ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಅಫಜಲ್ಪುರ ತಾಲೂಕಿನ ಭೀಮಾ ತೀರ, ದತ್ತ ಮಹಾರಾಜರು ನೆಲೆ ನಿಂತಿರುವ ಪುಣ್ಯತಾಣ ಗಾಣಗಾಪುರ ಸಮಗ್ರ ಅಭಿವೃದ್ದಿಯ ನೀಲನಕ್ಷೆ ತೀವ್ರ ಸುದ್ದಿಗೆ ಗ್ರಾಸವಾಗಿದೆ.
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಅಫಜಲ್ಪುರ ತಾಲೂಕಿನ ಭೀಮಾ ತೀರ, ದತ್ತ ಮಹಾರಾಜರು ನೆಲೆ ನಿಂತಿರುವ ಪುಣ್ಯತಾಣ ಗಾಣಗಾಪುರ ಸಮಗ್ರ ಅಭಿವೃದ್ದಿಯ ನೀಲನಕ್ಷೆ ತೀವ್ರ ಸುದ್ದಿಗೆ ಗ್ರಾಸವಾಗಿದೆ.ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿ ಖ್ಯಾತವಾಗಿರುವ ಗಾಣಗಾಪುರಕ್ಕೆ ನಿತ್ಯ ಸಹಸ್ರಾರು ಭಕ್ತರು ಬಂದು ಹೋಗುತ್ತಿದ್ದರೂ ಮೂಲ ಸೌಕರ್ಯ ಕೊರತೆಯಿಂದಾಗಿ ಈ ಪುಣ್ಯಕ್ಷೇತ್ರಕ್ಕೆ ಬಂದು ಹೋಗುವ ಭಕ್ತರು ಪಡಬಾರದ ಪಾಡು ಪಡುತ್ತಿರೋದು ಕಟು ವಾಸ್ತವ.ದರ್ಶನಕ್ಕಿಲ್ಲದ ಸರತಿ ಸಾಲು, ನೈರ್ಮಲ್ಯ ಕೊರತೆ, ಕುಡಿಯುವ ನೀರು, ಶೌಚಲಾಯ ಅವ್ಯವಸ್ಥೆ, ಪಾರ್ಕಿಂಗ್ ಸೇರಿದಂತೆ ಹಲವು ಹಂತಗಳಲ್ಲಿನ ಅಪಸವ್ಯಗಳು, ಪ್ರಸಾದ ವ್ಯವಸ್ಥೆ, ಸಂಗಮಕ್ಕೆ ಹೋಗಿ ಬರಲು ಸೂಕ್ತ ರಸ್ತೆ, ಸಾರಿಗೆ ಸವಲತ್ತಿಲ್ಲದೆ ಗಾಣಗಾಪುರಕ್ಕೆ ಬಂದು ಹೋಗುವ ಭಕ್ತರು ಕಂಗಾಲಾಗುತ್ತಿರುವಾಗಲೇ ಸಚಿವ ಖರ್ಗೆ ಹೇಳಿಕೆ ಹೊರಬಿದ್ದಿರುವುದು ದತ್ತನ ಭಕ್ತರಲ್ಲಿ ಹೊಸ ನಿರೀಕ್ಷೆಗಳನ್ನು ಗರಿಗೆದರುವಂತೆ ಮಾಡಿದೆ.ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ₹250 ಕೋಟಿ ವೆಚ್ಚದ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ಇದರ ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆ.ಗಾಣಗಾಪುರಕ್ಕೆ ಹೊಸ ಸ್ಪರ್ಶ ನೀಡುವ ಉದ್ದೇಶದಿಂದಾಗಿ ಗೃಹ, ಐಟಿಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಯೋಜನೆಯ ವಿಸ್ತೃತ ಯೋಜನಾ ವರದಿ ಮತ್ತು ವಿನ್ಯಾಸ ಸಿದ್ಧಗೊಂಡಿದೆ.