ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಇಂದು ವಿಚಾರಣೆ

| Published : Mar 05 2025, 12:30 AM IST

ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಇಂದು ವಿಚಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ- ಬೆಟಗೇರಿ ನಗರಸಭೆಯ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಕುರಿತ ಪ್ರಕರಣದ ವಿಚಾರಣೆ ಬುಧವಾರ (ಮಾ. 5) ಧಾರವಾಡ ಹೈಕೋರ್ಟಿನಲ್ಲಿ ನಡೆಯಲಿದ್ದು, ಭಾರೀ ಕುತೂಹಲ ಕೆರಳಿಸಿದೆ.

ಗದಗ: ಗದಗ- ಬೆಟಗೇರಿ ನಗರಸಭೆಯ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಕುರಿತ ಪ್ರಕರಣದ ವಿಚಾರಣೆ ಬುಧವಾರ (ಮಾ. 5) ಧಾರವಾಡ ಹೈಕೋರ್ಟಿನಲ್ಲಿ ನಡೆಯಲಿದ್ದು, ಭಾರೀ ಕುತೂಹಲ ಕೆರಳಿಸಿದೆ.

ಪೂರ್ವನಿಗದಿಯಂತೆ ಫೆ. 28ರಂದು ಚುನಾವಣೆ ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗಿತ್ತು. ಆದರೆ, ನೂತನ ಅಧ್ಯಕ್ಷ, ಉಪಾಧ್ಯಕ್ಷರು ಅಧಿಕೃತ ಎಂದು ಮುದ್ರೆ ಬೀಳುವ ಪ್ರಕ್ರಿಯೆಗೆ ನ್ಯಾಯಾಲಯ ತಡೆ ನೀಡಿತ್ತು. ಈಗ ಅದರ ವಿಚಾರಣೆ ನಡೆಯಲಿದೆ. ಚುನಾವಣೆಗೂ ಮುನ್ನ ಸಾಕಷ್ಟು ರಾಜಕೀಯ ಮೇಲಾಟ, ಕಾನೂನು ಹೋರಾಟಗಳು ನಡೆದಿದ್ದವು. ಈಗ ಮತ್ತೊಂದು ಸುತ್ತಿನ ಹೋರಾಟ ಆರಂಭವಾಗಿದ್ದು, ಎಲ್ಲರ ಚಿತ್ತ ಹೈಕೋರ್ಟಿನತ್ತ ನೆಟ್ಟಿದೆ.

ವಕಾರ ಗದ್ದಲ: ನಗರಸಭೆಯ ನೂರಾರು ಕೋಟಿ ಮೌಲ್ಯದ ವಕಾರಗಳ ಲೀಜ್ ಅವಧಿ ವಿಸ್ತರಣೆ ವಿಷಯದಲ್ಲಿ ನಕಲಿ ಠರಾವು ಸೃಷ್ಟಿಸಿ, ಅದಕ್ಕೆ ಅಂದು ಪ್ರಭಾರ ಪೌರಾಯುಕ್ತರಾಗಿದ್ದ ಪ್ರಶಾಂತ ವರಗಪ್ಪನವರ ಸಹಿ ಫೋರ್ಜರಿ ಮಾಡಿದ ಆರೋಪ ಬಿಜೆಪಿಯ ನಗರಸಭಾ ಸದಸ್ಯರಾದ ಉಷಾ ದಾಸರ, ಅನಿಲ್‌ ಅಬ್ಬಿಗೇರಿ ಹಾಗೂ ಗೂಳಪ್ಪ ಮುಶಿಗೇರಿ ಅವರ ಮೇಲಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತರು ಈ ಮೂವರ ಸದಸ್ಯತ್ವ ರದ್ದುಗೊಳಿಸಿ ಫೆ. 27ರಂದು ಆದೇಶಿಸಿದ್ದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಫೆ. 28ರಂದೇ ಇದ್ದ ಕಾರಣ ಈ ಆದೇಶ ಬಿಜೆಪಿ ಸದಸ್ಯರಿಗೆ ನಿರಾಸೆ ತರಿಸಿತ್ತು. ಆದರೂ, ಛಲ ಬಿಡದೆ ಫೆ. 28ರಂದು ಬೆಳಗ್ಗೆಯೇ ಧಾರಾವಾಡ ಹೈಕೋರ್ಟ್‌ ಪೀಠದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡುವಂತೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಮಾರ್ಚ್‌ 5ರ ವರೆಗೆ ಚುನಾವಣೆ ನಡೆಸದಂತೆ ಆದೇಶ ನೀಡಿತ್ತು. ಆದರೆ, ಚುನಾವಣಾಧಿಕಾರಿ ಗಂಗಪ್ಪ ಎಂ. ಅವರು, ಕೋರ್ಟ್‌ ನೀಡಿದ ಆದೇಶ ಪ್ರತಿ ಚುನಾವಣಾ ಪೂರ್ವದಲ್ಲಿ ಸಿಕ್ಕಿಲ್ಲ ಎಂದು ಹೇಳಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ, ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆ ಘೋಷಣೆ ಮಾಡಿದ್ದರು.

ಈ ವಿಚಾರಣೆಯ ವೇಳೆ ಕೋರ್ಟ್‌ ಯಾವುದೇ ತೀರ್ಪು ನೀಡಿದರೂ ಅದು ಮೇಲ್ಮನವಿಗೆ ಹೋಗುವ ಎಲ್ಲ ಸಾಧ್ಯತೆಗಳಿವೆ. ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ರೋಸ್ಟರ್ ಪಾಲನೆಯಾಗಿಲ್ಲ ಎಂದು ಕೆಲವು ಕಾಂಗ್ರೆಸ್ ಸದಸ್ಯರು ನ್ಯಾಯಾಲಯದ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆ ಆರೇಳು ತಿಂಗಳು ಕಾಲ ನಡೆದಿತ್ತು. ಈಗ ಚುನಾವಣೆ ಪ್ರಕ್ರಿಯೆ ಹೀಗೆ ನಗರಸಭೆಯ ಬಹುತೇಕ ಅವಧಿ ನ್ಯಾಯಾಲಯದಲ್ಲಿಯೇ ಕೆಳೆದು ಹೋಗಿದ್ದು, ಅವಳಿ ನಗರದ ಅಭಿವೃದ್ಧಿ ಸ್ಥಗಿತಗೊಂಡಿದ್ದು, ಬೇಸಿಗೆ ಪೂರ್ವದಲ್ಲಿಯೇ ಸಾರ್ವಜನಿಕರು ಹತ್ತಾರು ಸಮಸ್ಯೆಗಳಿಂದ ಬಳಲುತ್ತಿದ್ದು ಇದನ್ನು ಕೇಳುವವರೇ ಇಲ್ಲದಂತಾಗಿದೆ.