ಸಾರಾಂಶ
- ಕೃಷ್ಣಮೃಗವನ್ನು ಕೊಂದ ತಪ್ಪಿಗೆ ಸಲ್ಮಾನ್ ಖಾನ್‌ರನ್ನು ಕೊಲ್ಲುತ್ತೇನೆಂದು ಬೆದರಿಕೆ ಹಾಕಿದ್ದ ಭಿಕಾರಾಂ
- ಮುಂಬೈನ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳಿಸಿ ಸಲ್ಲುನಿಂದ 5 ಕೋಟಿ ರು. ಕೊಡಿಸುವಂತೆ ಬೇಡಿಕೆ- ಸಂದೇಶ ಬಂದಿದ್ದು ಕರ್ನಾಟಕದಿಂದ ಎಂಬ ಜಾಡು ಹಿಡಿದು ತನಿಖೆ ನಡೆಸಿದ್ದ ಮುಂಬೈನ ವರ್ಲಿ ಪೊಲೀಸರು
- ಹಾವೇರಿಯಲ್ಲಿ ಗ್ರಿಲ್ ಕೆಲಸ ಮಾಡಿಕೊಂಡಿದ್ದ ಆರೋಪಿಯ ಪತ್ತೆಹಚ್ಚಿ ಬಂಧನ------
ಕನ್ನಡಪ್ರಭ ವಾರ್ತೆ ಮುಂಬೈ/ಹಾವೇರಿನಟ ಸಲ್ಮಾನ್ ಖಾನ್‌ಗೆ ಪಾತಕಿ ಲಾರೆನ್ಸ್ ಬಿಷ್ಣೋಯಿ ಸೋದರ ಅನ್ಮೋಲ್ ಬಿಷ್ಣೋಯಿ ಹೆಸರಲ್ಲಿ ಜೀವ ಬೆದರಿಕೆ ಒಡ್ಡಿದ ಜೊತೆಗೆ 5 ಕೋಟಿ ರು.ಗೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಹಾವೇರಿಯಲ್ಲಿ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣವನ್ನು ಬೆನ್ನತ್ತಿದ ಮುಂಬೈನ ವರ್ಲಿ ಪೊಲೀಸರು, ಕರ್ನಾಟಕಕ್ಕೆ ಆಗಮಿಸಿ ಮಂಗಳವಾರ ರಾತ್ರಿ ಹಾವೇರಿಯಲ್ಲಿದ್ದ ಆರೋಪಿ ಭಿಕಾರಾಂ ಜಲರಾಂ ಬಿಷ್ಣೋಯಿಯನ್ನು ಬಂಧಿಸಿದ್ದಾರೆ. ಈತ ರಾಜಸ್ಥಾನದ ಜಾಲೋರ್ ಮೂಲದವ. ಈತನನ್ನು ವಶಕ್ಕೆ ಪಡೆದು ಸ್ಥಳೀಯ ನ್ಯಾಯಾಲಯದ ಅನುಮತಿ ಪಡೆದು ವಿಚಾರಣೆ ಮೇರೆಗೆ ಮುಂಬೈಗೆ ಕರೆದೊಯ್ದಿದ್ದಾರೆ.
ಆರೋಪಿಯು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸೋದರನ ಹೆಸರಿನಲ್ಲಿ ಮುಂಬೈ ಟ್ರಾಫಿಕ್ ಪೊಲೀಸರಿಗೆ ವಾಟ್ಸಪ್‌ನಲ್ಲಿ ಬೆದರಿಕೆ ಹಾಕಿದ್ದ. ‘ಕೃಷ್ಣಮೃಗ ಕೊಂದಿದ್ದಕ್ಕೆ ಬಿಷ್ಣೋಯಿ ಸಮಾಜದ ಕ್ಷಮೆ ಕೇಳು, ಇಲ್ಲವೇ 5 ಕೋಟಿ ರು. ಹಣ ನೀಡು’ ಎಂದು ಸಂದೇಶ ಕಳುಹಿಸಿದ್ದ. ಬಳಿಕ ಸಂದೇಶ ಬಂದಿದ್ದು ಕರ್ನಾಟಕದಿಂದ ಎಂದು ಪೊಲೀಸರಿಗೆ ತನಿಖೆ ವೇಳೆ ಗೊತ್ತಾಗಿತ್ತು.ಕೂಲಿ ಕೆಲಸಕ್ಕೆಂದು ಬಂದಿದ್ದ: ಬಂಧಿತ ಆರೋಪಿ ಭಿಕಾರಾಂ ಒಂದೂವರೆ ತಿಂಗಳ ಹಿಂದೆ ಕೂಲಿಕಾರ್ಮಿಕನಾಗಿ ಹಾವೇರಿ ನಗರಕ್ಕೆ ಬಂದಿದ್ದ. ಇಲ್ಲಿನ ಗೌಡರ ಓಣಿಯಲ್ಲಿ ರೂಮ್‌ವೊಂದರಲ್ಲಿ ಕೂಲಿಕಾರರೊಂದಿಗೆ ವಾಸವಾಗಿದ್ದ. ಗ್ರಿಲ್ ಕೆಲಸ ಮಾಡಿಕೊಂಡಿದ್ದ. ಮುಂಬೈ ಪೊಲೀಸರ ಮಾಹಿತಿ ಆಧಾರದಲ್ಲಿ ಆರೋಪಿಯನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು, ನಂತರ ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೊದಲು ಬೇರೆಡೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.