ಪಾಲಿಕೆ ಸಿಬ್ಬಂದಿಗಳ ಪ್ರತಿಭಟನೆ ಎರಡನೆಯ ದಿನಕ್ಕೆ

| Published : Jul 10 2025, 12:45 AM IST

ಸಾರಾಂಶ

ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೌಕರರು, ಶೀಘ್ರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಪಾಲಿಕೆಯ ಮುಖ್ಯ ಕಚೇರಿ ಸೇರಿದಂತೆ ಎಲ್ಲ ವಲಯ ಕಚೇರಿಗಳಿಗೂ ಬೀಗ ಹಾಕಲಾಗಿತ್ತು. ಇದರಿಂದಾಗಿ ವಿವಿಧ ಕೆಲಸಗಳಿಗಾಗಿ ಪಾಲಿಕೆ ಕಚೇರಿಗೆ ಬಂದ ಸಾರ್ವಜನಿಕರು ಪರದಾಡಬೇಕಾಯಿತು.

ಹುಬ್ಬಳ್ಳಿ: ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಪಾಲಿಕೆ ನೌಕರರ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಹುಬ್ಬಳ್ಳಿಯಲ್ಲಿ ಎರಡನೇ ದಿನವೂ ಬೆಂಬಲ ವ್ಯಕ್ತವಾಗಿದೆ. ಇಲ್ಲಿನ ಮಹಾನಗರ ಪಾಲಿಕೆ ನೌಕರರು ಬುಧವಾರ ಕರ್ತವ್ಯಕ್ಕೆ ಸಾಮೂಹಿಕ ಗೈರಾಗುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಿದರು.

ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೌಕರರು, ಶೀಘ್ರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಪಾಲಿಕೆಯ ಮುಖ್ಯ ಕಚೇರಿ ಸೇರಿದಂತೆ ಎಲ್ಲ ವಲಯ ಕಚೇರಿಗಳಿಗೂ ಬೀಗ ಹಾಕಲಾಗಿತ್ತು. ಇದರಿಂದಾಗಿ ವಿವಿಧ ಕೆಲಸಗಳಿಗಾಗಿ ಪಾಲಿಕೆ ಕಚೇರಿಗೆ ಬಂದ ಸಾರ್ವಜನಿಕರು ಪರದಾಡಬೇಕಾಯಿತು.

ಪಾಲಿಕೆಯ ಕಾಯಂ ಪೌರಕಾರ್ಮಿಕರು ಸೇರಿದಂತೆ ಎಲ್ಲ ನೌಕರರಿಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಸಬೇಕು. ಪಾಲಿಕೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತಂದು ಕರಡು ಮಸೂದೆ ಪ್ರಕಟಿಸಬೇಕು. ವೃಂದವಾರು ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಗೌರವಾಧ್ಯಕ್ಷ ರಮೇಶ ಪಾಲಿಮ, ಕೆ.ಪಿ. ಜಾಧವ, ಯಲ್ಲಪ್ಪ ಯರಗುಂಟಿ, ಮಂಜುಳಾ ನಾಟೇಕರ, ದೀಪಿಕಾ ಆರ್‌, ವಿದ್ಯಾ ಪಾಟೀಲ, ಮಂಜುನಾಥ ನರಗುಂದ, ಪಿ.ಬಿ. ಶಿವಳ್ಳಿ, ಸಿ.ಎಂ. ಬೆಳದಡಿ, ಸಿ.ಎಸ್. ಜಾಬಿನ, ಈರಣ್ಣ ಹಣಜಿ, ಸಿದ್ದು ಬಿ. ವಾಲಿಕಾರ, ಬಸವರಾಜ ಗುಡಿಹಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.