೧೦೦ ದಿನದ ಬಳಿಕ ಪುರಸಭೆ ಅಧ್ಯಕ್ಷ ರಾಜೀನಾಮೆ

| Published : Dec 17 2024, 12:46 AM IST

ಸಾರಾಂಶ

ಪುರಸಭೆ ಅಧ್ಯಕ್ಷ ಕಿರಣ್‌ ಗೌಡ ಸೋಮವಾರ ಬೆಳ್ಳಂ ಬೆಳಗ್ಗೆಯೇ ಮೈಸೂರು ಬಳಿಯ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಕಚೇರಿಗೆ ಧಾವಿಸಿ ರಾಜೀನಾಮೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪುರಸಭೆ ಅಧ್ಯಕ್ಷರಾಗಿ ನೂರು ದಿನಗಳ ಅಧಿಕಾರ ಪೂರೈಸಿದ ಕಿರಣ್‌ ಗೌಡ ,ಉಪಾಧ್ಯಕ್ಷೆ ಹೀನಾ ಕೌಸರ್‌ ರಾಜೀನಾಮೆ ಸಲ್ಲಿಸಿದ್ದಾರೆ.

ಪುರಸಭೆ ಅಧ್ಯಕ್ಷ ಕಿರಣ್‌ ಗೌಡ ಸೋಮವಾರ ಬೆಳ್ಳಂ ಬೆಳಗ್ಗೆಯೇ ಮೈಸೂರು ಬಳಿಯ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಕಚೇರಿಗೆ ಧಾವಿಸಿ ರಾಜೀನಾಮೆ ಸಲ್ಲಿಸಿದ್ದಾರೆ.

ಪುರಸಭೆ ಉಪಾಧ್ಯಕ್ಷೆ ಹೀನಾ ಕೌಸರ್‌ ಕೂಡ ಕೊಳ್ಳೇಗಾಲ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿ ಬಂದಿದ್ದಾರೆ.

ಪುರಸಭೆ ಅಧ್ಯಕ್ಷ ಕಿರಣ್‌ ಗೌಡ ಕನ್ನಡಪ್ರಭದೊಂದಿಗೆ ಮಾತನಾಡಿ, ನಾನು ಪುರಸಭೆ ಅಧ್ಯಕ್ಷನಾಗಿ ನೂರು ದಿನಗಳ ಕಾಲ ಅಧಿಕಾರ ನಡೆಸಿದ್ದೇನೆ. ಶಾಸಕರು ನುಡಿದಂತೆ ನಡೆದುಕೊಂಡು ಅಧ್ಯಕ್ಷ ಸ್ಥಾನ ನೀಡಿದ್ದರು. ನಾನು ಕೂಡ ಕೊಟ್ಟ ಮಾತಿನಂತೆ ರಾಜೀನಾಮೆ ನೀಡಿದ್ದೇನೆ ಎಂದರು.

ನನ್ನ ರಾಜಕೀಯ ಭವಿಷ್ಯ ಹಾಗೂ ಶಾಸಕರ ನಂಬಿಕೆಯ ಮೇಲೆ ಶಾಸಕರ ಸೂಚನೆ ಮೇರೆಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ನನ್ನ ಅಧ್ಯಕ್ಷನನ್ನಾಗಿ ಮಾಡಿದ ಶಾಸಕರು,ಪುರಸಭೆ ಸದಸ್ಯರು, ಪಕ್ಷದ ಮುಖಂಡರಿಗೆ ಧನ್ಯವಾದ ಎಂದರು.

