ಮೂಲ್ಕಿ: ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟನೆ

| Published : Jul 31 2025, 01:06 AM IST

ಸಾರಾಂಶ

ಯುವವಾಹಿನಿಯ ಮೂಲ್ಕಿ ಘಟಕ ವತಿಯಿಂದ ಮೂಲ್ಕಿ ಬಿಲ್ಲವ ಸಮಾಜದ ಸೇವಾ ಸಂಘದ ಸಭಾಭವನದಲ್ಲಿ 23 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭವಾರ್ತೆ ಮೂಲ್ಕಿಆಧುನಿಕ ಯುಗದ ಬರ್ಗರ್ ಪಿಜ್ಜಾ ತಿಂಡಿಗಳನ್ನು ಬದಿಗೆ ಸರಿಸಿ ಹಿಂದಿನ ಕಾಲದ ಆರೋಗ್ಯ ವರ್ಧಕ ತಿಂಡಿ ತಿನಿಸುಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದರ ಜೊತೆಗೆ ಯುವ ಜನಾಂಗಕ್ಕೆ ಹಿಂದಿನ ಕಾಲದಲ್ಲಿ ಹಿರಿಯರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಪಟ್ಟ ಶ್ರಮ ತಿಳಿ ಹೇಳುವ ಕೆಲಸವಾಗಬೇಕು ಎಂದು ಪುತ್ತೂರು ಅಕ್ಷಯ ಕಾಲೇಜಿನ ಮುಖ್ಯಸ್ಥ ಜಯಂತ್ ನಡುಬೈಲು ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಯುವವಾಹಿನಿಯ ಮೂಲ್ಕಿ ಘಟಕ ವತಿಯಿಂದ ಮೂಲ್ಕಿ ಬಿಲ್ಲವ ಸಮಾಜದ ಸೇವಾ ಸಂಘದ ಸಭಾಭವನದಲ್ಲಿ ನಡೆದ 23 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ವಿನಯ್ ಕುಮಾರ್ ಮಟ್ಟು ವಹಿಸಿದ್ದು ಅಕ್ಕಿ ಮುಡಿಯಿಂದ ಅಕ್ಕಿಯನ್ನು ತೆಗೆದು ತಡಪೆಯಲ್ಲಿ ಹಾಕಿ ಕಾರ್ಯಕ್ರಮಕ್ಕೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಾಯಿತು. ಹಿಂದಿನ ದೂರದರ್ಶನದ ವಾರ್ತಾ ಪ್ರಸಾರ ಶೈಲಿಯಲ್ಲಿ ಕಾರ್ಯಕ್ರಮದ ಪ್ರಸ್ತಾವನೆ ಮಾಡಲಾಯಿತು.

ಜನಪದ ವಿದ್ವಾಂಸ ದಿನೇಶ್ ಸುವರ್ಣ ರಾಯಿ ಯವರು ಆಷಾಡ ಮಾಸದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣರಿಗೆ ಸಾಧಕರ ನೆಲೆಯಲ್ಲಿ ಆಟಿದ ತಮ್ಮನ ನೀಡಿ ಗೌರವಿಸಲಾಯಿತು.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ತುಳು ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಶೋಧನ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಕಾರ್ಯದರ್ಶಿ ಪ್ರೇರಣಾ, ಕಾರ್ಯಕ್ರಮ ನಿರ್ದೇಶಕಿ ಶಕೀಲಾ ಹರೀಂದ್ರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಬೆಳಿಗ್ಗೆ ಅರೆಪುದಡ್ಡೆ, ಚಾ, ಕಾಫಿ, ಕಡ್ಲೆ, ಹಪ್ಪಳ ಮತ್ತು ಮಧ್ಯಾಹ್ನ ಆಷಾಡ ಮಾಸದ ವಿವಿಧ ಬಗೆಯ ತಿನಿಸುಗಳ ‘ಆಟಿದ ಆಟಿಲ್’ಗಳಾದ ಕುಕ್ಕುದ ಉಪ್ಪಡ್, ತಿಮರೆ ಚಟ್ಟಿ, ಉಪ್ಪಡ್ ಪಚ್ಚಿರ್, ಕುಡುತ್ತ ಚಟ್ಟಿ, ತೊಜಂಕ್ ನುರ್ಗೆ ಸೊಪ್ಪು, ತೇವು ತೇಟ್ಲಿ, ಉರ್ಪೇಲ್ ನುಪ್ಪು, ಕುಡುತ ಸಾರ್, ತೇವು ಪದ್ದೆ, ಪೆಲಕಾಯಿದ ಗಾರ್ಯ, ಮೆತ್ತೆದ ಗಂಜಿ ಊಟವನ್ನು ನೀಡಲಾಯಿತು. ಯುವವಾಹಿನಿಯ ಅಧ್ಯಕ್ಷ ವಿನಯ ಕುಮಾರ್‌ ಮಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ಪ್ರೇರಣಾ ವಂದಿಸಿದರು. ನರೇಂದ್ರ ಕೆರೆಕಾಡು ನಿರೂಪಿಸಿದರು.