ಸಾರಾಂಶ
ಧಾರವಾಡ:
ಒಂದೇ ಓದಿಗೆ ಇಡೀ ಪುಸ್ತಕವನ್ನೋದಿಯೇ ಕೆಳಗಿಡಬೇಕೆನಿಸುವ ಅತ್ಯಪೂರ್ವವಾದ ಕೃತಿ ಹಿರಿಯ ಪತ್ರಕರ್ತ ಮನೋಜ ಪಾಟೀಲರ `ಮುಕ್ತ'''''''' ಎಂದು ಖ್ಯಾತ ಲೇಖಕ ಡಾ. ಶ್ರೀಧರ ಹೆಗಡೆ ಭದ್ರನ್ ಹೇಳಿದರು.ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟ ಸಾಧನಕೇರಿಯ ಚೈತ್ರ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಸಮೀಕ್ಷೆ ಮಾಸಿಕ ಕಾರ‍್ಯಕ್ರಮದಲ್ಲಿ `ಮುಕ್ತ’ ಪ್ರಬಂಧ ಸಂಕಲನವನ್ನು ಸಮೀಕ್ಷಿಸಿದ ಅವರು, ಈ ಕೃತಿಯಲ್ಲಿಯ ಮುಕ್ಕಾಲು ಪಾಲು ಪ್ರಬಂಧಗಳು ವ್ಯಕ್ತಿ ಚಿತ್ರಣಗಳೇ ಆಗಿದ್ದು ಅವೆಲ್ಲವೂ ಒಂದಲ್ಲ ಒಂದು ರೀತಿಯ ಹಿರಿಯ ಸಾಧಕರ ಸತತ ಪರಿಶ್ರಮ, ಪ್ರಾಮಾಣಿಕತೆ, ಶುದ್ಧ ಹಸ್ತ ಮುಂತಾದ ಅಪೂರ್ವ ಸಾಧನೆಗಳ ಸಂಗಮವಾಗಿ ಚಿತ್ರಿತಗೊಂಡಿವೆ ಎಂದರು.
ಮ.ಪ್ರ ಪೂಜಾರ, ಶಾಂತಕವಿಗಳಂಥ ಕೆಚ್ಚೆದೆಯ ಕನ್ನಡಿಗರಾಗಿರಬಹುದು, ಜಗನ್ನಾಥರಾವ ಜೋಶಿ, ವೈ.ಎಸ್. ಪಾಟೀಲರಂಥ ಪ್ರಾಮಾಣಿಕ, ನಿಷ್ಠಾವಂತ ರಾಜಕಾರಣಿಗಳಾಗಿರಬಹುದು, `ಸಿರಿ ಗನ್ನಡಂಗೆಲ್ಗೆ’ ಎನ್ನುವಂತಹ ಶ್ರೀಮಂತ ನುಡಿಗಟ್ಟು ಕಟ್ಟಿಕೊಟ್ಟ ರಾ.ಹ. ದೇಶಪಾಂಡೆ ಅಂತಹ ಅಚ್ಚ ಕನ್ನಡಿಗನಿರಬಹುದು, ಹೊಸಗನ್ನಡ ಗದ್ಯಜನಕ ಗಂಗಾಧರ ಮಡಿವಾಳೇಶ್ವರ ತುರಮುರಿಯವರಿರಬಹುದು. ಇದರೆಲ್ಲರೂ ಸಾಲು ಸಾಲಾಗಿ ಕನ್ನಡದ `ಖರೇ’ ಶ್ರೀಮಂತರಾಗಿ ಕೆಲಕಾಲ ಎದುರು ನಿಂತು ನಿರ್ಗಮಿಸುತ್ತಾರೆ. ಇಂತಹ ಹಲವು, ಹತ್ತು ವಿಶಿಷ್ಟ ಪ್ರಸಂಗಗಳ ರಸಘಟ್ಟಿಯೇ `ಮುಕ್ತ’ ಸಂಕಲನದಲ್ಲಿ ಉತ್ತರ ಕರ್ನಾಟಕದ ಗಂಡು ಭಾಷೆಯಲ್ಲಿ ಕಳೆಗಟ್ಟಿನಿಂತಿದೆ ಎಂದರು.