ಸಾರಾಂಶ
ಸಂತೋಷ ದೈವಜ್ಞ
ಮುಂಡಗೋಡ: ಉದ್ಘಾಟನೆಗೊಂಡು ಆರು ತಿಂಗಳಾದರೂ ಇಲ್ಲಿಯ ಸಾರಿಗೆ ಸಂಸ್ಥೆಯ ಡಿಪೋ ಕಾರ್ಯಾರಂಭ ಮಾಡಿಲ್ಲ.ಸುಮಾರು ₹4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಸ್ ಡಿಪೋಕ್ಕೆ ಡೀಸೆಲ್ ಟ್ಯಾಂಕ್ ಅಳವಡಿಸುವ ಕಾರ್ಯ ಬಾಕಿ ಇದೆ. ಹೀಗಾಗಿ ಗೇಟ್‌ಗೆ ಬೀಗ ಹಾಕಿಡಲಾಗಿದೆ. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸುತ್ತಾರೆ.
ಮುಂಡಗೋಡಿನಲ್ಲಿ ಬಸ್ ಡಿಪೋ ನಿರ್ಮಾಣವಾಗಬೇಕು ಎಂಬುದು ಮೂರು ದಶಕಗಳ ಬೇಡಿಕೆಯಾಗಿತ್ತು. ಅಂತೂ ನಿರ್ಮಾಣವಾಯಿತು. ಉದ್ಘಾಟನೆ ಕೂಡ ಮಾಡಲಾಗಿದೆ. ಇನ್ನೇನು ಬಸ್ ಡಿಪೋ ಕಾರ್ಯಾರಂಭವಾಗಿ ಅಗತ್ಯ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸಲಿದ್ದು, ಬಹುದಿನದ ಕನಸು ನನಸಾಗುತ್ತಿದೆ ಎಂದು ಮುಂಡಗೋಡ ತಾಲೂಕಿನ ಜನತೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಪೂರ್ವದಲ್ಲಿ ಡಿಪೋಗೆ ಬೇಕಾದ ಡೀಸೆಲ್ ಟ್ಯಾಂಕ್ ಹಾಗೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸದೆ ತರಾತುರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟನೆ ಮಾಡಿ ಹೋದರು. ಆ ಬಳಿಕ ಯಾರೂ ಇತ್ತ ಕಣ್ಣೆತ್ತಿ ನೋಡುವವರೇ ಇಲ್ಲದಂತಾಯಿತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸುವ ಮುನ್ನವೇ ಡಿಪೋ ಉದ್ಘಾಟಿಸಲಾಯಿತೇ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.ಚುನಾವಣೆ ಗಿಮಿಕ್?: ಮುಂಡಗೋಡಲ್ಲಿ ಸಾರಿಗೆ ಬಸ್‌ಗೆ ಸಂಬಂಧಪಟ್ಟು ಏನೇ ಸಮಸ್ಯೆಯಾದರೂ ಅಕ್ಕಪಕ್ಕದ ತಾಲೂಕಿನ ಬಸ್ ಡಿಪೋ ಅವಲಂಬಿಸಬೇಕಿದೆ. ಅಕ್ಕಪಕ್ಕದ ತಾಲೂಕುಗಳಲ್ಲಿ ಬಸ್ ಡಿಪೋ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಂಡಗೋಡದಲ್ಲಿ ಬಸ್ ಡಿಪೋ ನಿರ್ಮಾಣ ವಿಳಂಬವಾಗಿದೆ ಎಂಬುದು ಸ್ಥಳೀಯರ ಆಕ್ಷೇಪ. ಅಂತೂ ಇಂತು ಇದೀಗ ಬಸ್ ಡಿಪೋ ಆಯಿತು ಎಂದುಕೊಂಡ ಜನರಿಗೆ ಅನನುಕೂಲ ತಪ್ಪುತ್ತಿಲ್ಲ.
ಸಾರಿಗೆ ಸಂಸ್ಥೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬಸ್ ಡಿಪೋಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ, ಶೀಘ್ರದಲ್ಲಿ ಕಾರ್ಯಾರಂಭ ಮಾಡಬೇಕು ಎಂಬುದು ತಾಲೂಕಿನ ಜನರ ಆಗ್ರಹವಾಗಿದೆ.ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ತೈಲ ಕಂಪನಿಗೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಡೀಸೆಲ್ ಟ್ಯಾಂಕ್ ಅಳವಡಿಸಿಕೊಡಲಿದ್ದು, ಸದ್ಯದಲ್ಲಿಯೇ ಡಿಪೋ ಕಾರ್ಯಾರಂಭ ಮಾಡಲಿದೆ ಎಂದು ಶಿರಸಿ ವಿಭಾಗ ಕೆಎಸ್‌ಆರ್‌ಟಿಸಿ ನಿಯಂತ್ರಾಣಾಧಿಕಾರಿ (ಡಿಸಿ) ಶ್ರೀನಿವಾಸ ಹೇಳಿದರು.ಬಸ್ ಡಿಪೋ ಕಟ್ಟಡ ನಿರ್ಮಾಣ ಮಾಡಿ ಹೀಗೆ ಬಿಡುವುದಾದರೆ ತರಾತುರಿಯಲ್ಲಿ ಏಕೆ ಉದ್ಘಾಟನೆ ಮಾಡಬೇಕಿತ್ತು? ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ಸಂಪರ್ಕವಿಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಶೀಘ್ರದಲ್ಲಿ ಡಿಪೋ ಆರಂಭಿಸಬೇಕು ಎಂದು ಸಾಮಾಜಿಕ ಯುವ ಧುರೀಣ ಮಲ್ಲಿಕಾರ್ಜುನ ಗೌಳಿ ಹೇಳಿದರು.