ಗದಗ: ತ್ಯಾಗ ಹಾಗೂ ಬಲಿದಾನಗಳ ಸಂಕೇತವಾದ ಮೊಹರಂ ಹಬ್ಬವನ್ನು ಶುಕ್ರವಾರ ಜಿಲ್ಲಾದ್ಯಂತ ಅತ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಹಿಂದೂ, ಮುಸ್ಲಿಮರು ಒಟ್ಟಾಗಿ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮತ್ತು ಭಾವೈಕ್ಯತೆಯ ವಿಶಿಷ್ಟ ಸಂದೇಶವನ್ನು ಸಾರಿದರು.
ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿನ ಮಸೀದಿಗಳಲ್ಲಿ ಕಳೆದ 5 ದಿನಗಳಿಂದ ಸ್ಥಾಪಿಸಿದ್ದ ಡೋಲಿ ಮತ್ತು ಪಾಂಜಾ ದೇವರನ್ನು ಶುಕ್ರವಾರ ಮುಂಜಾನೆ ಪಂಜಾ ಮತ್ತು ಡೋಲಿಗಳನ್ನು ಊರಿನ ಪ್ರಮುಖ ರಸ್ತೆಗಳು, ಬಜಾರಗಲ್ಲಿ ಯುವಕರ ಆಕರ್ಷಕ ಹೆಜ್ಜೆ ಮೇಳಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಯುವಕರ ಹೆಜ್ಜೆ ಮೇಳಗಳು ನೆರೆದಿದ್ದ ಸಾರ್ವಜನಿಕರನ್ನು ವಿಶೇಷವಾಗಿ ಆಕರ್ಷಿಸಿಸಿದವು.ಈ ಸಂದರ್ಭದಲ್ಲಿ ನಾಡಿನ ಶರಣರ ತತ್ವಪದಗಳು, ಜಾನಪದ ಗೀತೆಗಳು ಹಾಗೂ ಧರ್ಮಕ್ಕೋಸ್ಕರ ಪ್ರಾಣತ್ಯಾಗ ಮಾಡಿದ ಹಸೇನ, ಹುಸೇನರ ಜೀವನ ಚರಿತ್ರೆಯ ಗೀತೆಗಳು ಮೊಳಗಿದವು. ಭಕ್ತರು ಪಂಜಾ ದೇವರಿಗೆ ನಮಿಸಿ ತಮ್ಮ ಸಂಕಲ್ಪಗಳನ್ನು ಅರ್ಪಿಸಿದರೆ, ಡೋಲಿ ದೇವರಿಗೆ ಬೆಲ್ಲದ ಅಚ್ಚನ್ನು ಒಪ್ಪಿಸಿ ಭಕ್ತಿ ಸಮರ್ಪಿಸಿದರು.
ಆಕರ್ಷಕ ಅಗ್ನಿಕುಂಡ ಪ್ರವೇಶ: ಇದಕ್ಕೂ ಮುನ್ನಾ ದಿನ ಭಕ್ತರು ಮಸೀದಿಗೆ ತೆರಳಿ ನೈವೇದ್ಯ ಅರ್ಪಿಸಿದರು. ಕೆಲವರು ಫಕೀರರಾಗಿ ಮಸೀದಿಗೆ ತೆರಳಿ ಹರಕೆ ತೀರಿಸಿದರು. ಹಸೇನ, ಹುಸೇನರು ಧರ್ಮದ ಯುದ್ಧಕ್ಕೆ ತಯಾರಿ ನಡೆಸುವ ಅಂಗವಾಗಿ ಸಂದಲ್ ರಾತ್ರಿ ಯಂದು ಅಗ್ನಿಕುಂಡ ಹಾಯುವ ಕಾರ್ಯಕ್ರಮಗಳು ಎಲ್ಲೆಡೆ ಜರುಗಿದವು. ಇನ್ನು ಕತ್ತಲ್ ರಾತ್ರಿಯಂದು ಪ್ರಾಣತ್ಯಾಗ ಮಾಡಿದ ಸಹೋದರರಿಗೆ ಸಂತಾಪ ಸೂಚಿಸುವ ಸಲುವಾಗಿ, ಪ್ರತಿಯೊಂದು ಮಸೀದಿಗಳಲ್ಲಿಯೂ ಭಕ್ತಿಭಾವದಿಂದ ಅಗ್ನಿಕುಂಡ ಹಾಯುವ ವಿಶಿಷ್ಟ ಆಚರಣೆ ಜರುಗಿದವು.ವಿದಾಯ: ಸಂಜೆ ವೇಳೆ ಮತ್ತೊಮ್ಮೆ ಮೆರವಣಿಗೆ ನಡೆಸುವ ಮೂಲಕ, ಹಸೇನ, ಹುಸೇನರ ಅಂತ್ಯಸಂಸ್ಕಾರದ ನೆನಪಿಗಾಗಿ ಸಾಂಪ್ರದಾಯಿಕವಾಗಿ ಪ್ರತಿಯೊಂದು ಗ್ರಾಮಗಳಲ್ಲಿ ಕೆರೆಗಳಿಗೆ ತೆರಳಿ ಪಂಜಾಗಳನ್ನು ವಿಸರ್ಜಿಸಲಾಯಿತು. ಜಾತಿ, ಮತಗಳ ಭೇದವಿಲ್ಲದೆ ನಾವೆಲ್ಲರೂ ಒಂದೇ ಎಂದು ಸಾರುವ ಮೊಹರಂ ಆಚರಣೆಯು ಜಿಲ್ಲೆಯ ಕೋಮು ಸೌಹಾರ್ದತೆಯ ಇತಿಹಾಸಕ್ಕೆ ಮತ್ತೊಂದು ಸಾಕ್ಷಿ ಎನ್ನುವಂತೆ ಆಚರಿಸಲಾಯಿತು.