- 9ನೇ ದಿನ ಗುರುವಾರ ರಾತ್ರಿ ಕೆಂಡ ಹಾಯ್ದ ಆಲಿ ದೇವರ ಅಲಾವಿ ಹೊತ್ತ ಭಕ್ತರು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಹಿಂದೂ- ಮುಸ್ಲಿಮರ ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬವನ್ನು ಜಿಲ್ಲೆಯಲ್ಲಿ ಶ್ರದ್ಧಾ- ಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು. ಮೊಹರಂ 9ನೇ ದಿನವಾದ ಗುರುವಾರ ರಾತ್ರಿ ವಿವಿಧೆಡೆ ಅಗ್ನಿಕುಂಡ ಹಾಕಿ ಆಲಿ ದೇವರ ಅಲಾವಿ (ಪಂಜಾ) ಹೊತ್ತವರು ಕೆಂಡವನ್ನು ಹಾಯ್ದು, ಭಕ್ತರು ಹರಕೆ ತೀರಿಸಿದರು.ಜೂಬ್ಲಿ ಬಾವಿ ರಸ್ತೆಯ ಗರಡಿ ಮನೆ, ಅಹಮದ್ ನಗರ, ಶೇಖರಪ್ಪ ನಗರ, ಅಮರಪ್ಪನ ತೋಟ, ಇಮಾಮ್ ನಗರ, ಬಂಬೂ ಬಜಾರ್, ಬಾಷಾ ನಗರ, ಆಜಾದ್ ನಗರ, ನಿಟುವಳ್ಳಿ, ಕೆಟಿಜೆ ನಗರ, ವಿನೋಬನಗರ, ಹೊಂಡದ ವೃತ್ತ, ದುಗ್ಗಮ್ಮ ದೇವಸ್ಥಾನದ ಬಳಿಯ ಖಡಕ್ ಚಾವಲಿ ದರ್ಗಾ ಸೇರಿದಂತೆ ಹಲವು ಭಾಗಗಳಲ್ಲಿ ಪಂಜಾಗಳನ್ನು ಸ್ಥಾಪನೆ ಮಾಡಲಾಗಿತ್ತು.
ಪೆಟ್ಟಿಗೆಯಲ್ಲಿದ್ದ ದೇವರುಗಳನ್ನು ಹೊರತೆಗೆದು ಪ್ರತಿಷ್ಠಾಪಿಸಲಾಗಿತ್ತು. 9ನೇ ದಿನವಾದ ಗುರುವರ ರಾತ್ರಿ ಅಗ್ನಿಕುಂಡ ಹಾಕಿ ಅಲಾಯಿ ದೇವರನ್ನು (ಪಂಜಾ) ಹೊತ್ತವರು ಕೆಂಡವನ್ನು ಹಾಯ್ದರು. 10ನೇ ದಿನವಾದ ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಅಲಾಯಿ ದೇವರುಗಳ ಮೆರವಣಿಗೆ ಮಾಡಿದರು.
ಆಲಿ ದೇವರ ಅಲಾವಿಗಳು ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಕಡೆಯಲ್ಲಿ ಸಂಚರಿಸಿದವು. ಮನೆ ಎದುರಿಗೆ ಬಂದ ದೇವರನ್ನು ಹಿಂದೂ ಮತ್ತು ಮುಸ್ಲಿಮರು ಸ್ವಾಗತಿಸಿದರು. ಹರಕೆ ಹೊತ್ತ ಭಕ್ತರು ಮಂಡಕ್ಕಿ, ಉಪ್ಪು, ಕರಿಮೆಣಸುಗಳನ್ನು ಅರ್ಪಿಸಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ಹಾಗೂ ಮಹಾನಗರ ಪಾಲಿಕೆ ಮಾಜಿ ಮಹಾಪೌರ ಕೆ.ಚಮನ್ ಸಾಬ್ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಝರತ್ ಇಮಾಮ್ ಹಸನ್ ಹಾಗೂ ಹಝರತ್ ಇಮಾಮ್ ಹುಸೇನ್ ಸ್ಮರಣೆಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮುಸ್ಲಿಮರ ಜೊತೆಗೆ ಹಿಂದೂಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ರೋಗರುಜಿನ ಸೇರಿ ಇಷ್ಟಾರ್ಥ ಸಿದ್ದಿಗಾಗಿ ಹಬ್ಬದಲ್ಲಿ ಭಕ್ತರು ಹರಕೆಯನ್ನು ತೀರಿಸುತ್ತಾರೆ ಎಂದರು.- - - * ಹರಿಹರದಲ್ಲಿ ಮೊಹರಂ: ಹರಿಹರ ತಾಲೂಕಿನಲ್ಲಿಯೂ ಶುಕ್ರವಾರ ಮೊಹರಂ ಕಡೇ ದಿನವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಇಸ್ಲಾಮಿಕ್ ಕ್ಯಾಲೆಂಡರ್ ಮೊದಲ ಮಾಸ, ಪ್ರವಾದಿ ಮೊಹಮ್ಮದರ ಮೊಮ್ಮಗ ಇಮಾಮ್ ಹುಸೇನರು ಹಾಗೂ ಅವರ ಸಂಗಡಿಗರು ಕರ್ಬಲಾ ಕದನದಲ್ಲಿ ಹುತಾತ್ಮರಾಗಿರುವುದು ಸೇರಿದಂತೆ ಹಲವು ಘಟನಾವಳಿಗೆ ಸಾಕ್ಷಿಯಾಗಿ ಸಂತಸ ಮತ್ತು ಶೋಕದ ಸಂಕೇತವಾಗಿ ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು. ಶಿಯಾ ಪಂಗಡದವರು ಇಮಾಮ್ ಹುಸೇನರ ಸ್ಮರಣೆಯಲ್ಲಿ ಟಿಪ್ಪು ನಗರದಿಂದ ಕಪ್ಪುಬಟ್ಟೆ ಧರಿಸಿ ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಕೆಲವು ಯುವಕರು ತಮ್ಮ ದೇಹಕ್ಕೆ ಹರಿತ ಆಯುಧಗಳಿಂದ ದಂಡಿಸುತ್ತಾ, ಶ್ಲೋಕಗಳನ್ನು ಪಠಿಸುತ್ತಾ ಸಾಗಿದರು. ನದಿ ದಡಕ್ಕೆ ತಲುಪಿ ಸಿಂಗರಿಸಿದ ಪಂಜಾವನ್ನು ವಿಸರ್ಜಿಸಲಾಯಿತು. ಮೊಹರಂನ 9 ಮತ್ತು 10 ದಿನವಾದ ಗುರುವಾರ ಮತ್ತು ಶುಕ್ರವಾರ ಸಮುದಾಯದ ಹಲವರು ಉಪವಾಸ ಕೈಗೊಂಡರು. ಮಸೀದಿಗಳಲ್ಲಿ ಮೌಲಾನರವರ ಮುಖಂಡತ್ವದಲ್ಲಿ ವಿಶೇಷ ಪ್ರವಚನದ ನಂತರ ಪ್ರಾರ್ಥನೆ ಸಲ್ಲಿಸಲಾಯಿತು.- - -
-26ಕೆಡಿವಿಜಿ36: ದಾವಣಗೆರೆಯಲ್ಲಿ ಹಿಂದೂ-ಮುಸ್ಲಿಮರ ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬವನ್ನು ಜಿಲ್ಲೆಯಲ್ಲಿ ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು.