಳಪ್ಪ ಅರಳಿಕಟ್ಟಿ, ಎಸ್ ಡಿಎಂಸಿಯ ನಾಗಪ್ಪ ಗೊಬ್ಬಿ, ರಮೇಶ ಅರಳಿಕಟ್ಟಿ ಇದ್ದರು.