ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸಲಾದ ಫುಟ್‌ಪಾತ್‌ಗಳು ಅನಧಿಕೃತ ಅಂಗಡಿಗಳು, ಶೆಡ್‌ಗಳು ಹಾಗೂ ಬೀದಿ ವ್ಯಾಪಾರಿಗಳಿಂದ ಸಂಪೂರ್ಣವಾಗಿ ಆಕ್ರಮಣಕ್ಕೊಳಗಾಗಿರುವ ಹಿನ್ನೆಲೆಯಲ್ಲಿ, ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಘಟಕವು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.ಘಟಕದ ಅಧ್ಯಕ್ಷ ಶ್ರೀಶೈಲ ಮಾತನಾಡಿ, ಪಾದಚಾರಿಗಳ ಮಾರ್ಗ ಮತ್ತು ಪಾರ್ಕಿಂಗ್ ಸ್ಥಳಗಳನ್ನು ಅನಧಿಕೃತವಾಗಿ ಅಂಗಡಿಗಳು ಆಕ್ರಮಿಸಿಕೊಂಡಿದ್ದು, ಹಲವಾರು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರಿಗಾಗಿ ಮೀಸಲಿಟ್ಟ ಸ್ಥಳಗಳನ್ನು ವ್ಯಾಪಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಶಾಶ್ವತ ಶೆಡ್‌ಗಳ ನಿರ್ಮಾಣದಿಂದ ವಯೋವೃದ್ಧರು, ಮಹಿಳೆಯರು, ಮಕ್ಕಳು ಹಾಗೂ ವಿಕಲಚೇತನರು ಸುರಕ್ಷಿತವಾಗಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.ಪಾದಚಾರಿಗಳು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೈಗಾಡಿಗಳ ಹಾವಳಿಯೂ ಹೆಚ್ಚಾಗಿದೆ. ಪ್ರತ್ಯೇಕ ಮಾರುಕಟ್ಟೆ ಇದ್ದರೂ ತರಕಾರಿ, ಹಣ್ಣು ಹಾಗೂ ಹೂವಿನ ವ್ಯಾಪಾರಿಗಳು ಬೀದಿ ಬದಿ ಸ್ಥಳಗಳನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಸ್ಥಳೀಯ ಆಡಳಿತವು ತಕ್ಷಣ ಜಂಟಿ ಕಾರ್ಯಾಚರಣೆ ನಡೆಸಿ ಅತಿಕ್ರಮಣ ತೆರವುಗೊಳಿಸಬೇಕು. ಬೀದಿ ಬದಿ ಆಹಾರ ವ್ಯಾಪಾರಿಗಳಿಗೆ ಪ್ರತ್ಯೇಕ ಫುಡ್‌ಕೋರ್ಟ್ ವ್ಯವಸ್ಥೆ ಕಲ್ಪಿಸುವ ಬೇಡಿಕೆ ಹಲವು ವರ್ಷಗಳಿಂದ ಇದೆ. ಸಂತೆಮೈದಾನದಲ್ಲಿನ ವಾಣಿಜ್ಯ ಸಂಕೀರ್ಣಕ್ಕೆ ಹಳೆಯ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಿ, ಆ ಪ್ರದೇಶದಲ್ಲಿ ಫುಡ್‌ಕೋರ್ಟ್ ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದರು. ಘಟಕದ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಸಾರ್ವಜನಿಕರಿಗಾಗಿ ಮೀಸಲಾದ ಸ್ಥಳದ ದುರುಪಯೋಗ ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದರೆ ಸಾರ್ವಜನಿಕ ಹಿತಾಸಕ್ತಿಗಾಗಿ ಕಾನೂನು ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ದರ್ಶನ್, ಕೃಷ್ಣಪ್ಪ, ನಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ಪೌರಾಯುಕ್ತ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ನಗರದಲ್ಲಿ ಅತಿಕ್ರಮಣದ ಬಗ್ಗೆ ಈಗಾಗಲೇ ದೂರುಗಳು ಬಂದಿದ್ದು, ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.