ಕನ್ನಡಪ್ರಭ ವಾರ್ತೆ ತುಮಕೂರು
ಮಸೀದಿಗಳಲ್ಲಿ ವಿಶೇಷ ಧ್ಯಾನ ಹಾಗೂ ಪ್ರಾರ್ಥನೆ ಮೂಲಕ ಮೊಹರಂ ಕಡೆಯ ದಿನವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕಳೆದ 1 ವಾರದಿಂದ ಮೊಹರಂ ಕಡೆಯ ದಿನದ ಅಂಗವಾಗಿ ಬಾಬಯ್ಯ ಗುಡಿಯಲ್ಲಿ ರಾತ್ರಿ ವೇಳೆ ವಿಶೇಷ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಗಿತ್ತು.ನಗರದ ಶಾಂತಿನಗರ, ಚಾಂದಿನಿ ಚೌಕ , ರಾಜೀವ್‌ಗಾಂಧಿ ನಗರ, ವೀರಸಾಗರ ಸೇರಿದಂತೆ ವಿವಿಧ ಬಡಾವಣೆಗಳ ಗುಡಿಯಿಂದ ಬಾಬಯ್ಯ ದೇವರುಗಳು ಚಿಕ್ಕಪೇಟೆಯ ಬಾಬಯ್ಯನ ಗುಡಿಗೆ ಆಗಮಿಸಿ ಈ ಎಲ್ಲ ದೇವರುಗಳು ಒಂದೇಡೆ ಸೇರಿ ಹಬ್ಬದ ಆಚರಣೆಯಲ್ಲಿ ತೊಡಗಿದವು. ನಂತರ ತಮ್ಮ ತಮ್ಮ ಗುಡಿಗಳಿಗೆ ವಾಪಸ್ ತೆರಳಿದವು. ಚಿಕ್ಕಪೇಟೆಯಲ್ಲಿ ಪ್ರಾರ್ಥನೆ ಬಳಿಕ ಅಗ್ನಿಕೊಂಡ ನಡೆಯಿತು. ಈ ಅಗ್ನಿಕೊಂಡೋತ್ಸವದಲ್ಲಿ ಹಿಂದೂ-ಮುಸ್ಲಿಂರು ಒಂದೇಡೆ ಸೇರಿ ಭಾವೈಕ್ಯತೆ ಮೆರೆದರು.
ಮೊಹರಂ ಕಡೆಯ ದಿನದ ಅಂಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಕ್ಕರೆ ಓದಿಸುವುದು ಪದ್ದತಿ. ಈ ಕಾರ್ಯದಲ್ಲಿ ಹಿಂದೂಗಳು ಪಾಲ್ಗೊಂಡು ತಮ್ಮ ಮನೆ ಹಾಗೂ ಮಕ್ಕಳ ಒಳಿತಿಗಾಗಿ ಸಕ್ಕರೆ ಓದಿಸಿ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು.ಚರ್ಮದ ರೋಗ, ನರಗುಳ್ಳೆ ಆಗಿರುವವರು ಹರಕೆ ಮಾಡಿಕೊಂಡಿರುತ್ತಾರೆ. ಹಾಗಾಗಿ ಬಾಬಯ್ಯ ಗುಡಿಯ ಬಳಿ ಅಗ್ನಿಕೊಂಡಕ್ಕೆ ಉಪ್ಪು, ಮೆಣಸು ಹಾಕುವ ಮೂಲಕ ತಮ್ಮ ಕಾಯಿಲೆ ಶಮನಕ್ಕೆ ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯಗಳು ಜಿಲ್ಲೆಯಾದ್ಯಂತ ಕಂಡು ಬಂದವು.
ಶುಕ್ರವಾರ ಸಂಜೆ ನಗರದ ಜಿಸಿಆರ್ ಕಾಲೋನಿ, ಚಿಕ್ಕಪೇಟೆ, ಟಿಪ್ಪುನಗರ, ಮೆಕಾನ್ ಸೇರಿದಂತೆ ಎಲ್ಲ ಬಡಾವಣೆಗಳ ಬಾಬಯ್ಯ ದೇವರುಗಳು ಬಿ.ಎಚ್. ರಸ್ತೆ, ಎಂ.ಜಿ. ರಸ್ತೆ, ಗುಂಚಿ ಸರ್ಕಲ್ ಮುಖೇನ ಮೆರವಣಿಗೆಯಲ್ಲಿ ಸಾಗಿ ಮಂಡಿಪೇಟೆಯಲ್ಲಿ ಸೇರಿ, ಅಲ್ಲಿಂದ ಈದ್ಗಾ ಮೈದಾನಕ್ಕೆ ಸಾಮೂಹಿಕ ಮೆರವಣಿಗೆಯಲ್ಲಿ ಸಾಗಿದವು. ಈದ್ಗಾ ಮೈದಾನದಲ್ಲಿ ಬಾಬಯ್ಯ ದೇವರುಗಳು ಸೇರಿ ಪ್ರಾರ್ಥನೆ ಸಲ್ಲಿಸಿದ ನಂತರ ತಮ್ಮ ತಮ್ಮ ಬಡಾವಣೆಗಳತ್ತ ತೆರಳಿದವು.
