ಮೂಲ್ಕಿ: ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಸಮಾರೋಪ

| Published : Feb 26 2025, 01:02 AM IST

ಸಾರಾಂಶ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಆಫ್ ಬರೋಡ ಮೂಲ್ಕಿ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಶಾಂಭವಿ ಸಂಜೀವಿನಿ ಒಕ್ಕೂಟ ಮೂಲ್ಕಿ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಮೂಲ್ಕಿ ಆಶ್ರಯದಲ್ಲಿ ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಸೀರೆ ಗೊಂಡೆ ಹಾಕುವ ತರಬೇತಿ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತರಬೇತಿ ಮೂಲಕ ಕೌಶಲ್ಯ ಕಲಿತು ಮಹಿಳೆಯರು ಸ್ವ ಉದ್ಯೋಗ ಮಾಡಲು ಸಾಧ್ಯವಿದ್ದು ಬ್ಯಾಂಕ್‌ನಿಂದ ಸಾಲ ಸೌಲಭ್ಯ ಪಡೆದು ಸ್ವಾವಲಂಬನೆ ಜೀವನ ನಡೆಸಬೇಕು ಎಂದು ಬ್ಯಾಂಕ್ ಆಫ್ ಬರೋಡ ಮೂಲ್ಕಿ ಶಾಖೆಯ ಹಿರಿಯ ಶಾಖಾ ಪ್ರಬಂಧಕ ಸಚಿನ್ ಹೆಗ್ಡೆ ಹೇಳಿದ್ದಾರೆ.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಆಫ್ ಬರೋಡ ಮೂಲ್ಕಿ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಶಾಂಭವಿ ಸಂಜೀವಿನಿ ಒಕ್ಕೂಟ ಮೂಲ್ಕಿ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಮೂಲ್ಕಿ ಆಶ್ರಯದಲ್ಲಿ ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಸೀರೆ ಗೊಂಡೆ ಹಾಕುವ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಮಾರುಕಟ್ಟೆಯಲ್ಲಿ ಸ್ವ ಉದ್ಯೋಗದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಮಹಿಳೆಯರು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಶಾಂಭವಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಮೂಲ್ಕಿ ಬಿಲ್ಲವ ಸಂಘದ ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಅಮೀನ್, ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ , ಭಾರತೀಯ ಜೀವ ವಿಮಾ ನಿಗಮ ಮೂಲ್ಕಿ ಶಾಖೆಯ ಪ್ರಬಂಧಕ ಕೆ. ಪ್ರಕಾಶ್ , ತರಬೇತುದಾರರಾದ ಶುಭ ಲಕ್ಷ್ಮೀ ಮತ್ತಿತರರು ಇದ್ದರು.

ತರಬೇತಿ ಪಡೆದ ಮಹಿಳೆಯರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಯಶಸ್ವಿಯಾಗಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.