ಸಾರಾಂಶ
ಮುಂಡರಗಿ ಬಸ್ ನಿಲ್ದಾಣದಲ್ಲಿ ಶನಿವಾರ ೫-೬ ಜನ ಮಕ್ಕಳು ಭಿಕ್ಷಾಟನೆ ಕಾರ್ಯದಲ್ಲಿ ತೊಡಗಿದ್ದಾರೆಂದು ಸಾರ್ವಜನಿಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸ್ಥಳಕ್ಕೆ ಆಗಮಿಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ರಕ್ಷಣೆ ಮಾಡುವ ಮೂಲಕ ಅವರ ಪಾಲಕರಿಗೆ ಒಪ್ಪಿಸಿದ್ದಾರೆ.
ಮುಂಡರಗಿ: ಇಲ್ಲಿಯ ಬಸ್ ನಿಲ್ದಾಣದಲ್ಲಿ ಶನಿವಾರ ೫-೬ ಜನ ಮಕ್ಕಳು ಭಿಕ್ಷಾಟನೆ ಕಾರ್ಯದಲ್ಲಿ ತೊಡಗಿದ್ದಾರೆಂದು ಸಾರ್ವಜನಿಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸ್ಥಳಕ್ಕೆ ಆಗಮಿಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ರಕ್ಷಣೆ ಮಾಡುವ ಮೂಲಕ ಅವರ ಪಾಲಕರಿಗೆ ಒಪ್ಪಿಸಿದ್ದಾರೆ.
ಈ ವೇಳೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ಸಾರ್ವಜನಿಕರೊಬ್ಬರ ದೂರಿನ ಅನ್ವಯ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ಹಿಡಿದು ವಿಚಾರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಇದೇ ಬಸ್ ನಿಲ್ದಾಣದಲ್ಲಿ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದ ಮಕ್ಕಳ ಪಾಲಕರು ತಕ್ಷಣವೇ ಧಾವಿಸಿ ಬಂದು ತಮ್ಮ ಮಕ್ಕಳನ್ನು ಬಿಟ್ಟು ಬಿಡುವಂತೆ ಒತ್ತಾಯಿಸಿದರು. ಈ ರೀತಿ ಮತ್ತೊಂದು ಬಾರಿ ಭಿಕ್ಷಾಟನೆ ಕಾರ್ಯದಲ್ಲಿ ತೊಡಗಿಸದಂತೆ ಎಚ್ಚರಿಕೆ ನೀಡಿ ಮತ್ತೊಂದು ಬಾರಿ ಅವರು ಭಿಕ್ಷಾಟನೆ ಕಾರ್ಯದಲ್ಲಿ ತೊಡಗಿದ್ದು ಕಂಡು ಬಂದಲ್ಲಿ ಅಂತವರನ್ನು ಕಾನೂನು ಪ್ರಕಾರ ಬಂಧಿಸಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಳಿಸಿಕೊಡಲಾಗುವುದೆಂದು ಎಚ್ಚರಿಕೆ ನೀಡುವ ಮೂಲಕ ೬ ಜನ ಮಕ್ಕಳನ್ನು ಪಾಲಕರ ಜೊತೆಗೆ ಕಳುಹಿಸಿ ಕೊಡಲಾಯಿತು ಎಂದರು.ಬಾಲ್ಯದಲ್ಲಿ ಮಕ್ಕಳನ್ನು ಈ ರೀತಿ ಹಾಳು ಮಾಡಬೇಡಿ. ನಮ್ಮ ಇಲಾಖೆಗೆ ಬನ್ನಿ, ನಿಮ್ಮ ಮಕ್ಕಳಿಗೆ ವಸತಿ ನಿಲಯದಲ್ಲಿ ಪ್ರವೇಶ ಕೊಡಿಸಲಾಗುತ್ತೆ, ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿ ಮಾಡಿರಿ. ಭಿಕ್ಷಾಟನೆ ಎನ್ನುವುದು ನಮ್ಮ ನಾಡಿಗೆ ಕಳಂಕ ತರುವ ಕಾರ್ಯವಾಗಿದ್ದು, ಅದರಲ್ಲೂ ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸಿದವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ, ಮಕ್ಕಳನ್ನು ಅವರೊಂದಿಗೆ ಕಳುಹಿಸಿ ಕೊಡಲಾಯಿತು ಎಂದು ತಿಳಿಸಿದರು.