ಮೊದಲ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಸಂಪುಟದ ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಅಂದಾಜು ₹50 ಕೋಟಿ ವೆಚ್ಚದ ಈ ಹಂತದಲ್ಲಿ ಆರು ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.*ಮೊದಲ ಹಂತದ 6 ಕಾಮಗಾರಿ: ಮೊದಲ ಹಂತದ ಯೋಜನೆಯಡಿ ₹17.12 ಕೋಟಿ ವೆಚ್ಚದಲ್ಲಿ ಸಂಗಮ ಘಾಟ್, ₹12.50 ಕೋಟಿ ವೆಚ್ಚದಲ್ಲಿ ಪಾಪವಿನಾಶ ತೀರ್ಥ, ₹6.50 ಕೋಟಿ ವೆಚ್ಚದಲ್ಲಿ ಪ್ರೊಮೆನಡ್ ಟು ಟೆಂಪಲ್, ₹9.10 ಕೋಟಿ ವೆಚ್ಚದಲ್ಲಿ ಪಾರ್ಕಿಂಗ್ ಮತ್ತು ಟ್ರಾನ್ಸಿಟ್ ವ್ಯವಸ್ಥೆ, ₹52 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣದಿಂದ ದೇವಸ್ಥಾನದವರೆಗೆ ಪಾದಚಾರಿ ಮಾರ್ಗ ಹಾಗೂ ₹4.25 ಕೋಟಿ ವೆಚ್ಚದಲ್ಲಿ ದೇವಸ್ಥಾನ ಸಂಕೀರ್ಣದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
*ಸಂಗಮ ಘಾಟ್: ₹17.12 ಕೋಟಿ ವೆಚ್ಚದಲ್ಲಿ ಸಂಗಮ ಘಾಟ್ ಅಭಿವೃದ್ಧಿ, ಇಲ್ಲಿ ವಾಹನಗಳ ಪಿಕಪ್ ಮತ್ತು ಡ್ರಾಪ್ ವ್ಯವಸ್ಥೆ, 70 ಕಾರುಗಳ ನಿಲುಗಡೆಗೆ ಪಾರ್ಕಿಂಗ್, 40 ವಾಣಿಜ್ಯ ಮಳಿಗೆಗಳು, ಉದ್ಯಾನವನ, ಮಾಹಿತಿ ಕೇಂದ್ರ, ವಿದ್ಯುತ್ ದೀಪಾಲಂಕಾರ, ಸಾರ್ವಜನಿಕ ಶೌಚಾಲಯ ಒಳಗೊಂಡಿವೆ. *ಪಾಪವಿನಾಶ ತೀರ್ಥ: ₹12.50 ಕೋಟಿ ವೆಚ್ಚದಲ್ಲಿ ಪಾಪವಿನಾಶ ತೀರ್ಥ ಅಭಿವೃದ್ಧಿಗೆ ಯೋಜನೆ. ಭಕ್ತರು ಸುರಕ್ಷಿತವಾಗಿ ತೀರ್ಥಸ್ನಾನ ಮಾಡಲು ಫ್ಲೋಟಿಂಗ್ ಜೆಟ್ಟಿ (ತೇಲುವ ಸ್ನಾನ ವೇದಿಕೆ), ಬಟ್ಟೆ ಬದಲಾಯಿಸುವ ಕೊಠಡಿಗಳು, ಉದ್ಯಾನವನ ಹಾಗೂ ಶೌಚಾಲಯ, ನದಿಗೆ ಇಳಿಯಲು ದ ಮೆಟ್ಟಿಲುಗಳು.*ದತ್ತ ಮಂದಿರಕ್ಕೆ ಮಾರ್ಗ: ₹6.50 ಕೋಟಿ ವೆಚ್ಚದಲ್ಲಿ ಮುಖ್ಯ ರಸ್ತೆಯಿಂದ ಮಹಾದ್ವಾರದ ಮೂಲಕ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳುವ 160 ಮೀಟರ್ ಉದ್ದದ ಮಾರ್ಗ ಅಭಿವೃದ್ಧಿ. ಮಾರ್ಗದಲ್ಲಿ 30 ಅಂಗಡಿಗಳು, ಸಾರ್ವಜನಿಕ ಶೌಚಾಲಯ, ಷಟಲ್ ಸರ್ವಿಸ್, ಮಾಹಿತಿ ಕೇಂದ್ರ ಹಾಗೂ ಪ್ರತಿಮೆ ಸ್ಥಾಪನೆ, ಭೂಗತ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಿ, ಡಿಜಿಟಲೀಕರಣಕ್ಕೂ ಆದ್ಯತೆ.