ಸಾರಾಂಶ
ಸಂತೋಷ ದೈವಜ್ಞ
ಮುಂಡಗೋಡ: ಭಾವೈಕ್ಯತೆಗೆ ಹೆಸರಾಗಿರುವ ತಾಲೂಕಿನಲ್ಲಿ ಏಸು ಕ್ರಿಸ್ತನ ಜನ್ಮದಿನದ ಅಂಗವಾಗಿ ಆಚರಿಸಲ್ಪಡುವ ಕ್ರಿಶ್ಚಿಯನ್ ಸಮುದಾಯದ ಪವಿತ್ರ ಹಬ್ಬ ಕ್ರಿಸ್‌ಮಸ್‌ಗೆ ಸಕಲ ಸಿದ್ಧತೆ ಜೋರಾಗಿದ್ದು, ಸಂಭ್ರಮ ಎಲ್ಲೆಡೆ ಕಂಡುಬರುತ್ತಿದೆ.ಚರ್ಚ್ ಹಾಗೂ ಕ್ರಿಶ್ಚಿಯನ್ ಸಮುದಾಯದವರ ಮನೆಗಳು ದೀಪಾಲಂಕಾರದಿಂದ ಸಿಂಗರಿಸಿಕೊಂಡು ಕಂಗೊಳಿಸುತ್ತಿವೆ. ಕೊಂಕಣಿ ಮಾತನಾಡುವ ಕ್ಯಾಥೋಲಿಕ್, ಮಲಯಾಳಿ ಭಾಷಿಕ ಕ್ರಿಶ್ಚಿಯನ್ ಹಾಗೂ ತಮಿಳು ಭಾಷಿಕ ಕ್ರಿಶ್ಚಿಯನ್ ಸೇರಿದಂತೆ ಕ್ಯಾಥೋಲಿಕ್, ಮಾರ್ಥೋಮಾ, ಇಮ್ಯಾನ್ಯುಯಲ್ ಹೀಗೆ ಹಲವು ಪಂಗಡಗಳ ಸಾವಿರಾರು ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಜನಾಂಗ ಮುಂಡಗೋಡದಲ್ಲಿ ನೆಲೆಸಿದೆ.
ತಾಲೂಕಿನ ಮೈನಳ್ಳಿ, ಕೆಂದಲಗೇರಿ, ಉಗ್ಗಿನಕೇರಿ ಮುಂತಾದ ಭಾಗದ ಅರಣ್ಯವಾಸಿ ಸಿದ್ದಿ ಜನಾಂಗದಲ್ಲಿಯೂ ಬಹುತೇಕ ಕ್ರಿಶ್ಚಿಯನ್ ಧರ್ಮಪಾಲಕರಿದ್ದಾರೆ. ಅವರಿಗೂ ಕ್ರಿಸ್‌ಮಸ್ ದೊಡ್ಡ ಹಬ್ಬವಾಗಿದೆ. ಕ್ರಿಶ್ಚಿಯನ್ ಮಾತ್ರವಲ್ಲದೇ ಏಸುವಿನ ಅನುಯಾಯಿಗಳಾದ ಇತರೆ ಧರ್ಮಿಯರು ಕ್ರಿಸ್‌ಮಸ್ ಆಚರಣೆ ಮಾಡುವುದು ವಿಶೇಷವಾಗಿದೆ.ಪಟ್ಟಣ ಸೇರಿದಂತೆ ಮಳಗಿ, ಮೈನಳ್ಳಿ, ಇಂದೂರ, ಕೊಪ್ಪ, ಶಾಂತಿನಗರ, ಅರಶಿಣಗೇರಿ, ಕರಗೊಳ್ಳಿ ಗ್ರಾಮ ಹೀಗೆ ತಾಲೂಕಿನಲ್ಲಿ ಹತ್ತಾರು ಚರ್ಚ್‌ಗಳಿವೆ. ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಅಂಗವಾಗಿ ಕ್ರೈಸ್ತ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.ಸಾಂತಾಕ್ಲಾಸ್ ವೇಷ ಧರಿಸಿ ಹಾಡು ನೃತ್ಯದ ಮೂಲಕ ಕ್ರಿಶ್ಚಿಯನ್ ಸಮುದಾಯದವರಿಗೆ ಏಸುವಿನ ಸಂದೇಶಗಳ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ. ಪಟ್ಟಣದ ಲೊಯೋಲಾ ವಿಕಾಸ ಕೇಂದ್ರ ಸೇರಿದಂತೆ ವಿವಿಧ ಚರ್ಚ್ ಆವರಣಗಳಲ್ಲಿ ಏಸು ಹಾಗೂ ಸೆಂಟ್ ಮೇರಿ ರೂಪ ಉಳ್ಳ ಗೊಂಬೆಗಳ ಗೋದಳಿ ನಿರ್ಮಾಣ ಮಾಡಲಾಗಿದೆ. ಕ್ರಿಸ್‌ಮಸ್ ಗಿಡಗಳಿಗೆ ದೀಪಾಲಂಕಾರ ಮಾಡಲಾಗಿದೆ. ಕ್ರೈಸ್ತರ ಮನೆಗಳಲ್ಲಿ ಗೋದಳಿಗಳನ್ನು ನಿರ್ಮಿಸಿ ಕೇಕ್ ಕತ್ತರಿಸುವ ಮೂಲಕ ಯೇಸುವಿನ ಜನ್ಮದಿನ ಆಚರಣೆ ಮಾಡಲು ಭರದ ಸಿದ್ಧತೆ ನಡೆಸಲಾಗಿದೆ.ಡಿ. ೨೫ರಂದು ಕ್ರಿಸ್‌ಮಸ್ ಗೀತೆ ಹೇಳಿ ಸಿಹಿ ತಿಂಡಿ, ತಯಾರಿಸಿ ನೆರೆಹೊರೆಯವರಿಗೆ ಹಂಚುವ ಮೂಲಕ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಔತಣಕೂಟ ನೀಡಿ ಆತಿಥ್ಯ ಸತ್ಕಾರ ಮಾಡಲಾಗುತ್ತದೆ.
ಸುಖ, ಶಾಂತಿ, ನೆಮ್ಮದಿ: ಸರ್ವಜನಾಂಗಕ್ಕೆ ಸುಖ, ಶಾಂತಿ, ನೆಮ್ಮದಿ, ಪ್ರೇಮ ಮತ್ತು ವಿಶ್ವಾಸದಿಂದ ಜೀವಿಸುವುದನ್ನು ತಿಳಿಸುವುದು ಕ್ರಿಸ್‌ಮಸ್ ಹಬ್ಬದ ಉದ್ದೇಶವಾಗಿದೆ. ಪ್ರತಿಯೊಬ್ಬರ ಸ್ವಭಾವದಲ್ಲಿ ಬದಲಾವಣೆ ತರುವ ಹಾಗೂ ಏಸು ಕ್ರಿಸ್ತನ ಆದರ್ಶವನ್ನು ಪಾಲಿಸುವುದು ನಮ್ಮ ಧ್ಯೇಯವಾಗಬೇಕು ಎಂದು ಸಮಾಜ ಸೇವಕ ಜಿನ್ಸನ್ ಪುಲ್ಲೂರ ತಿಳಿಸಿದರು.