ನುಡಿದಂತೆ ನಡೆದ ಅಧ್ಯಕ್ಷ, ಉಪಾಧ್ಯಕ್ಷೆ

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿ ಕಸಿದುಕೊಳ್ಳಲು ಪಕ್ಷಾಂತರ ಮಾಡಿದ್ದ ಅಧ್ಯಕ್ಷ ಕಿರಣ್‌ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್‌ಗೆ ಕಾಂಗ್ರೆಸ್‌ನಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಒಲಿದಿತ್ತು. ಕೊಟ್ಟ ಮಾತಿನಂತೆ ಅಧ್ಯಕ್ಷ, ಉಪಾಧ್ಯಕ್ಷರು ರಾಜೀನಾಮೆ ಸಲ್ಲಿಸಿ ಮಾದರಿಯಾಗಿದ್ದಾರೆ.

ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್‌ ಬಿಜೆಪಿಯಿಂದ ಬಂದು ಕಾಂಗ್ರೆಸ್‌ನಲ್ಲಿ ಅಧಿಕಾರ ಪಡೆದುಕೊಂಡರು. ಅಧ್ಯಕ್ಷ, ಉಪಾಧ್ಯಕ್ಷರ ಜೊತೆ ಬಿಜೆಪಿ ಸದಸ್ಯರಾದ ರಮೇಶ್‌, ವೀಣಾ ಮಂಜುನಾಥ್‌, ರಾಣಿ ಲಕ್ಷ್ಮೀ ದೇವಿ ಕೂಡ ಗೈರಾಗುವ ಮೂಲಕ ಕಾಂಗ್ರೆಸ್‌ಗೆ ಬೆಂಬಲಿಸಿದ್ದನ್ನು ಸ್ಮರಿಸಬಹುದು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರ ಬಳಿ ಆದ ಒಪ್ಪಂದದಂತೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಬ್ಬರೂ ಕೊಟ್ಟ ಮಾತಿನಂತೆ ರಾಜೀನಾಮೆ ನೀಡಿದ್ದಾರೆ.

ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಮಧು,ದೀಪು ಪೈಪೋಟಿ:

ಬಿಜೆಪಿ ತೆಕ್ಕೆಯಲ್ಲಿದ್ದ ಪುರಸಭೆ ಆಡಳಿತ ಕಿತ್ತುಕೊಂಡಿದ್ದ ಕಾಂಗ್ರೆಸ್‌ಗೆ ಈಗ ಮತ್ತೊಮ್ಮೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಎದುರಾಗಲಿದ್ದು, ಮುಂದಿನ ಅಧ್ಯಕ್ಷರಾರು ಎಂಬ ಪ್ರಶ್ನೆ ಉಂಟಾಗಿದೆ. ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್‌ ರಾಜೀನಾಮೆಯಿಂದ ತೆರವಾಗುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮತ್ತೆ ಪೈಪೋಟಿ ಬರಲಿದೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮಧುಸೂದನ್‌ ಹೆಸರು ಮೊದಲೇ ಕೇಳಿ ಬಂದಿತ್ತು. ಆದರೆ ಅಧ್ಯಕ್ಷ ಸ್ಥಾನ ಕಿರಣ್‌ ಗೌಡರ ಪಾಲಾಗಿತ್ತು. ಇದೀಗ ಪಕ್ಷೇತರ ಸದಸ್ಯ ಪಿ.ಶಶಿಧರ್‌ ದೀಪು ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಕಾಂಗ್ರೆಸ್‌ ಬೆಂಬಲಿಸಿ ಗಣೇಶ್‌ ಪ್ರಸಾದ್‌ರ ಗರಡಿಗೆ ಮರಳಿದ್ದಾರೆ.

ಇದೀಗ ಅಧ್ಯಕ್ಷ ಸ್ಥಾನಕ್ಕೆ ಉಳಿದ ಅವಧಿಗೆ ಮಧುಸೂದನ್‌ ಹಾಗೂ ಪಿ.ಶಶಿಧರ್‌ ದೀಪು ಆಸೆ ಇಟ್ಟು ಕೊಂಡಿರುವುದಂತೂ ಸತ್ಯ. ಮುಂದಿನ ಅಧ್ಯಕ್ಷರಾಗೋರು ಯಾರು ಎಂಬುದು ಮಾತ್ರ ಶಾಸಕರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.