*ಪಾರ್ಕಿಂಗ್ ಮತ್ತು ಟ್ರಾನ್ಸಿಟ್ ವ್ಯವಸ್ಥೆ: ದೇವಸ್ಥಾನದಿಂದ 1.9 ಕಿ.ಮೀ. ದೂರದಲ್ಲಿರುವ ಚೌಡಾಪುರ ರಸ್ತೆಯ ದಿಕ್ಕಿನಲ್ಲಿ ಪಾರ್ಕಿಂಗ್ ಮತ್ತು ಟ್ರಾನ್ಸಿಟ್ ವ್ಯವಸ್ಥೆ,10 ಎಕರೆ ಪ್ರದೇಶದಲ್ಲಿ 8 ಎಕರೆ ಜಾಗದಲ್ಲಿ ಪಾರ್ಕಿಂಗ್ ಸಂಕೀರ್ಣ, 860 ಕಾರುಗಳು ಹಾಗೂ 500 ದ್ವಿಚಕ್ರ ವಾಹನಗಳ ನಿಲುಗಡೆ ಅವಕಾಶ. *ಪಾದಚಾರಿ ಮಾರ್ಗ: ₹52 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣದಿಂದ ದೇವಸ್ಥಾನದವರೆಗೆ ಪಾದಚಾರಿ ಮಾರ್ಗ, 1.8 ಮೀಟರ್ ಅಗಲದ ಈ ಮಾರ್ಗದಲ್ಲಿ ಸಸಿಗಳನ್ನು ನೆಡಲಾಗುತ್ತದೆ. ಮಾರಾಟಗಾರರಿಗೆ ವ್ಯವಸ್ಥಿತ ಕಿಯೋಸ್ಕ್, ಯಾತ್ರಿಕರು ವಿಶ್ರಾಂತಿ ಪಡೆಯಲು ಅಲ್ಲಲ್ಲಿ ಆಸನಗಳಿರಲಿವೆ.*ದೇವಸ್ಥಾನ ಸಂಕೀರ್ಣದ ಅಭಿವೃದ್ಧಿ: ₹4.25 ಕೋಟಿ ವೆಚ್ಚದಲ್ಲಿ ದೇವಸ್ಥಾನ ಸಂಕೀರ್ಣ ಅಭಿವೃದ್ಧಿ. ಗರ್ಭಗುಡಿಯ ದರ್ಶನಕ್ಕೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದಾರಿಗಳು, ವಿಐಪಿ ಪ್ರವೇಶಕ್ಕೂ ಪ್ರತ್ಯೇಕ ದಾರಿ. ದೇವಸ್ಥಾನದ ಪಕ್ಕದ ಕಟ್ಟಡದಲ್ಲಿ ಪೂಜೆ ಮತ್ತು ಅಭಿಷೇಕಕ್ಕೆ ಪ್ರತ್ಯೇಕ ಹಾಲ್, ಭಕ್ತರು ಪಾದರಕ್ಷೆಗಳನ್ನು ಇರಿಸಲು ವ್ಯವಸ್ಥೆ, ಅಂಗವಿಕಲರ ಅನುಕೂಲಕ್ಕಾಗಿ ವಿಶೇಷ ಪ್ರವೇಶ ಮಾರ್ಗ.ಪ್ರವಾಸಿಗರಿಗೆ ಆಕರ್ಷಕ ಕೇಂದ್ರ: ದತ್ತಾತ್ರೇಯ ದೇವಸ್ಥಾನಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಉದ್ಯಾನವನ, ವಿದ್ಯುತ್ ದೀಪಾಲಂಕಾರ, ಅಗತ್ಯ ಮೂಲಸೌಕರ್ಯ ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ನದಿ ತೀರದ ಸೌಂದರ್ಯೀಕರಣಕ್ಕೂ ಆದ್ಯತೆ ನೀಡಲಾಗುತ್ತಿದೆ. ಈ ನೀಲನಕ್ಷೆ ಯಥಾವತ್ತಾಗಿ ಜಾರಿಯಾದಲ್ಲಿ ದತ್ತನ ಗಾಣಗಾಪೂರ ಇನ್ನೂ ಭಕ್ತರಿಗೆ ಹತ್ತಿರವಾಗಲಿದೆ.ಗಾಣಗಾಪುರದ ಶ್ರೀ ದತ್ತಾತ್ರೇಯ ಕ್ಷೇತ್ರಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ಒದಗಿಸಿ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