ಹಿಂದೂ-ಮುಸ್ಲಿಂರ ಭಾವೈಕ್ಯತೆ ಪ್ರತೀಕ ಮೊಹರಂ

| Published : Jul 17 2024, 12:46 AM IST

ಸಾರಾಂಶ

ಮಲಗಿದ ಭಕ್ತರನ್ನು ಪೀರ್‌ ಹಿಡಿದುಕೊಂಡವರು ದಾಟುವ ಮೂಲಕ ಭಕ್ತರಲ್ಲಿದ್ದ ದಾರಿದ್ರ್ಯ, ರೋಗರುಜಿನಗಳು ನಶಿಸಿ ಹೋಗುತ್ತದೆ ಎಂಬ ಧಾರ್ಮಿಕ ನಂಬಿಕೆ ಭಕ್ತರದ್ದಾಗಿದೆ

ಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಮಾರುತಿ ರಸ್ತೆಯುದ್ದಕ್ಕೂ ತಾಲೂಕಿನ ಶಿರವಾಳ ಗ್ರಾಮದ ಲಾಲಸಾಹೇಬ್‌ ಪೀರ್‌ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ಈ ಸಂದರ್ಭದಲ್ಲಿ ಭಕ್ತಾಧಿಗಳು ಶ್ರದ್ಧಾ, ಭಕ್ತಿಯಿಂದ ಪೀರ್‌ಗೆ ಕಾಯಿ, ಕರ್ಪೂರ, ಸಕ್ಕರೆ, ಲೋಬಾನ ಅರ್ಪಿಸಿ ದರ್ಶನ ಪಡೆದರು.

ಕೆಲವರು ಮಕ್ಕಳನ್ನು ಪೀರಗೆ ಮುಟ್ಟಿಸಿ ದರ್ಶನ ಮಾಡಿಸಿದರೆ, ದೊಡ್ಡವರು ಪೀರ್‌ಗೆ ಅಡ್ಡವಾಗಿ ನೆಲದ ಮೇಲೆ ಮಲಗಿದರು. ಮಲಗಿದ ಭಕ್ತರನ್ನು ಪೀರ್‌ ಹಿಡಿದುಕೊಂಡವರು ದಾಟುವ ಮೂಲಕ ಭಕ್ತರಲ್ಲಿದ್ದ ದಾರಿದ್ರ್ಯ, ರೋಗರುಜಿನಗಳು ನಶಿಸಿ ಹೋಗುತ್ತದೆ ಎಂಬ ಧಾರ್ಮಿಕ ನಂಬಿಕೆ ಭಕ್ತರದ್ದಾಗಿದೆ.

ಅದರಂತೆ ಪೀರ್‌ ಮೆರವಣಿಗೆ ಮುಂದೆ ಯುವಕರು ಅಲಾಯಿ ಆಡುವುದು, ಎಣಾಲ್ ಎಣಿಕೆಯ ಹಗ್ಗದಾಟ ನೋಡಲು ಆಕರ್ಷಕವಾಗಿತ್ತು. ಕೈಯಲ್ಲಿ ಖಡ್ಗ, ಕೊಡ್ಲಿ, ಬಡಿಗೆ ಹಿಡಿದುಕೊಂಡು ಬೋಸಯ್ಯಿ ಆಡುವುದು ಕಂಡು ಬಂದಿತು. ಹಲಗೆ ನಾದಕ್ಕೆತಕ್ಕಂತೆ ಕುಣಿಯುವುದು ಮನ ಮೋಹಕವಾಗಿ ದೃಶ್ಯವನ್ನು ನೆರೆದವರು ಕಣ್ತುಂಬಿಕೊಂಡರು.

ಮೊಹರಂ ಹಬ್ಬ ಕೇವಲ ಹಬ್ಬವಾಗಿರದೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಪ್ರತೀಕವಾಗಿದೆ. ಪುರಾತನ ಕಾಲದಿಂದಲೂ ಮೊಹರಂ ಹಬ್ಬವನ್ನು ಭಾವೈಕ್ಯತೆ, ಸಹೋದರತೆಯಿಂದ ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬವು ಒಂದು ವಿಶಿಷ್ಟವಾದ ಸಾಂಸ್ಕೃತಿಕ ಆಚರಣೆಯಾಗಿದೆ. ಇಂದಿಗೂ ಹಳ್ಳಿಗಳಲ್ಲಿ ಎಲ್ಲಾ ಸಮುದಾಯದ ಜನರ ಬಾಂಧವ್ಯವನ್ನು ಮೊಹರಂ ಹಬ್ಬ ಗಟ್ಟಿಗೊಳಿಸಿದೆ. ಇದು ಭಾರತೀಯ ಸಂಸ್ಕೃತಿಯಲ್ಲಿ ಕಂಡುಬರುವ ವಿಶಿಷ್ಟ ಆಚರಣೆಯಾಗಿದೆ.

ಧಾರ್ಮಿಕ ಹಿನ್ನೆಲೆ:

ಮುಸ್ಲಿಂ ಸಮುದಾಯದವರ ಪ್ರಕಾರ, ಮೊಹರಂ ಹಬ್ಬವು ಸಂತೋಷದಿಂದ ಆಚರಿಸುವ ಹಬ್ಬವಲ್ಲ. ಬದಲಾಗಿ, ಶೋಕ ಅಥವಾ ದುಃಖವನ್ನು ಹೊರಹಾಕುವ ತಿಂಗಳಾಗಿದೆ. 10 ದಿನಗಳ ಕಾಲ ಆಚರಣೆಯಲ್ಲಿರುತ್ತದೆ.

ಈ ದಿನವು ಪ್ರವಾದಿ ಮೊಹ್ಮದ್ ರ ಮೊಮ್ಮಗ ಹುಸೇನ್ ಇಬ್ನ ಅಲಿ ಅವರ ಮರಣವನ್ನು ಸ್ಮರಿಸುವ ದಿನವಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ 61 ನೇ ವರ್ಷದಲ್ಲಿ 10 ನೇ ಮೊಹರಂ (ಅಶುರಾ ದಿನ) ಕರ್ಬಲಾ ಯುದ್ಧ ನಡೆಯಿತು ಮತ್ತು ಪ್ರವಾದಿಯ ಪ್ರೀತಿಯ ಮೊಮ್ಮಗ ಇಮಾಮ್ ಹುಸೇನ್‌ರನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೆ ಸಮರ್ಪಿಸಿಕೊಂಡು ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಈ ಹಬ್ಬ ನಡೆಯುತ್ತದೆ.

ಪುರಾತನ ಕಾಲದಿಂದಲೂ ಮೊಹರಂ ಹಬ್ಬವನ್ನು ಭಾವೈಕ್ಯತೆ, ಸಹೋದರತೆಯಿಂದ ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬವನ್ನು ಇಂದಿಗೂ ಎಲ್ಲಾ ಜಾತಿಯ ಜನರ ಬಾಂಧವ್ಯವನ್ನು ಗಟ್ಟಿಗೊಳಿಸಿದೆ. ಹಳ್ಳಿಗಳಲ್ಲಿ ಜನರು ಶ್ರದ್ಧಾ, ಭಕ್ತಿಯೊಂದಿಗೆ ವಿಜೃಂಭಣೆಯಿಂದ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಮೊಹರಂದಿಂದ ಹೊಸ ಜಾನಪದ ಕಲೆ ಉಗಮವಾಯಿತು.

ಡಿ.ಎನ್. ಅಕ್ಕಿ, ಹಿರಿಯ ಸಾಹಿತಿ, ಸಂಶೋಧಕರು, ಗೋಗಿ.