ಮುಳಗುಂದ ಪಪಂ ಅಧ್ಯಕ್ಷರಾಗಿ ಯಲ್ಲವ್ವ ಆಯ್ಕೆ

| Published : Sep 10 2024, 01:31 AM IST

ಸಾರಾಂಶ

ಮುಳಗುಂದ ಪಪಂ 2ನೇ ಅವಧಿಗೆ ಸೋಮವಾರ ನಡೆದ ಚುನವಾಣೆಯಲ್ಲಿ ನಿರೀಕ್ಷೆಯಂತೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಒಲಿದರೆ ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಲಭಿಸಿದೆ.

ಮುಳಗುಂದ: ಸ್ಥಳೀಯ ಪಪಂ 2ನೇ ಅವಧಿಗೆ ಸೋಮವಾರ ನಡೆದ ಚುನವಾಣೆಯಲ್ಲಿ ನಿರೀಕ್ಷೆಯಂತೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಒಲಿದರೆ ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಲಭಿಸಿದೆ.

ಕಾಂಗ್ರೆಸ್ 15, ಬಿಜೆಪಿ 3 ಹಾಗೂ ಪಕ್ಷೇತರ 1 ಸೇರಿ ಒಟ್ಟು 19 ಸದಸ್ಯರನ್ನೊಳಗೊಂಡ ಪಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ.ಜಾ. ಮಹಿಳೆಗೆ ಮೀಸಲಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಯಲ್ಲವ್ವ ಕವಲೂರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅನಸೂಯಾ ಸೋಮಗಿರಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ-ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಬಯಸದೇ ಬಂದ ಭಾಗ್ಯ:

ಕಾಂಗ್ರೆಸ್‌ನ ಭದ್ರಕೋಟೆಯಾದ ಮುಳಗುಂದ ಪಪಂಯಲ್ಲಿ ಕಳೆದ ಸುಮಾರು 30 ವರ್ಷಗಳಿಂದ ಬಿಜೆಪಿಗೆ ಯಾವುದೇ ಸ್ಥಾನ ಲಭಿಸಿದ ಉದಾಹರಣೆ ಇಲ್ಲ. ಆದರೆ 2ನೇ ಅವಧಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಸರ್ಕಾರದ ಮೀಸಲಾತಿ ನಿಯಮಾನುಸಾರ ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ಲಭಿಸಿರುವುದು ಇತಿಹಾಸ. ಪಪಂನಲ್ಲಿ 15 ಸದಸ್ಯರ ಬಲ ಹೊಂದಿದ ಕಾಂಗ್ರೆಸ್‌ನಲ್ಲಿ ಪಜಾ ಮಹಿಳೆ ಮೀಸಲು ಕ್ಷೇತ್ರದಲ್ಲಿ ಸದಸ್ಯರಿಲ್ಲದ ಕಾರಣ ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ಒಲಿದಿದ್ದು, ಒಂದು ರೀತಿಯಲ್ಲಿ ಬಯಸದೇ ಬಂದ ಭಾಗ್ಯ ಎಂಬಂತಾಗಿದೆ.

ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ ಮಾತನಾಡಿ, ಪಪಂ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾವುದೇ ಪಕ್ಷ-ಭೇದ ಮಾಡದೆ ಒಟ್ಟಾಗಿ ಊರಿನ ಅಭಿವೃದ್ಧಿ ಮಾಡೋಣ. ಎಲ್ಲ ಪಪಂ ಸದಸ್ಯರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡಿ. ರಾಜ್ಯದಲ್ಲಿಯೇ ಮುಳಗುಂದ ಪಪಂಯನ್ನು ಮಾದರಿ ಮಾಡೋಣ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ ಎಂ.ಡಿ. ಬಟ್ಟೂರ, ಪರಶುರಾಮ ವಂಟಕರ, ಪಪಂ ಸದಸ್ಯರಾದ ವಿಜಯ ನೀಲಗುಂದ, ಕೆ.ಎಲ್. ಕರಿಗೌಡ್ರ, ಎನ್.ಆರ್. ದೇಶಪಾಂಡೆ, ಷಣ್ಮುಖಪ್ಪ ಬಡ್ನಿ, ಇಮಾಮಸಾಬ ಶೇಖ್, ಡಿ.ಎಸ್. ನೀಲಗುಂದ, ಮಹಾದೇವಪ್ಪ ಗಡಾದ, ಮಹಾಂತೇಶ ನೀಲಗುಂದ, ಹೊನ್ನಪ್ಪ ಹಳ್ಳಿ, ಮುಖಂಡರಾದ ಬಸವರಾಜ ಬಾತಾಖಾನಿ, ಸೈಯದ್‌ಅಲಿ ಶೇಖ್, ಅಶೋಕ ಹುಣಸಿಮರದ, ಮನಸೂರ ಹಣಗಿ ಇದ್ದರು.