ಒಂದು ವೇಳೆ ಆರ್.ಎಲ್. ಪೊಲೀಸಪಾಟೀಲ ಅವರ ಸರ್ವಾಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಿದ್ದೇಯಾದರೆ ಜ. 28ರಂದು ಮುಂಡರಗಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.

ಮುಂಡರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯನ್ನು ಕಾನೂನುಬಾಹಿರವಾಗಿ ಮಾಡಲಾಗಿದೆ ಎಂದು ಆರೋಪಿಸಿ ಜ. 28ರಂದು ಮುಂಡರಗಿ ಬಂದ್ ಕರೆ ನೀಡಲಾಗುವುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯರ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡ ಎಚ್.ಡಿ. ಪೂಜಾರ ಮಾತನಾಡಿ, ಈ ಹಿಂದೆ ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವಾಗ ವಿಶ್ರಾಂತ ಉಪನ್ಯಾಸಕ ಎ.ವೈ. ನವಲಗುಂದ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಅಂದಿನ ಕಸಾಪ ತಾಲೂಕು ಅಧ್ಯಕ್ಷರಾಗಿದ್ದ ಕೆ.ಎ. ಹಿರೇಮಠ ಆಯ್ಕೆ ಮಾಡಿದ್ದರು. ಆದರೆ ಆ ಕಾರ್ಯಕ್ರಮ ಕಾರಣಾಂತರದಿಂದ ನಡೆಯಲಿಲ್ಲ. ಈಗಿನ ಕಸಾಪ ತಾಲೂಕು ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಆ ನಿರ್ಣಯವನ್ನು ಗಾಳಿಗೆ ತೂರಿ ಆರ್.ಎಲ್. ಪೊಲೀಸಪಾಟೀಲ ಎನ್ನುವವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಜ. 28ಕ್ಕೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ನಿರ್ಧರಿಸಿರುವುದು ಖಂಡನೀಯ.

ಒಂದು ವೇಳೆ ಆರ್.ಎಲ್. ಪೊಲೀಸಪಾಟೀಲ ಅವರ ಸರ್ವಾಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಿದ್ದೇಯಾದರೆ ಜ. 28ರಂದು ಮುಂಡರಗಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.ಕಾರ್ಯಕಾರಿಣಿ ಸಮಿತಿಯಲ್ಲಿ ಜಾತಿಯತೆ ಎದ್ದು ಕಾಣುತ್ತಿದೆ. ಎಸ್‌ಸಿ, ಎಸ್‌ಟಿ ಜನಾಂಗದ ಒಬ್ಬ ಪ್ರತಿನಿಧಿಯನ್ನು ನೇಮಿಸಿಲ್ಲ. ಕಸಾಪಕ್ಕೆ ಅಧ್ಯಕ್ಷರು ಮೋಸ ಮಾಡಿದ್ದಾರೆ ಎಂದರು.

ಅಜೀವ ಸದಸ್ಯ ಬಸವರಾಜ ನವಲಗುಂದ ಮಾತನಾಡಿ, ಜ. 28ರಂದು ಕೋಟೆ ಹನುಮಂತ ದೇವಸ್ಥಾನದಿಂದ ಪ್ರತಿಭಟನಾ ರ್‍ಯಾಲಿಯನ್ನು ಹೊರಡಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಜ. 17ರಂದು ಈ ಕುರಿತು ಅಂಚೆ ಕಚೇರಿಯ ಮುಂದೆ ಅಂಚೆ ಪತ್ರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಪರಶುರಾಮ ಮುಕ್ಕಣ್ಣವರ, ಎ.ವೈ. ನವಲಗುಂದ, ಬಿ.ವಿ. ಮುದ್ದಿ, ದೇವಪ್ಪ ರಾಮೇನಹಳ್ಳಿ, ವೈ.ಎಚ್. ಬಚನಳ್ಳಿ, ಎಸ್.ಎಸ್. ಗಡ್ಡದ, ಪಾಲಾಕ್ಷಿ ಗಣದಿನ್ನಿ, ಎಸ್.ಎಂ. ಅಗಡಿ, ಬಿ.ಜಿ. ಬನ್ನಿಕೊಪ್ಪ, ವೆಂಕಟೇಶ ಗುಗ್ಗರಿ, ಗಣೇಶ ಭರಮಕ್ಕನವರ, ವೆಂಕಟೇಶ ಗುಗ್ಗರಿ, ಸುಭಾಸಚಂದ್ರ ಪೂಜಾರ, ಮುತ್ತು ಬಳ್ಳಾರಿ, ಉಮೇಶ ಕಲಾಲ, ಎಚ್.ಎನ್. ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.