ಸಾರಾಂಶ
ಹಳಿಯಾಳ: ತಾಲೂಕಿನ 114 ಹಳ್ಳಿಗಳಿಗೆ ನೀರನ್ನು ಪೂರೈಸುವ ಈ ಭಾಗದ ಮಹತ್ವಾಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಫೆ. 15ರೊಳಗೆ ಪೂರ್ಣಗೊಳಿಸಿ ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ನೀರು ಸರಬರಾಜು ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಅಧಿಕಾರಿಗಳಿಗೆ ಗಡುವು ನೀಡಿದರು.
ಶುಕ್ರವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ ಕಡಿಮೆ ಮಾನವ ದಿನಗಳನ್ನು ಸೃಜನ ಮಾಡಿದ ಗ್ರಾಮ ಪಂಚಾಯಿತಿಗಳು ಪ್ರಗತಿಯನ್ನು ಸಾಧಿಸಬೇಕು. 15ನೇ ಹಣಕಾಸಿನಲ್ಲಿರುವ ಮೊತ್ತವನ್ನು ವಿವಿಧ ಅಭಿವೃದ್ಧಿ ಕೆಲಸಕ್ಕೆ ವಿನಿಯೋಗಿಸಬೇಕು. ಅರಿವು ಕೇಂದ್ರದ ಸಿಬ್ಬಂದಿ ವೇತನವನ್ನು 15ನೇ ಹಣಕಾಸಿನಿಂದ ಮಾಡಲು ಆದೇಶಿಸಿದರು.ರಾಜ್ಯದಲ್ಲಿಯೇ ಕರ ವಸೂಲಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ವಿವಿಧ ಅಭಿಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚೆಚ್ಚು ಪ್ರಗತಿಯನ್ನು ಸಾಧಿಸುವಂತೆ ಸೂಚಿಸಿದರು. ದಾಂಡೇಲಿ ತಾಲೂಕಿನ ಜಾಕ್‌ವೆಲ್ ಕಾಮಗಾರಿ, ಅಂಬೇವಾಡಿಯ ಚೆಸ್ ಪಾರ್ಕ್ ಮತ್ತು ವ್ಯಾಯಾಮ ಶಾಲೆ, ಛತ್ರನಾಳದ ಎಂವಿಎಸ್‌ನಲ್ಲಿ ನಿರ್ಮಾಣವಾದ ಕಟ್ಟಡ, ಬಿ.ಕೆ. ಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿ ಹಾಗೂ ನರೇಗಾ ಯೋಜನೆಯಡಿ ಚಿಬ್ಬಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆಗನಳ್ಳಿ ಗ್ರಾಮದಲ್ಲಿ ನಿರ್ಮಾಣವಾದ ಸ್ಮಶಾನ ಕಾಮಗಾರಿಯನ್ನು ಪ್ರಶಂಶಿಸಿದರು. ಈ ಸಂದರ್ಭದಲ್ಲಿ ತಾಪಂ ಇಒ ಆರ್. ಸತೀಶ್, ದಾಂಡೇಲಿ ತಾಲೂಕು ಇಒ ಎಂ. ಭಾರತಿ, ಹಳಿಯಾಳ- ದಾಂಡೇಲಿ ತಾಲೂಕಿನ ನರೇಗಾ ಸಹಾಯಕ ನಿರ್ದೇಶಕ ಸಂತೋಷ ರಾಥೋಡ, ಅನುಪಮಾ ಬೆನ್ನೂರ, ಎಲ್ಲ ಗ್ರಾಪಂ ಪಿಡಿಒಗಳು, ನರೇಗಾ ಹಾಗೂ ಎನ್‌ಆರ್‌ಎಲ್‌ಎಂ ಸಿಬ್ಬಂದಿ ಹಾಗೂ ತಾಪಂ ಸಿಬ್ಬಂದಿ ಇದ್ದರು.
ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆಕಾರವಾರ: ರಾಜ್ಯದಲ್ಲಿ ಬಾಣಂತಿ ಸರಣಿ ಸಾವನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಬಡ ಬಾಣಂತಿ ಸಾವನ್ನು ಹಗುರವಾಗಿ ಪರಿಗಣಿಸಿದೆ. ಈ ಮೂಲಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದೆ. ಬಾಣಂತಿ, ಮಗು ಸಾವಿಗೆ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೇರ ಹೊಣೆಗಾರರು. ತಕ್ಷಣ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮನವಿ ಸ್ವೀಕರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯಕ, ನಗರ ಮಂಡಳದ ಅಧ್ಯಕ್ಷ ನಾಗೇಶ ಕುರ್ಡೇಕರ, ಗ್ರಾಮೀಣ ಮಂಡಳದ ಅಧ್ಯಕ್ಷ ಸುಭಾಸ್ ಗುನಗಿ, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ ಮುಂತಾದವರು ಇದ್ದರು.