ವಿವಿಧ ಬೇಡಿಕೆ ಈಡೇರಿಕೆಗಾಗಿ ಪಾಲಿಕೆ ನೌಕರರ ಪ್ರತಿಭಟನೆ

| Published : Jul 09 2025, 12:18 AM IST

ಸಾರಾಂಶ

ಮಹಾನಗರ ಪಾಲಿಕೆ ನೌಕರರು ಮಂಗಳವಾರ ಕರ್ತವ್ಯಕ್ಕೆ ಸಾಮೂಹಿಕ ಗೈರಾಗುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಿದರು. ನೌಕರರ ಮುಷ್ಕರ ಪರಿಣಾಮ ಪಾಲಿಕೆ ಅಕ್ಷರಶಃ ಸ್ತಬ್ಧವಾಗಿತ್ತು. ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಮುಷ್ಕರ ನಿರತರು ಬೆಳಗ್ಗೆ ಪಾಲಿಕೆ ಆವರಣದಲ್ಲಿ ಸೇರಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹುಬ್ಬಳ್ಳಿ: ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಪಾಲಿಕೆ ನೌಕರರ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಹುಬ್ಬಳ್ಳಿಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇಲ್ಲಿನ ಮಹಾನಗರ ಪಾಲಿಕೆ ನೌಕರರು ಮಂಗಳವಾರ ಕರ್ತವ್ಯಕ್ಕೆ ಸಾಮೂಹಿಕ ಗೈರಾಗುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಿದರು. ನೌಕರರ ಮುಷ್ಕರ ಪರಿಣಾಮ ಪಾಲಿಕೆ ಅಕ್ಷರಶಃ ಸ್ತಬ್ಧವಾಗಿತ್ತು. ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಮುಷ್ಕರ ನಿರತರು ಬೆಳಗ್ಗೆ ಪಾಲಿಕೆ ಆವರಣದಲ್ಲಿ ಸೇರಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

7ನೇ ವೇತನ ಆಯೋಗ ಸೌಲಭ್ಯವನ್ನು ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗೂ ವಿಸ್ತರಿಸಬೇಕು. ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರಬೇಕು. ಸರ್ಕಾರಿ ನೌಕರರ ಮಾದರಿಯಲ್ಲಿ ಪಾಲಿಕೆ ಸಿಬ್ಬಂದಿಗೆ ಆರೋಗ್ಯ ಜ್ಯೋತಿ, ಆರೋಗ್ಯ ಸಂಜೀವಿನಿ ಜಾರಿ, ನೌಕರರಿಗೆ ವೃಂದವಾರು ಮುಂಬಡ್ತಿ ನೀಡಬೇಕು. ರಾಜ್ಯ ಸರ್ಕಾರಿ ನೌಕರರ ಮಾದರಿಯಲ್ಲಿ ಪಾಲಿಕೆ ನೌಕರರಿಗೂ ಪ್ರತಿ ವರ್ಷ ಕ್ರೀಡಾಕೂಟ ಆಯೋಜಿಸಬೇಕು, ಕೆಜಿಐಡಿ, ಜಿಪಿಎಸ್ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಚಿಟಗುಪ್ಪಿ ಆಸ್ಪತ್ರೆ ಬಂದ್‌: 10 ಮಹಾನಗರ ಪಾಲಿಕೆ ವ್ಯಾಪ್ತಿಯ ಪಾಲಿಕೆ ನೌಕರರ ಮುಷ್ಕರ ಕರೆ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಯನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಯಿತು. ಬೆಳಗ್ಗೆ 10ರ ವೇಳೆಗೆ ವೈದ್ಯರು ಎಂದಿನಂತೆ ತಪಾಸಣೆ ಕೈಗೊಂಡಿದ್ದರು. ರೋಗಿಗಳು ಓಪಿಡಿಯಲ್ಲಿ ಹೆಸರು ನೋಂದಣಿ ಮಾಡಿ ತಪಾಸಣೆಗೆಂದು ಸರದಿಯಲ್ಲಿ ಕಾದಿದ್ದರು. ಏಕಾಏಕಿ 10.30ರ ವೇಳೆಗೆ ಪಾಲಿಕೆ ವ್ಯಾಪ್ತಿಯ ನೌಕರರ ಮುಷ್ಕರವಿದೆ. ಹೀಗಾಗಿ, ಇಂದು ತಪಾಸಣೆ ನಡೆಸುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ರೋಗಿಗಳನ್ನು ವಾಪಸ್‌ ಕಳುಹಿಸಿದರು.

ಹೆಸರು ನೋಂದಣಿ ಮಾಡಿಕೊಂಡವರ ತಪಾಸಣೆ ನಡೆಸಿ ಆಸ್ಪತ್ರೆ ಬಂದ್ ಮಾಡಿದರು. ತಪಾಸಣೆಗೆಂದು ಬಂದಿದ್ದ ಹಲವರು ಮುಷ್ಕರದಿಂದ ಪರದಾಡುವಂತಾಯಿತು. ವೈದ್ಯರು ಮಹಾನಗರ ಪಾಲಿಕೆ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಹೋಗಿ ಬೆಂಬಲ ಸೂಚಿಸಿದರು.

ಬೇಡಿಕೆಗಳ ಮನವಿಯನ್ನು ಪೊಲೀಸ್ ಇನ್ಸಪೆಕ್ಟರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಅಶೋಕ ಎಂ. ಹಲಗಿ, ಪಿ.ಬಿ. ಶಿವಳ್ಳಿ, ಸಿ.ಎಂ. ಬೆಳದಡಿ, ಸಿ.ಎಸ್. ಜಾಬಿನ, ಕೆ.ಪಿ. ಜಾಧವ, ಈರಣ್ಣ ಹಣಜಿ, ಸಿದ್ದು ಬಿ. ವಾಲಿಕಾರ, ಬಸವರಾಜ ಗುಡಿಹಾಳ, ಡಾ. ಶ್ರೀಧರ ದಂಡಪ್ಪನವರ, ಶಿವಾನಂದ ರಾಮಯ್ಯನವರ, ರಮೇಶ ಬಿ. ಪಾಲಿಮ, ವಿಜಯಕುಮಾರ ಸಾಳುಂಕೆ, ಜ್ಯೋತಿ ಪರ್ವತಿ, ಮಂಜುಳಾ ನಾಟೇಕರ, ದೀಪಿಕಾ ಆರ್., ಮತ್ತಿತರರು ಪಾಲ್ಗೊಂಡಿದ್ದರು.