ಪಾಲಿಕೆ ಸದಸ್ಯೆ ಕಲಕುಂಟ್ಲಾ ಸೇರಿ 11 ಜನರಿಗೆ ಜೈಲು

| Published : Apr 11 2025, 12:34 AM IST

ಸಾರಾಂಶ

ಮನೆಗೆ ನುಗ್ಗಿದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಗುಂಪು ಕಟ್ಟಿಕೊಂಡು ಕೈಯಲ್ಲಿ ಮಾರಕಾಸ್ತ್ರ ಹಿಡಿದ ದ್ವೀಚಕ್ರ ವಾಹನದಲ್ಲಿ ಬಂದಿದ್ದಲ್ಲದೇ ಬೀದಿದೀಪಗಳನ್ನು ಒಡೆದು ಹಾಕಿದ್ದರು

ಹುಬ್ಬಳ್ಳಿ: ಇಲ್ಲಿನ ಗಾಂಧಿವಾಡದಲ್ಲಿ ಹಳೇದ್ವೇಷದ ಹಿನ್ನೆಲೆ ಶಂಷಾದ್ ಮನೋಹರ್ ಮುನಗೇಟಿ ಎಂಬುವರು ಸೇರಿದಂತೆ ೧೦ ಜನರ ಮನೆಗಳಿಗೆ ನುಗ್ಗಿ ಕೊಲೆಗೆ ಯತ್ನಿಸುವ ಜತೆಗೆ ಸಾರ್ವಜನಿಕ ಆಸ್ತಿ ಹಾನಿ ಮಾಡಿದ ಆರೋಪದಡಿ ಹು-ಧಾ ಮಹಾನಗರ ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲಾ ಸೇರಿದಂತೆ 11 ಜನರಿಗೆ ಇಲ್ಲಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಲಾ 3 ವರ್ಷ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

ಕೇಶ್ವಾಪುರ ಸಾಗರ ಕಾಲನಿಯ ಲಾಜರಸ್ ಲುಂಜಾಲ್, ಡೇವಿಡ್ ಲುಂಜಾಲ್, ಕ್ಲೆೈಮಂತ್ ಜಂಗಮ್, ಸ್ಯಾಮನ್ಸ್ ಲುಂಜಾಲ್, ಶಶಿಧರ ರಾಥೋಡ್, ಸುಶಾ ಸುಸೆರಾಜ್, ಸುವರ್ಣ ಕಲಕುಂಟ್ಲ್, ಮರಿಯಮ್ಮ ಲುಂಜಾಲ್, ನಿರ್ಮಲಾ ಜಂಗಮ್, ಯೋಗರಾಜ್ ಪೂಜಾರ್, ರಾಜು ಆರ್ಯ ಶಿಕ್ಷೆಗೆ ಗುರಿಯಾದವರು. ಪ್ರಕರಣದ 14 ಜನ ಆರೋಪಿಗಳ ಪೈಕಿ 5ನೇ ಆರೋಪಿ ಆಗಿರುವ ಅಬ್ರಾಂ ಲುಂಜಾಲ್ ಹಾಗೂ 7ನೇ ಆರೋಪಿ ಶ್ರೀಧರ್ ರಾಥೋಡ್ ಮೃತಪಟ್ಟಿದ್ದು, 8ನೇ ಆರೋಪಿ ಶಬ್ಬಿ ಶೇಖ್ ತಲೆಮರಿಸಿಕೊಂಡಿದ್ದಾರೆ. ಈ ಮೂವರ ಮೇಲಿನ ವಿಚಾರಣೆ ಬಾಕಿ ಇರಿಸಿದ ಕೋರ್ಟ್ 11 ಜನರಿಗೆ ಶಿಕ್ಷೆ ವಿಧಿಸಿದೆ.

ಪ್ರಕರಣದ ಹಿನ್ನೆಲೆ?:ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿವಾಡದಲ್ಲಿ ಹಳೇದ್ವೇಷ ಇಟ್ಟುಕೊಂಡ ಆರೋಪಿಗಳು 2010ರ ಆಗಸ್ಟ್‌ 21ರಂದು ಶಂಷಾದ್, ಸಾಕ್ಷಿದಾರರಾದ ರೀನಾ,ರುತ್, ಸ್ಯಾಮುವೆಲ್, ಪ್ರವೀಣಕುಮಾರ, ಚಂದ್ರಕಲಾ, ದಿವ್ಯಾಕುರಿ, ದೇವಕುಮಾರಿ, ಜಾಸ್ಮೀನ್, ದೇವರ್ ಎಂಬುವವರ ಮನೆಗೆ ನುಗ್ಗಿದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಗುಂಪು ಕಟ್ಟಿಕೊಂಡು ಕೈಯಲ್ಲಿ ಮಾರಕಾಸ್ತ್ರ ಹಿಡಿದ ದ್ವೀಚಕ್ರ ವಾಹನದಲ್ಲಿ ಬಂದಿದ್ದಲ್ಲದೇ ಬೀದಿದೀಪಗಳನ್ನು ಒಡೆದು ಹಾಕಿದ್ದರು.

ಈ ಕುರಿತಂತೆ ಕೇಶ್ವಾಪುರ ಪೊಲೀಸರು ಎಫ್‌ಐಆರ್ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ.ಬಿ. ತೀರ್ಪು ಪ್ರಕಟಿಸಿದ್ದು, ಎಲ್ಲರಿಗೂ 3 ವರ್ಷ ಶಿಕ್ಷೆ ವಿಧಿಸಿದ್ದಾರೆ. ಜತೆಗೆ 11 ಜನರಿಗೆ ಒಟ್ಟು ₹2.86ಲಕ್ಷ ದಂಡ ವಿಧಿಸಲಾಗಿದ್ದು, ಈ ಪೈಕಿ ₹2.75 ಲಕ್ಷ ಗಾಯಾಳುಗಳಿಗೆ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.

ಸರ್ಕಾರದ ಪರವಾಗಿ ಗಿರಿಜಾ ತಮ್ಮಿನಾಳ ಭಾಗಶಃ ಸಾಕ್ಷಿ ವಿಚಾರಣೆ ಮಾಡಿಸಿದ್ದು, ಪ್ರಸ್ತುತ ಸರ್ಕಾರಿ ಅಭಿಯೋಜಕರಾಗಿರುವ ಬಿ.ವಿ.ಪಾಟೀಲ್ ವಾದ ಮಂಡಿಸಿದ್ದರು.