ಹಿಂದಿನ ಕಾಲದ ಧಾರವಾಡದ ಏರಿಳಿವುಗಳಿಂದ ಕೂಡಿದ ನೈಸರ್ಗಿಕ ಚೆಲುವು, ಆಕಾಶ ಮಲ್ಲಿಗೆ, ಸಂಪಿಗೆ ಹೂಗಳ ಕೆಂಪು, ಅಲ್ಲಿಯ ಲೈನಬಝಾರ ಪೇಢೆಯ ರುಚಿ, ಸಾಹಿತಿಗಳ ದೊಡ್ಡಬಳಗ, ವಾಮನಂದರಾವ್ ಮಾಸ್ತರ ನಾಟಕಗಳು ಇಂಥ ಹಲವಾರು ಸವಿನೆನಪಿನ ರಾಶಿಹೊತ್ತ ಬಲು ಅಪರೂಪದ ಸ್ವಾದಿಷ್ಟ ಗ್ರಂಥವಿದು ಎಂದು ಶ್ರೋತೃಗಳಿಗೆ ಇಡೀ ಪುಸ್ತಕದ ಹೂರಣವನ್ನುಣಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಜೆ.ಎಂ. ಚಂದೂನವರ, ಪತ್ರಕರ್ತ ಡಾ. ಬಸವರಾಜ ಹೊಂಗಲ ಮಾತನಾಡಿ ಯಾರಿಗೂ ತಲೆಭಾಗದ, ದಿಟ್ಟ ನಿಲುವಿನ ನಿರ್ಭಿಡೆಯ ಪತ್ರಕರ್ತ ಮನೋಜ ಪಾಟೀಲರ ಸಾಮಾಜಿಕ ಕಳಕಳಿಗಳೆಲ್ಲವೂ ಅವರ ''''''''ಮುಕ್ತ'''''''' ಕೃತಿಯ ಅಪರೂಪದ ಲೇಖನಗಳಾಗಿ ರೂಪುಗೊಂಡಿವೆ ಎಂದರು.ಕೃತಿಕಾರ ಮನೋಜ ಪಾಟೀಲರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಿವೃತ್ತ ಪಿಡಬ್ಲ್ಯೂಡಿ ಕಾರ‍್ಯದರ್ಶಿ ಜಿ.ಸಿ. ತಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ, ಪರಾಂಜಪೆ, ವೇಕಟೇಶ ದೇಸಾಯಿ, ಹ.ವೆಂ. ಕಾಖಂಡಿಕಿ, ಗಣ್ಯರಾದ ಡಾ. ಕೃಷ್ಣಕಟ್ಟಿ, ಮಹಾಬಲೇಶ್ವರ ಸಿಂದಗಿ, ರಾಜೀವ ಪಾಟೀಲ ಕುಲಕರ್ಣಿ, ಪ್ರೊ. ಹರ್ಷ ಡಂಬಳ, ಆನಂದ ಕುಲಕರ್ಣಿ, ಎಂ.ಬಿ. ಕಟ್ಟಿ, ವಿಘ್ನೇಶ್ವರ ಗೌಡ, ತಾ.ಭ. ಚವ್ಹಾಣ, ಎಸ್.ಟಿ. ಸುಬ್ರಾಯ, ರಮೇಶ ನಾಡಿಗೇರ, ಎಂ.ಬಿ. ಸದಾನಂದ, ಎಂ.ಎ. ಕಾಮಟೆ, ಎಸ್.ಬಿ. ದ್ವಾರಪಾಲಕ, ಬದರೀ ವಿಶಾಲ ರ‍್ವತೀಕರ, ಕೆ.ಎಸ್. ಘಾಣೇಕರ, ಶ್ರೀಪಾದ ನಾಡಿಗೇರ ಇದ್ದರು.