ಮೂಲ್ಕಿ ಕಾರ್ನಾಡ್ ಗೇರುಕಟ್ಟೆ ಬಳಿ ಸುಮಾರು 10 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೂಲ್ಕಿ ತಾಲೂಕಿನ ನೂತನ ತಾಲೂಕು ಆಡಳಿತ ಸೌಧ (ಪ್ರಜಾಸೌಧ)ದ ಉದ್ಘಾಟನೆಯಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿ ಪರಿಶೀಲಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಬುಧವಾರ ಸೌಧಕ್ಕೆ ದಿಢೀರ್ ಭೇಟಿ
ಮೂಲ್ಕಿ: ಮೂಲ್ಕಿ ಕಾರ್ನಾಡ್ ಗೇರುಕಟ್ಟೆ ಬಳಿ ಸುಮಾರು 10 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೂಲ್ಕಿ ತಾಲೂಕಿನ ನೂತನ ತಾಲೂಕು ಆಡಳಿತ ಸೌಧ (ಪ್ರಜಾಸೌಧ)ದ ಉದ್ಘಾಟನೆಯಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿ ಪರಿಶೀಲಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಬುಧವಾರ ಸೌಧಕ್ಕೆ ದಿಢೀರ್ ಭೇಟಿ ನೀಡಿದರು.
ಶಾಸಕ ಉಮಾನಾಥ ಕೋಟ್ಯಾನ್ ವಿನಂತಿಯ ಮೇರೆಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 2019ರಲ್ಲಿ ಎಚ್ ಡಿ ಕುಮಾರ ಸ್ವಾಮಿ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಮೂಲ್ಕಿ ತಾಲೂಕು ಘೋಷಣೆಯಾಗಿತ್ತು. 2021ರಲ್ಲಿ ಸಚಿವ ವಿ. ಸೋಮಣ್ಣ ಸುಮಾರು 10 ಕೋಟಿ ವೆಚ್ಚದ ನೂತನ ಪ್ರಜಾ ಸೌಧಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಕಟ್ಟಡದ ಕಾಮಗಾರಿ ಸಂಪೂರ್ಣಗೊಂಡು ಉದ್ಘಾಟನೆಗೆ ಮೀನ ಮೇಷ ಎಣಿಸುತ್ತಿದೆ.ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ತಾಲೂಕು ಆಡಳಿತ ಸೌಧ (ಪ್ರಜಾಸೌಧ) ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪೀಠೋಪಕರಣ, ಲಿಫ್ಟ್ ಸೇರಿದಂತೆ ಉಳಿದಿರುವ ಕಾಮಗಾರಿಗಳನ್ನು ಮುಂದಿನ 20 ದಿನದೊಳಗೆ ಪೂರೈಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಸಚಿವರು ಹಾಗೂ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಪ್ರಜಾಸೌಧದ ಉದ್ಘಾಟನೆಗೆ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಲಾಗುವುದೆಂದು ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ತಹಸೀಲ್ದಾರ್ ಕಚೇರಿ, ಖಜಾನೆ, ಸಬ್ ರಿಜಿಸ್ಟ್ರಾರ್, ಶಾಸಕರ ಕಚೇರಿ ಸಹಿತ ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಪ್ರಜಾಸೌಧ ನಿರ್ಮಿಸಲಾಗಿದೆ. ಕಟ್ಟಡದ ಉಳಿದ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿ ಆದಷ್ಟು ಬೇಗ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.ಹೌಸಿಂಗ್ ಬೋರ್ಡ್ ಸಹಾಯಕ ಎಕ್ಸಿಕ್ಯುಟಿವ್ ಇಂಜಿನಿಯರ್ ಸಹನಾ ಮಾತನಾಡಿ, ಪ್ರಜಾಸೌಧ ಕಟ್ಟಡದ ಸುತ್ತ ಕಂಪೌಂಡ್ ನಿರ್ಮಾಣಕ್ಕೆ 1.60 ಕೋಟಿ ರು. ವೆಚ್ಚದ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆ ದೊರೆಯಬೇಕಿದೆಯೆಂದು ಹೇಳಿದರು.ತಹಸೀಲ್ದಾರ್ ಶ್ರೀಧರ ಮುದಲಮನಿ, ಗುತ್ತಿಗೆದಾರ ಬಿಮಲ್ ಕನ್‌ಸ್ಟ್ರಕ್ಷನ್‌ನ ಪ್ರವೀಣ್ ಕುಮಾರ್ ಕಟ್ಟಡ ಕಾಮಗಾರಿ ಹಾಗೂ ಬಾಕಿ ಇರುವ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.ಸಬ್ ರಿಜಿಸ್ಟ್ರಾರ್ ರಾಜೇಶ್ವರೀ ಹೆಗಡೆ, ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ನಿರೀಕ್ಷಕ ಮೋಹನ್, ಮೂಲ್ಕಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಅಂಚನ್, ಸುನಿಲ್ ಆಳ್ವ ಮತ್ತು ಸುಭಾಷ್ ಶೆಟ್ಟಿ ಉಪಸ್ಥಿತರಿದ್ದರು.